ಅಹ್ಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ತನ್ನ ಮೇಲೆ ಟಿಟಿಇ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಯುವತಿಯೊಬ್ಬರು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಗೋರಕ್‌ಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಪೊಲೀಸರು ದೇವರಿಯಾ ರೈಲ್ವೇ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಸಂತ್ರಸ್ತ ಯುವತಿ ಉತ್ತರ ಪ್ರದೇಶದ ಮೌ ಜಿಲ್ಲೆಯವರಾಗಿದ್ದು, ಗೋರಖ್‌ಪುರದಲ್ಲಿ ವಾಸಿಸುತ್ತಿದ್ದಾರೆ. ಅವರು ಸೇನಾ ನೇಮಕಾತಿಗಾಗಿ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ತನ್ನ ಮೇಲೆ ಟಿಟಿಇ ರಾಹುಲ್ ಕುಮಾರ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಯುವತಿ ಆರೋಪಿಸಿದ್ದಾರೆ.
ಪೊಲೀಸರಿಗೆ ದೂರು ನೀಡಿರುವ ಯುವತಿ, “ತಾನು ಇಂದ್ರಾದಿಂದ ಗೋರಕ್‌ಪುರಕ್ಕೆ ಅಹ್ಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ರಾತ್ರಿ ಪ್ರಯಾಣಿಸುತ್ತಿದೆ. ಈ ವೇಳೆ, ರೈಲು ದೇವರಿಯಾ ಪ್ರದೇಶದಲ್ಲಿ ಸಂಚರಿಸುತ್ತಿದ್ದಾಗ, ಟಿಟಿಇ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
“ರೈಲು ನಿಲ್ದಾಣದಲ್ಲಿ ಭಾರೀ ಜನಸಂದಣಿಯಿದ್ದ ಕಾರಣ ನನಗೆ ಟಿಕೆಟ್ ಖರೀದಿಸಲು ಸಾಧ್ಯವಾಗಲಿಲ್ಲ. ಟಿಕೆಟ್ ಪರಿಶೀಲನೆಗೆಂದು ಬಂದ ಟಿಟಿಇ, ಟಿಕೆಟ್ ವಿಚಾರವಾಗಿ ನನ್ನನ್ನು ಪ್ರಶ್ನಿಸಿದರು. ಬಳಿಕ ದಂಡವನ್ನು ಪಡೆದು ಸೀಟ್ ವ್ಯವಸ್ಥೆ ಮಾಡಿಕೊಡುವುದಾಗಿ ಎಸಿ ಫಸ್ಟ್ ಕ್ಲಾಸ್ ಕೋಚ್‌ನ ಕ್ಯಾಬಿನ್‌ಗೆ ಕರೆದೊಯ್ದರು. ಅಲ್ಲಿ, ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದರು. ಘಟನೆ ಬಗ್ಗೆ ಬಹಿರಂಗಪಡಿಸಿದರೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದರು” ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.




