ಶೂನ್ಯ ಹಾಜರಾತಿಯಿದ್ದ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೃತ ಶಿಕ್ಷಕರಿಗೆ ಸರ್ಕಾರಿ ಅಧಿಕಾರಿಗಳು ಶೋಕಾಸ್ ನೋಟಿಸ್ ನೀಡಿದ ಮತ್ತು ಉತ್ತರಿಸಲು ಮೂರು ದಿನಗಳ ಗಡುವು ನೀಡಿದ ಘಟನೆ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ.
2023ರ ಏಪ್ರಿಲ್‌ನಲ್ಲಿ ದೇವತಾ ದೀನ್ ಕೋಲ್, 2025ರ ಫೆಬ್ರವರಿ 13ರಂದು ರಾಮಗರೀಬ್ ದೀಪಂಕರ್ ಮತ್ತು 2025ರ ಮೇ ತಿಂಗಳಲ್ಲಿ ಚೋಟೆಲಾಲ್ ಸಾಕೇತ್ ನಿಧನರಾಗಿದ್ದಾರೆ. ಆದರೆ ಸರ್ಕಾರಿ ಅಧಿಕಾರಿಗಳು ಈ ಮೂವರು ಶಿಕ್ಷಕರ ಹಾಜರಾತಿಯನ್ನು 2025ರ ಅಕ್ಟೋಬರ್‌ನಲ್ಲಿ ಪರಿಶೀಲಿಸಿದ್ದು ಮೂವರ ಮನೆಗೆ ‘ಶೂನ್ಯ ಹಾಜರಾತಿ’ಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಕಳುಹಿಸಿದ್ದಾರೆ. ಹಾಗೆಯೇ ಉತ್ತರ ನೀಡದಿದ್ದರೆ ವೇತನ ಕಡಿತ ಮಾಡಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಏರ್ ಇಂಡಿಯಾಕ್ಕೆ ಶೋಕಾಸ್ ನೋಟಿಸ್ ಜಾರಿ
ಹೊಸದಾಗಿ ಪರಿಚಯಿಸಲಾದ ಇ-ಹಾಜರಾತಿ ವ್ಯವಸ್ಥೆಯ ಅಡಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್ ನೀಡಿದ್ದಾರೆ. ಉತ್ತರ ಪ್ರದೇಶದ ರೇವಾ ಮತ್ತು ಮೌಗಂಜ್ ಜಿಲ್ಲೆಗಳಲ್ಲಿ 1,500ಕ್ಕೂ ಅಧಿಕ ಶಿಕ್ಷಕರಿಗೆ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಸರಿಯಾಗಿ ಹಾಜರಾತಿಯನ್ನು ಹಾಕದ ಕಾರಣಕ್ಕೆ ನೋಟಿಸ್‌ಗಳು ಬಂದಿವೆ. ಆದರೆ ವರ್ಷಾನುಗಟ್ಟಲೆ ಹಾಜರಾತಿ ಹಾಕದ, ವೇತನವನ್ನು ಪಡೆಯದ ಮೃತ ಶಿಕ್ಷಕರಿಗೂ ನೋಟಿಸ್ ನೀಡಿರುವುದು ಈ ವ್ಯವಸ್ಥೆಯಲ್ಲಿರುವ ಸಮಸ್ಯೆಯನ್ನು ಬಹಿರಂಗಪಡಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳು ಸಂಪರ್ಕಿಸಿದಾಗ ರೇವಾ ಜಿಲ್ಲಾ ಶಿಕ್ಷಣ ಅಧಿಕಾರಿ ರಾಮ್ ರಾಜ್ ಮಿಶ್ರಾ ಈ ಲೋಪವನ್ನು ಒಪ್ಪಿಕೊಂಡಿದ್ದು ಶಾಲಾ ಅಧಿಕಾರಿಗಳ ಮೇಲೆ ಹೊಣೆ ಹೊರೆಸಿದ್ದಾರೆ. “ಶಿಕ್ಷಕರ ವಿವರಗಳನ್ನು ಹೊಂದಿರುವ ವಿಶೇಷ ಪೋರ್ಟಲ್‌ನಿಂದ ಪಡೆದ ಶಿಕ್ಷಕರ ಡೇಟಾವನ್ನು ಆಧರಿಸಿ ನೋಟಿಸ್‌ಗಳನ್ನು ನೀಡಲಾಗಿದೆ. ಶಾಲೆಗಳ ಪ್ರಾಂಶುಪಾಲರು ಸರಿಯಾಗಿ ಮಾಹಿತಿ ನೀಡದ ಕಾರಣ ಈ ಲೋಪ ಸಂಭವಿಸಿದೆ. ಇಂತಹ ಪ್ರಕರಣಗಳು ಬಹಳ ಕಡಿಮೆ. ಡೇಟಾ ಅಪ್‌ಡೇಟ್ ಪ್ರಕ್ರಿಯೆ ನಡೆಸಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದಾರೆ.





