ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ಭೂ ಮಾಫಿಯಾ ದಬ್ಬಾಳಿಕೆಗೆ ತುತ್ತಾದ ಇಬ್ಬರು ಆದಿವಾಸಿ ಮಹಿಳೆಯರು, ನ್ಯಾಯ ಕೋರಿ ತಹಸೀಲ್ದಾರ್ ಅವರ ಕಾಲಿಗೆ ಬಿದ್ದ ಘಟನೆ ನಡೆದಿದೆ.
ಶಿವಪುರಿ ಜಿಲ್ಲೆಯ ಕರಹಾಲ್ ಬ್ಲಾಕ್‌ನ ಖಿರ್ಖಿರಿ ಗ್ರಾಮದ ಸಾವಿತ್ರಿ ಬಾಯಿ ಹಾಗೂ ಅವರ ಸೊಸೆ, ತಮ್ಮ ಪೂರ್ವಜರ ಭೂಮಿಯನ್ನು ಮರಳಿ ಪಡೆಯಲು ತಹಸೀಲ್ದಾರ್ ರೋಶ್ನಿ ಶೇಖ್ ಅವರ ಕಾಲಿಗೆ ಬಿದ್ದು ಕಣ್ಣೀರಿಟ್ಟರು. ” ಏನಾದರೂ ಮಾಡಿ, ಇಲ್ಲದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ” ಎಂದು ನೋವನ್ನು ತೋಡಿಕೊಂಡರು.
ಕರಹಾಲ್ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಈ ಹೃದಯವಿದ್ರಾವಕ ಘಟನೆ, ಆದಿವಾಸಿ ಸಮುದಾಯದ ಮೇಲಿನ ದಬ್ಬಾಳಿಕೆಯ ಆಳವನ್ನು ಬಿಚ್ಚಿಟ್ಟಿದೆ. ಸಾವಿತ್ರಿ ಬಾಯಿ ಅವರು ತಮ್ಮ ಸೊಸೆಯೊಂದಿಗೆ ಮತ್ತೊಮ್ಮೆ ದೂರು ಸಲ್ಲಿಸಲು ಬಂದಿದ್ದರು. ತಹಸೀಲ್ದಾರ್ ಕಚೇರಿ ಬಿಟ್ಟು ಹೊರಡುತ್ತಿದ್ದ ವೇಳೆ, ಮೆಟ್ಟಿಲುಗಳ ಮಧ್ಯೆಯೇ ಇಬ್ಬರು ಮಹಿಳೆಯರು ಅವರ ಕಾಲಿಗೆ ಬಿದ್ದು ಅಳತೊಡಗಿದರು.
ಗ್ರಾಮದ ಪ್ರಭಾವಿ ವ್ಯಕ್ತಿಗಳು ಹಾಗೂ ಭೂ ಮಾಫಿಯಾ ಒಡೆಯರು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದ ನಮ್ಮ ಮನೆಯನ್ನು ಧ್ವಂಸ ಮಾಡಿ ಅಲ್ಲಿಯೇ ಕಟ್ಟಡ ನಿರ್ಮಿಸಿದ್ದಾರೆ. ಪೊಲೀಸ್ ಠಾಣೆ ಮತ್ತು ತಹಸೀಲ್ದಾರ್ ಕಚೇರಿಗೆ ಹಲವು ಬಾರಿ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ʼವಂದೇ ಮಾತರಂ’ವಿವಾದ; ಪರಿವಾರ- ಪ್ರಧಾನಿ ಪೋಣಿಸಿದ ಸುಳ್ಳುಗಳ ಬೊಂತೆ
ಮಹಿಳೆಯರ ನೋವನ್ನು ಆಲಿಸಿದ ತಹಸೀಲ್ದಾರ್ ರೋಶ್ನಿ ಶೇಖ್ ಅವರು ಮೆಟ್ಟಿಲ ಮೇಲೆ ಕುಳಿತು ಅವರ ಮಾತುಗಳನ್ನು ಆಲಿಸಿದರು. “ನಾನೇ ಖುದ್ದಾಗಿ ತನಿಖೆ ನಡೆಸುತ್ತೇನೆ. ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ, ಕಟ್ಟಡವನ್ನು ತಕ್ಷಣವೇ ಖಾಲಿ ಮಾಡಿಸುತ್ತೇನೆ” ಎಂದು ಭರವಸೆ ನೀಡಿದರು. ಅಧಿಕಾರಿಗಳಿಗೆ ತಕ್ಷಣದ ಕ್ರಮಕ್ಕೆ ಸೂಚನೆ ನೀಡಿದರು.
ಕರಹಾಲ್ ಆದಿವಾಸಿ ಬ್ಲಾಕ್‌ನಲ್ಲಿ ನಡೆದ ಘಟನೆ ಮಾಮೂಲಿ ಘಟನೆಯಲ್ಲ. ಹಲವು ಆದಿವಾಸಿ ಕುಟುಂಬಗಳು ವರ್ಷಗಳಿಂದ ಭೂ ಕಬಳಿಕೆಯಿಂದ ಬಳಲುತ್ತಿವೆ. ಅಧಿಕಾರಿಗಳು ಮತ್ತು ರಾಜಕೀಯದ ಬೆಂಬಲದಿಂದ ಭೂಮಾಫಿಯಾ ದೌರ್ಜನ್ಯ ನಡೆಸುತ್ತಿದೆ.
ಬಲಹೀನ ಆದಿವಾಸಿ ಜನತೆ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. “ಈ ಘಟನೆ ಕೇವಲ ಒಂದು ಕುಟುಂಬದ ನೋವಲ್ಲ, ಇಡೀ ಸಮುದಾಯದ ರೋದನೆ” ಎಂದು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





