ತಾವು ತಮ್ಮೂರಿನಿಂದ ಶಾಲೆಗೆ ಹೋಗಲು ಸರಿಯಾದ ರಸ್ತೆ ಇಲ್ಲದ ಕಾರಣ, ಉತ್ತಮ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಹೊಂಡದಲ್ಲಿ ಕುಳಿತು ಪ್ರತಿಭಟನೆ ನಡೆಸಿರುವ ಘಟನೆ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ರಾಯಪಾಲಂ, ಮುನುಪುರೈ, ಚಪ್ಪನಿಗಡ್ಡ, ವಿಪ್ಪಮನುವಲ ಮತ್ತು ಪಲ್ಲಪುದುಂಗಡ ಗ್ರಾಮಗಳ ಬುಡಕಟ್ಟು ವಿದ್ಯಾರ್ಥಿಗಳು ಆಂಧ್ರ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಛಾಯಾಚಿತ್ರಗಳನ್ನು ಕುತ್ತಿಗೆಗೆ ನೇತುಹಾಕಿಕೊಂಡು ಪ್ರತಿಭಟನೆ ನಡೆಸಿದ್ದಾರೆ. “ನಾವು ಪ್ರತಿದಿನ ಶಾಲೆಗೆ ಹೋಗಲು ಗುಡ್ಡಗಾಡು ಪ್ರದೇಶದ ಮೂಲಕ ಸುಮಾರು 12 ಕಿಲೋಮೀಟರ್ ಪ್ರಯಾಣಿಸುತ್ತಿದ್ದೇವೆ. ದಯವಿಟ್ಟು ನಮಗಾಗಿ ರಸ್ತೆ ನಿರ್ಮಿಸಿಕೊಡಿ. ನಾವು ಶಿಕ್ಷಣ ಪಡೆಯಬೇಕು” ಎಂದು ಒತ್ತಾಯಿಸಿದ್ದಾರೆ.
ಶಿಕ್ಷಣ ಪಡೆಯಲು ಶಾಲೆಗಳಿಗೆ ತೆರಳಲು ಅಡೆತಡೆಯಿಲ್ಲದ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ, 10 ವರ್ಷದ ಬಾಲಕಿಯೊಬ್ಬಳು ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ 5ನೇ ತರಗತಿಯ ವಿದ್ಯಾರ್ಥಿನಿ ಸುರಭಿ ಯಾದವ್ ತನ್ನ ಶಾಲಾ ವ್ಯಾನ್ ಬರದ ಕಾರಣ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರು. ಸುಮಾರು ಮೂರು ಗಂಟೆಗಳ ಕಾಲ ಆಕೆ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ್ದಳು. ಆಕೆ ತನ್ನ ಶಾಲೆಯನ್ನು ತಲುಪಲು ಪ್ರತಿದಿನ ಸುಮಾರು 18 ಕಿಲೋಮೀಟರ್ ಪ್ರಯಾಣಿಸುತ್ತಿದ್ದರು. ಆದರೆ, ಆಕೆಯ ಪೋಷಕರು ಸಾರಿಗೆ ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ, ಶಾಲಾ ಆಡಳಿತವು ಸುರಭಿಗೆ ವ್ಯಾನ್ ಸೌಲಭ್ಯವನ್ನು ಸ್ಥಗಿತಗೊಳಿಸಿತ್ತು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಅರುಣಾಚಲ ಪ್ರದೇಶದ ಪಕ್ಕೆ ಕೆಸಾಂಗ್ ಜಿಲ್ಲೆಯ ಶಾಲೆಯೊಂದರ ಕನಿಷ್ಠ 90 ವಿದ್ಯಾರ್ಥಿಗಳು ತಮ್ಮ ಸಂಸ್ಥೆಯಲ್ಲಿ ಶಿಕ್ಷಕರ ತೀವ್ರ ಕೊರತೆಯನ್ನು ಎತ್ತಿ ತೋರಿಸಲು 65 ಕಿಲೋಮೀಟರ್ ಮೆರವಣಿಗೆ ನಡೆಸಿದ್ದರು.




