ಆರ್ಥಿಕ ವರ್ಷ 2026-27ರ ಕೇಂದ್ರ ಬಜೆಟ್‌ಅನ್ನು ಫೆಬ್ರವರಿ 1ರಂದು ಮಂಡನೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಜೆಟ್‌ಅನ್ನು ಭಾನುವಾರ ಮಂಡಿಸಲಾಗುತ್ತಿದೆ.
ಜನವರಿ 28ರಂದು ರಾಷ್ಟ್ರಪತಿ ಅವರು ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರ ಭಾಷಣದೊಂದಿಗೆ ಬಜೆಟ್ ಅಧಿವೇಶನ ಆರಂಭವಾಗಲಿದೆ. ಫೆಬ್ರವರಿ 1ರಂದು ಬಜೆಟ್ ಮಂಡನೆಯಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇಂದು (ಬುಧವಾರ) ನಡೆಯಲಿರುವ ಸಂಪುಟ ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.
2017ರಿಂದ ಫೆಬ್ರವರಿ 1ರಂದು ಬಜೆಟ್ ಮಂಡಿಸುವುದನ್ನು ಕೇಂದ್ರ ಸರ್ಕಾರವು ವಾಡಿಕೆಯಾಗಿ ಮಾಡಿಕೊಂಡಿದೆ. ಹೀಗಾಗಿ, ಈ ಬಾರಿಯೂ ಫೆಬ್ರವರಿ 1ರಂದೇ ಬಜೆಟ್ ಮಂಡನೆಗೆ ನಿರ್ಧರಿಸುವ ಸಾಧ್ಯತೆ ಇದೆ. ಅಂದೇ ಬಜೆಟ್ ಮಂಡಿಸುವುದು ಅಂತಿಮವಾದರೆ, ಇದೇ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆಯಾಗಲಿದೆ.
ಈ ಬಾರಿಯ ಬಜೆಟ್ ಅಧಿವೇಶನವು ಮೂರು ವಾರಗಳ ಕಾಲ ನಡೆಯಲಿದ್ದು, ಜನವರಿ 28ರಂದು ರಾಷ್ಟ್ರಪತಿ ಭಾಷಣ, ಜನವರಿ 29ರಂದು ಆರ್ಥಿಕ ಸಮೀಕ್ಷೆ ಪ್ರಕಟ, ಜನವರಿ 30 ಮತ್ತು 31 ರಜಾದಿನ, ಫೆಬ್ರವರಿ 1ರಂದು ಬಜೆಟ್ ಮಂಡನೆಗೆ ನಿರ್ಧರಿಸಲಾಗುತ್ತಿದೆ ಎಂದು ವರದಿಯಾಗಿದೆ.




