ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಅನ್‌ಅಕಾಡೆಮಿ ಶಿಕ್ಷಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ ಶಿಕ್ಷಕರೊಬ್ಬರನ್ನು ಸೇವೆಯಿಂದ ವಜಾಗೊಳಿಸಿದೆ.
ವಿವಾದಾತ್ಮಕ ವಿಡಿಯೋದಲ್ಲಿ ಶಿಕ್ಷಕರಾದ ಕರನ್ ಸಾಂಗ್ವಾನ್ ಮುಂದಿನ ಬಾರಿ ಶಿಕ್ಷಿತ ಅಭ್ಯರ್ಥಿಗಳಿಗೆ ಮತ ಚಲಾಯಿಸಿ ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡುತ್ತಿರುವುದು ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಕೇವಲ ಹೆಸರುಗಳನ್ನು ಬದಲಾಯಿಸುವವರಿಗೆ ಮತ ಹಾಕಬೇಡಿ ಮತ್ತು ಸುಶಿಕ್ಷಿತ ರಾಜಕಾರಣಿಗಳನ್ನು ಆಯ್ಕೆ ಮಾಡುವಂತೆ ಕರನ್ ಸಾಂಗ್ವಾನ್ ಅವರು ವಿದ್ಯಾರ್ಥಿಗಳನ್ನು ಕೇಳಿಕೊಳ್ಳುತ್ತಿದ್ದಾರೆ.
“ಕಳೆದ ಕೆಲವು ದಿನಗಳಿಂದ ಒಂದು ವಿಡಿಯೋ ವೈರಲ್ ಆಗಿರುವುದರಿಂದ ನಾನು ವಿವಾದಕ್ಕೆ ಸಿಲುಕಿದ್ದೇನೆ ಮತ್ತು ಈ ವಿವಾದದ ಕಾರಣಕ್ಕೆ ನ್ಯಾಯಾಂಗ ಸೇವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ನನ್ನ ಹಲವಾರು ವಿದ್ಯಾರ್ಥಿಗಳು ತೀವ್ರ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಅವರೊಂದಿಗೆ ನಾನೂ ಕೂಡಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ” ಎಂದು ಅನ್‌ಅಕಾಡೆಮಿ ಸಂಸ್ಥೆಯಿಂದ ವಜಾಗೊಂಡ ಸಾಂಗ್ವಾನ್ ಹೇಳಿಕೊಂಡಿದ್ದಾರೆ.
ಸಾಂಗ್ವಾನ್ ಈಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ನ್ನು ಪ್ರಾರಂಭಿಸಿದ್ದು,ಆಗಸ್ಟ್ 19 ರಂದು ವಿವಾದದ ವಿವರಗಳನ್ನು ಪೋಸ್ಟ್ ಮಾಡುವುದಾಗಿ ತಿಳಿಸಿದ್ದಾರೆ.
ಸಾಂಗ್ವಾನ್ ಅವರನ್ನು ವಜಾಗೊಳಿಸಿದ ವರದಿಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿದ್ಯಾವಂತರಿಗೆ ಮತ ನೀಡಿ ಎಂದು ಕೇಳುವುದು ಅಪರಾಧವೇ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಅನ್‌ಅಕಾಡಮಿ ಸಂಸ್ಥಾಪಕರನ್ನು ತೀವ್ರವಾಗಿ ಟೀಕಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನಾಥೆ ”ಇಂತಹ ಬೆನ್ನು ಮೂಳೆಯಿಲ್ಲದ ಮತ್ತು ದುರ್ಬಲ ಜನರು ಶಿಕ್ಷಣ ವೇದಿಕೆಯನ್ನು ನಡೆಸುತ್ತಿರುವುದನ್ನು ನೋಡುವುದು ದುಃಖವಾಗುತ್ತಿದೆ. ಒತ್ತಡಕ್ಕೆ ಒಳಗಾಗುವವರು ಮತ್ತು ಹಿಂಸೆಗೆ ಒಳಗಾಗುವವರು ಈ ಜಗತ್ತಿನಲ್ಲಿರುವ ಎಲ್ಲ ವಿಲಕ್ಷಣಗಳ ವಿರುದ್ಧ ನಿಲ್ಲುವ ನಾಗರಿಕರನ್ನು ಬೆಳೆಸಲು ಎಂದಿಗೂ ಮುಂದೆ ಬರಲಾರರು” ಎಂದು ಹೇಳಿದ್ದಾರೆ.





