ಬಿಜೆಪಿ ಮಾಜಿ ಶಾಸಕ, ಉನ್ನಾಂವ್ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗರ್‌ನನ್ನು ಗಲ್ಲಿಗೇರಿಸುವವರೆಗೂ ಹೋರಾಟ ನಡೆಸುತ್ತೇನೆ ಎಂದು ಉನ್ನಾಂವ್ ಅತ್ಯಾಚಾರ ಸಂತ್ರಸ್ತೆ ಹೇಳಿದ್ದಾರೆ.
ಸೆಂಗರ್‌ಗೆ ವಿಚಾರಣಾ ನ್ಯಾಯಾಲಯ ವಿರುದ್ಧ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತುಗೊಳಿಸಿತ್ತು. ಇದೀಗ, ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ. ಸುಪ್ರೀಂ ಕೋರ್ಟ್‌ನ ತೀರ್ಪನ್ನು ಸಂತ್ರಸ್ತೆ ಸ್ವಾಗತಿಸಿದ್ದಾರೆ.
“ಸುಪ್ರೀಂ ಆದೇಶದಿಂದ ನನಗೆ ನ್ಯಾಯ ಸಿಕ್ಕಿದೆ. ನಾನು ಮೊದಲಿನಿಂದಲೂ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ. ನಾನು ಯಾವುದೇ ನ್ಯಾಯಾಲಯದ ವಿರುದ್ಧ ಯಾವುದೇ ಆರೋಪ ಮಾಡುವುದಿಲ್ಲ. ನನಗೆ ಎಲ್ಲ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ” ಎಂದು ಹೇಳಿದ್ದಾರೆ.
“ಸೆಂಗರ್‌ನನ್ನು ಗಲ್ಲಿಗೇರಿಸುವವರೆಗೂ ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ. ಆತನನ್ನು ಗಲ್ಲಿಗೇರಿಸಿದಾಗ ಮಾತ್ರವೇ ನನ್ನ ಕುಟುಂಬ ಮತ್ತು ನನಗೆ ನ್ಯಾಯ ಸಿಗುತ್ತದೆ. ಇಂದಿಗೂ ನಮಗೆ ಬೆದರಿಕೆಗಳು ಬರುತ್ತಿವೆ” ಎಂದು ಪ್ರತಿಜ್ಞೆ ಮಾಡಿದ್ದಾರೆ.
ಸೆಂಗರ್‌ಗೆ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸಿದ ದೆಹಲಿ ನ್ಯಾಯಾಲಯದ ಆದೇಶದ ವಿರುದ್ಧ ಸಿಬಿಐ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಸೆಂಗರ್‌ಗೆ ನೋಟಿಸ್ ಜಾರಿ ಮಾಡಿದ್ದು, ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶಿಸಿದೆ.




