ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವದಲ್ಲಿ ‘ಕಾನೂನು ವೃತ್ತಿಪರರು ಮತ್ತು ಮಾಜಿ ನೀತಿ ನಿರೂಪಕರ ಸಮಿತಿ’ (ಜೆಎಲ್‌ಎಫ್‌ಸಿ) ಪ್ರಸ್ತುತ ಸಂದರ್ಭದಲ್ಲಿ ನ್ಯಾಯದ ಅರ್ಥ ಕುರಿತು ಚರ್ಚಿಸಿದೆ. ದೀರ್ಘಕಾಲದ ಸೆರೆವಾಸ, ವಾಕ್ ಸ್ವಾತಂತ್ರ್ಯ ಹಾಗೂ ಯುಎಪಿಎ ಕಾನೂನುಗಳ ಕುರಿತು ವಿಶ್ಲೇಷಿಸಿದೆ. ‘ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ರೀತಿಯಲ್ಲಿ ಹಲವರು ವಿಚಾರಣೆಯೇ ಇಲ್ಲದೆ, ಸುಮಾರು 5 ವರ್ಷಗಳಿಂದ ಸೆರೆವಾಸ ಎದುರಿಸುತ್ತಿದ್ದಾರೆ. ಇದು ಅನ್ಯಾಯ’ ಎಂದು ಹೇಳಿದೆ.
ಉತ್ಸವದಲ್ಲಿ, ಜೆಎಲ್‌ಎಫ್‌ಸಿ ನೇತೃತ್ವದಲ್ಲಿ ‘ದಿ ಮೆಷರ್ ಆಫ್ ಜಸ್ಟೀಸ್’ ಶೀರ್ಷಿಕೆಯ ಸಂವಾದ ಕಾರ್ಯಕ್ರಮದಲ್ಲಿ ಪತ್ರಕರ್ತೆ ಸುಧಾ ಸದಾನಂದ್ ಅವರು ಹಿರಿಯ ವಕೀಲೆ ವೃಂದಾ ಗ್ರೋವರ್, ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಹಾಗೂ ಅಮೆರಿಕ ಮೂಲದ ನ್ಯಾಯಾಧೀಶೆ ಕೇತು ಶಾ ಅವರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ, 2020ರ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಬಂಧನದಲ್ಲಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಣೆ ಕುರಿತು ಪ್ರತಿಕ್ರಿಯಿಸಿದ ವೃಂದಾ ಗ್ರೋವರ್, “ಸೆರೆಯಲ್ಲಿರುವ ಆನೆ ಉಮರ್ ಅಥವಾ ಶಾರ್ಜೀಲ್ ಮಾತ್ರವಲ್ಲ. ಅಂತಹ ಹಲವು ಪ್ರಕರಣಗಳಿವೆ. ಸೆರೆಯಲ್ಲಿರುವ ಆನೆ ಎಂದರೆ ರಾಜ್ಯವು ಅಧಿಕಾರದ ದುರುಪಯೋಗ ಮತ್ತು ಕ್ರಿಮಿನಲ್ ಕಾನೂನನ್ನು ಶಸ್ತ್ರಾಸ್ತ್ರವಾಗಿ ಬಳಸುತ್ತಿದೆ” ಎಂದು ಹೇಳಿದ್ದಾರೆ.
“ಕಾಶ್ಮೀರದ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಕೂಡ ಬಂಧನದಲ್ಲಿದ್ದಾರೆ. ಅವರನ್ನು ದೇಶದ ವಿವಿಧ ಭಾಗಗಳಲ್ಲಿರುವ ಜೈಲುಗಳಿಗೆ ವರ್ಗಾಯಿಸಲಾಗಿದೆ. ಭಿನ್ನಾಭಿಪ್ರಾಯವನ್ನು ಬಲವಾಗಿ ಹೇಳುವವರ ಮೇಲೆ ಭಯೋತ್ಪಾದನಾ ಕಾನೂನಿನ ಬಳಕೆಯು ದೆಹಲಿ ಗಲಭೆ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿಲ್ಲ” ಎಂದಿದ್ದಾರೆ.
“ಖಾಲಿದ್ ಅಥವಾ ಇಮಾಮ್ ಯಾವುದೇ ಹಿಂಸಾಚಾರದ ಕೃತ್ಯ ಎಸಗಿದ್ದಾರೆ ಎಂಬ ಆರೋಪವಿಲ್ಲ. ಅವರಿಬ್ಬರೂ ಎಂದಿಗೂ ಒಂದೇ ಒಂದು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ. ಹಾಗಿದ್ದರೂ, ಅವರು ಬಂಧನದಲ್ಲಿದ್ದಾರೆ. ಹಾಗಾದರೆ, ಸಮಸ್ಯೆ ಏನು? ಅವರ ಚಿಂತನೆಗಳು” ಎಂದಿದ್ದಾರೆ.
ಈ ಲೇಖನ ಓದಿದ್ದೀರಾ?: 5 ರಾಜ್ಯಗಳ ಚುನಾವಣೆಯನ್ನು ಪ್ರಭಾವಿಸುವುದೇ ಬಿಎಂಸಿ ಫಲಿತಾಂಶ?
“ಭಾರತೀಯ ನ್ಯಾಯಾಲಯಗಳು ಐತಿಹಾಸಿಕವಾಗಿ ಸಂರಕ್ಷಿತ ಮತ್ತು ನಿಷೇಧಿತ ಭಾಷಣಗಳ ನಡುವೆ ವ್ಯತ್ಯಾಸವನ್ನು ತೋರಿಸಿವೆ. ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ಸನ್ನಿಹಿತ ಹಿಂಸಾಚಾರಕ್ಕೆ ಪ್ರಚೋದನೆ ಇದ್ದಾಗ ನೀವು ಆ ಗೆರೆಯನ್ನು ದಾಟುತ್ತೀರಿ. ಆದಾಗ್ಯೂ, ಈ ಯುವ ವಿದ್ಯಾರ್ಥಿ ನಾಯಕರ ಭಾಷಣಗಳಿಗೂ ಮತ್ತು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೂ ಸಂಬಂಧ ಎಲ್ಲಿದೆ? ಅಂತಹ ಸಂಬಂಧ ಇದ್ದದ್ದೇ ಆದಲ್ಲಿ, ಪೊಲೀಸರು ಆ ಭಾಷಣಗಳನ್ನು ಸಂಗ್ರಹಿಸಿ, ರಕ್ಷಿಸಬೇಕು. ಆದರೆ, ಈ ಇಬ್ಬರ ವಿರುದ್ಧದ ಆರೋಪಗಳಿವೆ ಅಂತಹ ಯಾವುದೇ ಪುರಾವೆಗಳಿಲ್ಲ. ಜಾಮೀನು ನಿರಾಕರಣೆಯ ಆ ತೀರ್ಪು ಉಮರ್ ಮತ್ತು ಶಾರ್ಜೀಲ್‌ಗೆ ಮಾತ್ರ ಸೀಮಿತವಲ್ಲ. ಅದು ನಮ್ಮ ಪ್ರಜಾಪ್ರಭುತ್ವಕ್ಕೂ ಸಂಬಂಧಿಸಿದೆ” ಎಂದು ವಿವರಿಸಿದ್ದಾರೆ.
ಚರ್ಚೆಯಲ್ಲಿ ಮಾತನಾಡಿದ ಅಶ್ವನಿ ಕುಮಾರ್, “ವಿಚಾರಣೆ ಇಲ್ಲದೆ ದೀರ್ಘಕಾಲದ ಬಂಧನವು ಖಂಡಿತವಾಗಿಯೂ ಅನ್ಯಾಯ. ವಿಚಾರಣೆ ಪ್ರಾರಂಭವಾಗದೆ ಐದು ವರ್ಷಗಳಿಗಿಂತ ಹೆಚ್ಚು ಕಾಲ ಇಬ್ಬರು ವ್ಯಕ್ತಿಗಳಿಗೆ ಜಾಮೀನು ನಿರಾಕರಿಸಲು ಯಾವುದೇ ಕಾರಣವಿಲ್ಲ. ಅಂತಹ ಬಂಧನವು ಕ್ರಿಮಿನಲ್ ನ್ಯಾಯ ತತ್ವಗಳು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಉಲ್ಲಂಘಿಸುತ್ತದೆ. ಜೊತೆಗೆ, ಘನತೆಯ ಪ್ರಜಾಪ್ರಭುತ್ವದ ತತ್ವಗಳಿಗೂ ವಿರುದ್ಧವಾಗಿದೆ” ಎಂದಿದ್ದಾರೆ.
“ಪ್ರಜಾಫ್ರಭುತ್ವವು ಸ್ವಾತಂತ್ರ್ಯ, ವಾಕ್ ಸ್ವಾತಂತ್ರ್ಯದ ಹಕ್ಕು ಹಾಗೂ ಬಹುತ್ವದಲ್ಲಿ ಆಧಾರವಾಗಿದೆ. ವಿಚಾರಣೆಯೂ ಇಲ್ಲದಿದ್ದಾಗಲೂ ಜಾಮೀನು ನಿರಾಕರಣೆಯು ಪ್ರಜಾಪ್ರಭುತ್ವದ ಪ್ರತಿಯೊಂದು ಸ್ತಂಭಗಳನ್ನು ದುರ್ಬಲಗೊಳಿಸುತ್ತದೆ” ಎಂದಿದ್ದಾರೆ.




