ಮದುವೆ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದಾಗ ಅಚಾನಕ್ ಅಗಿ ಗುಂಡು ತಗುಲಿ ಇಬ್ಬರು ಬಾಲಕರು ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ಉತ್ತರ ಪ್ರದೇಶದ ಎಟಾ ಜಿಲ್ಲೆಯ ಉಮೈ ಅಸದ್‌ನಗರ ಗ್ರಾಮದಲ್ಲಿ ನಡೆದಿದೆ.
ಮದುವೆ ಕಾರ್ಯಕ್ರಮದಲ್ಲಿ ನೃತ್ಯ ನಡೆಯುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಸಿದೆ. ಗುಂಡು ತಗುಲಿ ಹನ್ನೆರಡು ವರ್ಷದ ಸುಹೈಲ್ ಸ್ಥಳದಲ್ಲೇ ಸಾವನ್ನಪ್ಪಿದರೆ, 17 ವರ್ಷದ ಶಹಖದ್ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನು ಓದಿದ್ದೀರಾ? ಗುಂಡು ಹಾರಿಸಿಕೊಂಡು ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಆತ್ಮಹತ್ಯೆ
ಇಬ್ಬರನ್ನೂ ಅಲಿಗಂಜ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ವೈದ್ಯರು ಸುಹೈಲ್ ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಗಾಯಗೊಂಡಿದ್ದ ಶಹಖದ್‌ನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ವೇತಾಂಭ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಭ್ರಮಾಚರಣೆಯಲ್ಲಿ ಗುಂಡು ಹಾರಿಸುವಾಗ ಈ ದುರ್ಘಟನೆ ನಡೆದಿರುವ ಸಾಧ್ಯತೆಯಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಇದ್ದವರನ್ನು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಾಹ ಸಮಾರಂಭಗಳಲ್ಲಿ ಅಥವಾ ಇತರೆ ಸಾರ್ವಜನಿಕ ಸಮಾರಂಭಗಳಲ್ಲಿ ಗುಂಡು ಹಾರಿಸಿ ಸಂಭ್ರಮಿಸುವುದು ಕಾನೂನುಬಾಹಿರ ಮತ್ತು ಶಿಕ್ಷಾರ್ಹ ಅಪರಾಧವಾಗಿದೆ. ಶಸ್ತ್ರಾಸ್ತ್ರ (ತಿದ್ದುಪಡಿ) ಕಾಯಿದೆ, 2019 ಕಾಯ್ದೆಯಡಿಯಲ್ಲಿ ಪರವಾನಗಿ ಪಡೆದ ಬಂದೂಕುಗಳನ್ನೂ ಸಂಭ್ರಮಾಚರಣೆಯ ನೆಪದಲ್ಲಿ ಹಾರಿಸುವುದು ಕ್ರಿಮಿನಲ್ ಅಪರಾಧವಾಗಿದೆ. ಈ ಅಪರಾಧಕ್ಕೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು. ಪರವಾನಗಿ ಪಡೆದ ಬಂದೂಕುಗಳನ್ನು ದುರುಪಯೋಗಪಡಿಸಿಕೊಂಡರೆ, ಆ ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ.





