ಬಹುನಿರೀಕ್ಷಿತ ಭಾರತದ ಜನಗಣತಿ ಕಾರ್ಯಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, 2027ರಲ್ಲಿ ಜನಗಣತಿ ನಡೆಯಲಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಜನಗಣತಿಯಲ್ಲಿ ‘ಜಾತಿವಾರು ದತ್ತಾಂಶ’ವನ್ನೂ ಎಲೆಕ್ಟ್ರಾನಿಕ್ ರೂಪದಲ್ಲಿ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದ್ದು, ಜನಗಣತಿ ಕಾರ್ಯಕ್ಕಾಗಿ ಬರೋಬ್ಬರಿ 11,718 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಎರಡು ಹಂತಗಳಲ್ಲಿ ಪ್ರಕ್ರಿಯೆ:
ಇದು ದೇಶದ ಮೊದಲ ಡಿಜಿಟಲ್ ಜನಗಣತಿಯಾಗಲಿದ್ದು, ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಸಚಿವರು ವಿವರಿಸಿದ್ದಾರೆ. ಮೊದಲ ಹಂತವು 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮನೆಗಳ ಪಟ್ಟಿ ಮತ್ತು ಗೃಹ ಗಣತಿ ನಡೆಯಲಿದೆ. ಎರಡನೇ ಹಂತವು 2027ರ ಫೆಬ್ರವರಿಯಲ್ಲಿ ಜನಸಂಖ್ಯೆ ಎಣಿಕೆ ಕಾರ್ಯ ನಡೆಯಲಿದೆ. ಇದೇ ಹಂತದಲ್ಲಿ ಜಾತಿ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ತಿರುಪತಿ ದೇವಾದಿದೇವ ತಿಮ್ಮಪ್ಪನಿಗೇ ನಾಮ ಹಾಕುವ ಧೂರ್ತರು!
ಆದರೆ, ಲಡಾಖ್, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದ ಹಿಮಪಾತವಿರುವ ಪ್ರದೇಶಗಳಲ್ಲಿ 2026ರ ಸೆಪ್ಟೆಂಬರ್‌ನಲ್ಲೇ ಜನಸಂಖ್ಯೆ ಎಣಿಕೆ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಬೃಹತ್ ಕಾರ್ಯದಲ್ಲಿ ಸುಮಾರು 30 ಲಕ್ಷ ಕ್ಷೇತ್ರ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ. ದತ್ತಾಂಶ ಸಂಗ್ರಹಣೆಯ ಗುಣಮಟ್ಟವನ್ನು ಕಾಯ್ದುಕೊಳ್ಳಲು ಮೊಬೈಲ್ ಆಪ್ ಮತ್ತು ಮೇಲ್ವಿಚಾರಣೆಗೆ ಕೇಂದ್ರೀಯ ಪೋರ್ಟಲ್ ಅನ್ನು ಬಳಸಲಾಗುವುದು ಎಂದು ವೈಷ್ಣವ್ ತಿಳಿಸಿದ್ದಾರೆ.
ಮುಖ್ಯ ಅಂಶಗಳು:
ಒಟ್ಟು ವೆಚ್ಚ: 11,718 ಕೋಟಿ ರೂ.
ವಿಧಾನ: ಮೊಬೈಲ್ ಆಪ್ ಮೂಲಕ ಡಿಜಿಟಲ್ ಗಣತಿ.
ಅವಧಿ: 2026ರ ಏಪ್ರಿಲ್‌ನಿಂದ ಆರಂಭ, 2027ಕ್ಕೆ ಮುಕ್ತಾಯ





