ಖಾಸಗಿ ಬಸ್ ಒಂದಕ್ಕೆ ವಿದ್ಯುತ್ ತಂತಿ ತಗುಲಿ ಬಸ್ ಬೆಂಕಿಗಾಹುತಿಯಾಗಿ ಇಬ್ಬರು ಸಜೀವವಾಗಿ ದಹನಗೊಂಡ ಘಟನೆ ಜೈಪುರದ ಮನೋಹರ್‌ಪುರದಲ್ಲಿ ಮಂಗಳವಾರ ನಡೆದಿದೆ. ಈ ದುರ್ಘಟನೆಯಲ್ಲಿ 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮನೋಹರ್‌ಪುರದ ಟೋಡಿ ಗ್ರಾಮದಲ್ಲಿರುವ ಇಟ್ಟಿಗೆ ತಯಾರಿಕಾ ಘಟಕಕ್ಕೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಬಸ್‌ಗೆ ಸುಮಾರು 11,000 ವೋಲ್ಟ್ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತಗುಲಿದ್ದು, ಬಸ್ ಬೆಂಕಿಗಾಹುತಿಯಾಗಿದೆ ಎಂದು ಜೈಪುರ (ಗ್ರಾಮೀಣ) ಪೊಲೀಸ್ ವರಿಷ್ಠಾಧಿಕಾರಿ ರಾಶಿ ದೋಗ್ರಾ ದುಡಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕರ್ನೂಲ್ ಬಸ್ ದುರಂತ: ಬೆಂಕಿ ತೀವ್ರತೆಗೆ ಕಾರಣವಾದವೇ 234 ಸ್ಮಾರ್ಟ್‌ಫೋನ್‌ಗಳು?
ಈ ಅವಘಡದ ಬಗ್ಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ದುಃಖ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಪ್ರಶ್ನಿಸಿದ್ದಾರೆ. “ಜೈಪುರದ ಮನೋಹರ್‌ಪುರದಲ್ಲಿ ಕಾರ್ಮಿಕರನ್ನು ಕರೆಯೊಯ್ಯುತ್ತಿದ್ದ ಬಸ್‌ಗೆ ಬೆಂಕಿ ತಗುಲಿ ಇಬ್ಬರು ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಅಂತ್ಯಂತ ದುಃಖಕರವಾಗಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗೆಯೇ, “ರಾಜಸ್ಥಾನದಲ್ಲಿ ಪದೇ ಪದೇ ಇಂತಹ ಅಪಘಾತ ಘಟನೆಗಳು ನಡೆಯುತ್ತಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿರುವುದು ಕಳವಳಕಾರಿ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ” ಎಂದೂ ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಹೈದರಾಬಾದ್‌ನಿಂದ ಬೆಂಗಳೂರಿನೆಡೆ ಸಾಗುತ್ತಿದ್ದ ವಿ. ಕಾವೇರಿ ಟ್ರಾವೆಲಸ್ ಬಸ್ ಬೆಂಕಿಗಾಹುತಿಯಾಗಿದ್ದು, 20 ಮಂದಿ ಸಜೀವ ದಹನಗೊಂಡಿದ್ದಾರೆ. ಕುಡಿದು ವಾಹನ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇನ್ನು ಗಾಬರಿಗೊಂಡು ಸ್ಥಳದಿಂದ ಪರಾರಿಯಾಗಿದ್ದ ಬಸ್ ಚಾಲಕ ಮಿರಿಯಾಲ ಲಕ್ಷ್ಮಯ್ಯ ಹಾಗೂ ಸಹ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ತೆಲಂಗಾಣ ಸಾರಿಗೆ ಇಲಾಖೆ ಅಧಿಕಾರಿಗಳು ಸುರಕ್ಷತಾ ಮಾನದಂಡಗಳನ್ನು ಪಾಲಿಸದ ಖಾಸಗಿ ಬಸ್‌ಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದಾರೆ. ದುರಂತ ನಡೆದ ಮರುದಿನವೇ(ಅ.25) ಈ ಕಾರ್ಯಾಚರಣೆ ಆರಂಭಿಸಿದ್ದು, ಸುರಕ್ಷತೆ ಮಾನದಂಡಗಳು ಕಾಪಾಡಿಕೊಳ್ಳದವರ ವಿರುದ್ಧ 14 ಪ್ರಕರಣಗಳನ್ನು ದಾಖಲಿಸಿ ಸುಮಾರು 46 ಸಾವಿರ ರೂಪಾಯಿ ದಂಡವನ್ನು ವಿಧಿಸಿದ್ದಾರೆ.





