ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದ್ದಾಗ ಜೇನು ಹುಳುಗಳು ದಾಳಿ ನಡೆಸಿದ್ದು, 65 ವರ್ಷದ ಕ್ರಿಕೆಟ್ ಅಂಪೈರ್ ಸಾವನ್ನಪ್ಪಿ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಉನ್ನಾಂವ್ ಜಿಲ್ಲೆಯಲ್ಲಿ ನಡೆದಿದೆ.
ಶುಕ್ಲಗಂಜ್ ಪ್ರದೇಶದ ಸಪ್ರು ಮೈದಾನದಲ್ಲಿ ಈ ಘಟನೆ ನಡೆದಿದ್ದು, ಆಟ ಆಯೋಜನೆ ಮಾಡಿದ್ದ ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಚಿಕ್ಕಮಗಳೂರು l ರಾಸಾಯನಿಕ ಸಿಂಪರಣೆ; ಸಾವಿರಾರು ಜೇನು ಹುಳುಗಳು ಸಾವು
ಪೊಲೀಸ್ ಅಧಿಕಾರಿಗಳ ಪ್ರಕಾರ, ಕಾನ್ಪುರದ ಮಾಣಿಕ್ ಗುಪ್ತಾ ಕ್ರಿಕೆಟ್ ಪಂದ್ಯದ ಅಂಪೈರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ ಜೇನು ಹುಳುಗಳ ಗುಂಪೊಂದು ಇದ್ದಕ್ಕಿದ್ದಂತೆ ಆಟಗಾರರು ಮತ್ತು ಮೈದಾನದಲ್ಲಿದ್ದ ಅಧಿಕಾರಿಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಲ್ಲಿದ್ದವರೆಲ್ಲರೂ ಓಡಿದ್ದಾರೆ.
ದಾಳಿಯಿಂದಾಗಿ ಗುಪ್ತಾ ಗಂಭೀರ ಗಾಯಗೊಂಡು ಪ್ರಜ್ಞೆ ತಪ್ಪಿದ್ದು, ಅವರನ್ನು ಮೊದಲು ಶುಕ್ಲಗಂಜ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಅವರ ಸ್ಥಿತಿ ಹದಗೆಟ್ಟ ಕಾರಣ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಆಸ್ಪತ್ರೆಯ ವೈದ್ಯರು ಗುಪ್ತಾ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇನ್ನು ಮತ್ತೊಬ್ಬ ಅಂಪೈರ್ ಮತ್ತು ಸುಮಾರು 15 ರಿಂದ 20 ಆಟಗಾರರಿಗೂ ಜೇನು ಹುಳಗಳು ಕಡಿದಿದೆ. ಇನ್ನು ಗುಪ್ತಾ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ, ಜೇನುನೊಣಗಳು ಇನ್ನೂ ಅವರ ಮುಖ ಮತ್ತು ದೇಹಕ್ಕೆ ಅಂಟಿಕೊಂಡಿದ್ದವು ಎಂದು ಕಾನ್ಪುರ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷ ಎಸ್ ಎನ್ ಸಿಂಗ್ ಹೇಳಿದ್ದಾರೆ.





