ಹತ್ತನೇ ತರಗತಿಯಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಚ್ 7ರಿಂದ ಪ್ರತಿ ತಿಂಗಳು 1,500 ರೂ. ಭತ್ಯೆಯನ್ನು ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಇನ್ನು ಕೆಲವೇ ತಿಂಗಳುಗಳಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಈ ಘೋಷಣೆ ಮಹತ್ವವನ್ನು ಪಡೆದಿದೆ.
ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಮತದಾರರ ಹೆಸರುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಿಹಾಕಿದ್ದನ್ನು ವಿರೋಧಿಸಿ ನಡೆದ ಧರಣಿಯಲ್ಲಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ ಈ ಘೋಷಣೆ ಮಾಡಿದ್ದಾರೆ. “ಈ ನಿರುದ್ಯೋಗ ಭತ್ಯೆ ಏಪ್ರಿಲ್‌ನಲ್ಲಿ ಆರಂಭವಾಗಬೇಕಿತ್ತು. ಆದರೆ ತಕ್ಷಣದಿಂದಲೇ ಪ್ರಾರಂಭಿಸಲು ನಿರ್ಧರಿಸಲಾಗಿದೆ” ಎಂದು ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ಬೀದರ್ | ‘ಯುವನಿಧಿ’ ಗ್ಯಾರಂಟಿ ಯೋಜನೆ : 7,266 ಅರ್ಜಿ; 2,743 ನಿರುದ್ಯೋಗಿಗಳಿಗೆ ಭತ್ಯೆ
“ಯುವ ಸಾಥಿ ಅಡಿಯಲ್ಲಿ ಇನ್ನೂ ಓದುತ್ತಿರುವ ಮತ್ತು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಯಾವುದೇ ಯೋಜನೆಗಳ ಫಲಾನುಭವಿಗಳು ಆಗಿಲ್ಲದ ಎಲ್ಲರಿಗೂ ಮೊತ್ತ ಲಭಿಸಲಿದೆ. ಏಪ್ರಿಲ್ 1ರಂದು ಹಣವನ್ನು ನೀಡಲಾಗುವುದು ಎಂದು ನಾವು ಮೊದಲೇ ಹೇಳಿದ್ದೆವು. ಆದರೆ ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನವಾದ್ದರಿಂದ, ಉಡುಗೊರೆಯಾಗಿ ನಾವು ಪಾವತಿ ದಿನಾಂಕವನ್ನು ಏಪ್ರಿಲ್ 1ರ ಬದಲು ಮಾರ್ಚ್ 7ಕ್ಕೆ ಬದಲಾಯಿಸಿದ್ದೇವೆ” ಎಂದು ತಿಳಿಸಿದರು.
“21ರಿಂದ 40 ವರ್ಷ ವಯಸ್ಸಿನವರೆಲ್ಲರೂ, ಸುಮಾರು 1 ಕೋಟಿ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದಾರೆ. ಇವರು ವಿದ್ಯಾರ್ಥಿವೇತನವನ್ನು ಹೊರತುಪಡಿಸಿ ಬೇರೆ ಯಾವುದೇ ಯೋಜನೆಗಳ ಫಲಾನುಭವಿಗಳಲ್ಲ” ಎಂದು ಹೇಳಿದ ಬ್ಯಾನರ್ಜಿ, “ತಮ್ಮ ಸರ್ಕಾರವು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಬಂಗಾಳದಲ್ಲಿ ನಿರುದ್ಯೋಗ ದರವು ಶೇ. 40ರಷ್ಟು ಕಡಿಮೆಯಾಗಿದೆ” ಎಂದು ಈ ಸಂದರ್ಭದಲ್ಲೇ ಹೇಳಿದ್ದಾರೆ.
“ನಾವು ಕನಿಷ್ಠ 40 ಲಕ್ಷ ಜನರಿಗೆ ಕೌಶಲ್ಯ ತರಬೇತಿಯನ್ನು ನೀಡಿದ್ದೇವೆ. ಅದರಲ್ಲಿ ಸುಮಾರು 10 ಲಕ್ಷ ಜನರು ಈಗಾಗಲೇ ಉದ್ಯೋಗದಲ್ಲಿದ್ದಾರೆ. ವಲಸೆ ಕಾರ್ಮಿಕರು ಆಸಕ್ತಿ ಹೊಂದಿದ್ದರೆ, ಅವರಿಗೂ ಅವಕಾಶಗಳನ್ನು ನೀಡಲಾಗುವುದು. ಇತ್ತೀಚೆಗೆ, ಸೆಣಬಿನ ಉದ್ಯಮದಲ್ಲಿ ಸುಮಾರು 10,000 ಜನರಿಗೆ ತರಬೇತಿ ನೀಡಲಾಗುತ್ತಿದೆ ಮತ್ತು ಅವರನ್ನು ಉದ್ಯೋಗಗಳಲ್ಲಿ ಸೇರಿಸಿಕೊಳ್ಳಲಾಗುವುದು” ಎಂದರು.
ಇದನ್ನು ಓದಿದ್ದೀರಾ? ಪಶ್ಚಿಮ ಬಂಗಾಳ | ಮುಸ್ಲಿಮರ ಓಲೈಕೆಗೆ ಬಿಜೆಪಿ ತಂತ್ರ-ಕುತಂತ್ರ
ಈ ಹಿಂದೆ ಬಿಹಾರದಲ್ಲಿ ವಿಧಾನಸಭೆ ಚುನಾವಣೆಗಿಂತ ಮುಂಚಿತವಾಗಿ ರಾಜ್ಯ ಸರ್ಕಾರವು ‘ಮುಖ್ಯಮಂತ್ರಿ ಮಹಿಳಾ ಉದ್ಯೋಗ ಯೋಜನೆ’ ಅಡಿಯಲ್ಲಿ ಲಕ್ಷಾಂತರ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ ₹10,000 ಹಣವನ್ನು ನೇರವಾಗಿ ಜಮೆ ಮಾಡಿತ್ತು. 2025ರ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದ್ದರು. 2025ರ ಅಕ್ಟೋಬರ್‌ನಲ್ಲಿ ಚುನಾವಣೆ ಘೋಷಣೆಯಾಗುವ ಮುನ್ನ ಮತ್ತು ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೂ ಹಲವು ಹಂತಗಳಲ್ಲಿ ಹಣ ಜಮೆ ಮಾಡಲಾಗಿತ್ತು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇದೀಗ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ಬಂಗಾಳದಲ್ಲಿ ಇನ್ನೂ ಚುನಾವಣೆ ಘೋಷಣೆಯಾಗಿಲ್ಲ. ಬಿಹಾರದಲ್ಲಿ ಬಿಜೆಪಿ ನಡೆಸಿದ ತಂತ್ರವನ್ನೇ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಯೋಗಿಸುತ್ತಿರುವಂತಿದೆ.





