ದಲಿತ ಕುಟುಂಬವೊಂದು ಏರ್ಪಡಿಸಿದ್ದ ಶ್ರಾದ್ಧ (ತಿಥಿ) ಕಾರ್ಯದಲ್ಲಿ ಮೇಲ್ಜಾತಿ ಯುವಕನೊಬ್ಬ ಭಾಗಿಯಾಗಿ, ಊಟ ಮಾಡಿದ ಕಾರಣಕ್ಕೆ ಆತನ ಇಡೀ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ರಾಮ ಪಂಚಾಯತಿ ಆಡಳಿತವೇ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ಜಾತೀಯತೆ ಮತ್ತು ಜಾತಿ ದೌರ್ಜನ್ಯ ಎಸಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ ರೈಸೇನ್ ಜಿಲ್ಲೆಯ ಪಿಪಾರಿಯಾ ಪುರಿಯಾ ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಬಲ ಜಾತಿಯ ಭರತ್ ಸಿಂಗ್ ಧಕಾಡ್ ಎಂಬ ಯುವಕ ದಲಿತ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಊಟ ಮಾಡಿದ್ದರು. ಆ ಕಾರಣಕ್ಕಾಗಿ, ಆತನ ಕುಟುಂಬದ ಮೂವರಿಗೆ ಗ್ರಾಮ ಪಂಚಾಯತಿ ಬಹಿಷ್ಕಾರ ಹಾಕಿದೆ. ಗ್ರಾಮದ ಯಾವುದೇ ಹಬ್ಬ, ಸಮಾರಂಭಗಳಲ್ಲಿ ಭಾಗಿಯಾಗದಂತೆ ಷರತ್ತುಗಳನ್ನು ವಿಧಿಸಿದೆ.
ಬಹಿಷ್ಕಾರಕ್ಕೊಳಗಾದ ಭರತ್ ಸಿಂಗ್ ಅವರು ಪೊಲೀಸ್ ಠಾಣೆಯಲ್ಲಿ ಪಂಚಾಯತಿ ವಿರುದ್ಧ ದೂರು ದಾಖಲಿಸಿದ್ದಾರೆ. “ತಮ್ಮನ್ನು ಮತ್ತು ತಮ್ಮ ಕುಟುಂಬ ಸದಸ್ಯರ ಮೇಲೆ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ” ಎಂದು ಆರೋಪಿಸಿದ್ದಾರೆ. ಆತನ ದೂರಿನ ಆಧಾರದ ಮೇಲೆ ಗ್ರಾಮ ಪಂಚಾಯತಿ ಸರಪಂಚ, ಉಪ ಸರಪಂಚ ಹಾಗೂ ಪಂಚರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಲೇಖನ ಓದಿದ್ದೀರಾ?: ಥೈಲ್ಯಾಂಡ್-ಕಾಂಬೋಡಿಯಾ ಘರ್ಷಣೆ; ಶತಮಾನದ ವಿವಾದಕ್ಕೆ ನಾಗರಿಕರ ಬಲಿ
ಉದಯಪುರ ತಹಶೀಲ್ದಾರ್ ದಿನೇಶ್ ಬರ್ಗಲೆ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಗಳು ನಿಜವೆಂದು ಕಂಡುಬಂದರೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.
ಭರತ್ ಸಿಂಗ್ ಮಾಡಿರುವ ಆರೋಪಗಳನ್ನು ಗ್ರಾಮ ಪಂಚಾಯತಿ ಸರಪಂಚ್ ನಿರಾಕರಿಸಿದ್ದಾರೆ.




