ಉತ್ತರ ಪ್ರದೇಶದಲ್ಲಿ 2027ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆರ್‌ಎಸ್‌ಎಸ್ ಈಗಿನಿಂದಲೇ ತಯಾರಿ ಆರಂಭಿಸಿದೆ. ರಾಜ್ಯದ ಬಿಜೆಪಿ ನಾಯಕರು ಮತ್ತು ಸಚಿವರಿಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡಿದೆ. “ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ ಮತ್ತು ಕಾರ್ಯಶೈಲಿಯನ್ನು ಸುಧಾರಿಸಿಕೊಳ್ಳಿ” ಎಂದು ಯೋಗಿ ಆದಿತ್ಯನಾಥ್ ಸರ್ಕಾರದ ಸಚಿವರು ಮತ್ತು ಶಾಸಕರಿಗೆ ಆರ್‌ಎಸ್‌ಎಸ್ ಪಾಠ ಹೇಳಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಿಜೆಪಿಗರಿಗೆ ಪಾಠ ಹೇಳಿದ್ದಾರೆ. “ಸರ್ಕಾರ ಮತ್ತು ಸಂಘಟನೆಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಮೂಡದಂತೆ ಎಚ್ಚರಿಕೆ ವಹಿಸಬೇಕು. ಸಚಿವರು ಮತ್ತು ಶಾಸಕರ ನಡುವಿನ ಸಮನ್ವಯದ ಕೊರತೆಯು ಪಕ್ಷದ ಸಂಘಟನಾ ಶಕ್ತಿಯನ್ನು ಕುಂದಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಮುಂಬರುವ ಚುನಾವಣೆಯಲ್ಲಿ ಜಾತಿ ರಾಜಕಾರಣದ ಬದಲು ‘ರಾಷ್ಟ್ರೀಯತೆ’ಯನ್ನು ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಳ್ಳಬೇಕು. ನಾಯಕರು ಜಾತಿ ಸಂಬಂಧಿತ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡಿ ವಿವಾದ ಸೃಷ್ಟಿಸಬಾರದು” ಎಂದು ಸೂಚಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಮೋದಿಯ ಸಣ್ಣತನವನ್ನು ದೊಡ್ಡತನದಿಂದ ಸೋಲಿಸಿದ ಇರಾನ್!
ಕಳೆದ ಎರಡು ತಿಂಗಳುಗಳಿಂದ ಉತ್ತರ ಪ್ರದೇಶದಾದ್ಯಂತ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರವಾಸ ನಡೆಸುತ್ತಿದ್ದಾರೆ. ಅಲ್ಲಿನ ಬಿಜೆಪಿ ಕಾರ್ಯಕರ್ತರ ಮನಸ್ಥಿತಿಯನ್ನು ಅರಿತಿದ್ದಾರೆ. ಪಕ್ಷದ ತಳಮಟ್ಟದ ಕಾರ್ಯಕರ್ತರಲ್ಲಿರುವ ಅಸಮಾಧಾನವನ್ನು ಹೋಗಲಾಡಿಸುವುದು ತಮ್ಮ ಉದ್ದೇಶವೆಂದು ಹೇಳಿಕೊಂಡಿದ್ದಾರೆ.
ಲವ್ ಜಿಹಾದ್, ಅಕ್ರಮ ಮತಾಂತರದಂತಹ ವಿಷಯಗಳ ಜೊತೆಗೆ ನೇಪಾಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವಂತೆ ಸರ್ಕಾರಕ್ಕೆ ಭಾಗವತ್ ಸೂಚನೆ ನೀಡಿದ್ದಾರೆ.
ಉತ್ತರ ಪ್ರದೇಶದ ಅವಧ್, ಕಾಶಿ, ಬ್ರಜ್, ಕಾನ್ಪುರ ಸೇರಿದಂತೆ ವಿವಿಧ ಪ್ರಾಂತ್ಯಗಳ ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆಲವು ಸಚಿವರ ವರ್ತನೆಯಿಂದಾಗಿ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ ಎಂದು ವರದಿಯಾಗಿದೆ.




