ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ (ಸಿಎಸ್‌ಇ) ಅಂತಿಮ ಫಲಿತಾಂಶವನ್ನು ಪ್ರಕಟಿಸಿದ್ದು, ಒಟ್ಟು 958 ಅಭ್ಯರ್ಥಿಗಳು ಭಾರತೀಯ ಆಡಳಿತ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್), ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ವಿವಿಧ ಕೇಂದ್ರ ಸೇವೆಗಳಿಗೆ ನೇಮಕಗೊಳ್ಳಲು ಶಿಫಾರಸುಗೊಂಡಿದ್ದಾರೆ.
ಈ ಬಾರಿಯ ಪರೀಕ್ಷೆಯಲ್ಲಿ ರಾಜಸ್ಥಾನದ ವೈದ್ಯಕೀಯ ಪದವೀಧರರಾದ ಅನುಜ್ ಅಗ್ನಿಹೋತ್ರಿ ಅವರು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಅಗ್ರಸ್ಥಾನಕ್ಕೇರಿದ್ದಾರೆ. ಅವರ ನಂತರದ ಸ್ಥಾನಗಳಲ್ಲಿ ರಾಜೇಶ್ವರಿ ಸುವೆ ಎಂ. ದ್ವಿತೀಯ ರ‍್ಯಾಂಕ್ ಮತ್ತು ಆಕಾಂಶ್ ಧುಲ್ ತೃತೀಯ ರ‍್ಯಾಂಕ್ ಗಳಿಸಿದ್ದಾರೆ.
ದೇಶದ ಅತ್ಯುನ್ನತ ಆಡಳಿತ ಸೇವೆಗಳಿಗೆ ಅಧಿಕಾರಿಗಳನ್ನು ನೇಮಿಸಿಕೊಳ್ಳಲು ಆಯೋಗವು ವಾರ್ಷಿಕವಾಗಿ ಈ ಪರೀಕ್ಷೆಯನ್ನು ನಡೆಸುತ್ತದೆ. ಅಭ್ಯರ್ಥಿಗಳು ಲಿಖಿತ (ಮುಖ್ಯ) ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯಲ್ಲಿ (ಸಂದರ್ಶನ) ಪಡೆದ ಅಂಕಗಳ ಆಧಾರದ ಮೇಲೆ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಯುಪಿಎಸ್‌ಸಿ 2025ರ ಮೆರಿಟ್ ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಟಾಪ್ 25 ಅಭ್ಯರ್ಥಿಗಳ ಪೈಕಿ 11 ಮಂದಿ ಮಹಿಳೆಯರಿದ್ದಾರೆ.
ರಾಜೇಶ್ವರಿ ಸುವೆ ಎಂ (2ನೇ ರ‍್ಯಾಂಕ್), ಜಿನ್ನಿಯಾ ಅರೋರಾ (6), ಆಸ್ಥಾ ಜೈನ್ (9), ಅನನ್ಯಾ ಶರ್ಮಾ (13), ಸುರಭಿ ಯಾದವ್ (14), ಸಿಮ್ರನ್‌ದೀಪ್ ಕೌರ್ (15), ಮೋನಿಕಾ ಶ್ರೀವಾಸ್ತವ (16), ಶ್ರುತಿ ಆರ್. (18), ಗೀತಿಕಾ ಅರೋರಾ (22), ಇಫ್ರಾ ಶಮ್ಸ್ ಅನ್ಸಾರಿ (24), ಮತ್ತು ಭಾವಿಕಾ ಚೋಪ್ರಾ (25) ಉನ್ನತ ಶ್ರೇಯಾಂಕಗಳನ್ನು ಪಡೆದುಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್ ವಿರುದ್ಧ ಅಮೆರಿಕದ ವಿನಾಶಕಾರಿ ಕುತಂತ್ರ; ತನ್ನ ಬೇಳೆ ಬೇಯಿಸಿಕೊಳ್ಳಲು ಕುರ್ಡಿಶ್ ಉಗ್ರರ ಕೈಗೆ ಅಸ್ತ್ರ!
ಕರ್ನಾಟಕದಿಂದ 25 ಮಂದಿ ತೇರ್ಗಡೆ
ಈ ವರ್ಷದ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕರ್ನಾಟಕದ ಅಭ್ಯರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ರಾಜ್ಯದಿಂದ ಒಟ್ಟು 22ಕ್ಕೂ ಹೆಚ್ಚು ಮಂದಿ ಅಭ್ಯರ್ಥಿಗಳು ದೇಶದ ಅತ್ಯುನ್ನತ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರಲ್ಲಿ ಬೆಳಗಾವಿಯ ಕಿರಣ್ ಕಮಾಟೆ ಅವರು 53ನೇ ರ‍್ಯಾಂಕ್ ಪಡೆಯುವ ಮೂಲಕ ಕರ್ನಾಟಕ ರಾಜ್ಯದಿಂದ ಮೊದಲ ಸ್ಥಾನದಲ್ಲಿದ್ದಾರೆ.
ಇವರಲ್ಲದೆ ಸಂದೀಪ್ ಬಾದಾದ್, ಶ್ರೇಯನಾ ಗೊಮ್, ಚಿನ್ಮಯಿ ಆರ್.ಪಿ, ಮನೋಜ್ ಜಿ.ಎಸ್, ಎ. ಮಧು, ವರುಣ್ ಗೌಡ ಪಿ, ನಿವೇದಿತಾ ಸಿ. ಭಾವಿಮನಿ, ವಿಶಾಖಾ ಕದಂ, ಸೂರಜ್ ಕೆ.ಎಲ್, ಧನಂಜಯ್ ಆರ್, ಉಲ್ಲಾಸ್ ಎಂ.ಎಸ್, ಮುತ್ತೇಶ್ ಗೌಡ ಎ.ಎಸ್, ಸಾಗರ್ ಎ, ಪಾಂಡುರಂಗ ಕಂಬಳಿ, ಚಂದನ್ ವೈ, ಬಸವರಾಜ್ ಎಂ. ಜವಾಲಿ, ಪ್ರವೀಣಾ ಎಚ್.ಟಿ, ಯತೀಶ್ ಎಂ.ಎ, ಬಸವರಾಜ್ ಎಂ. ಪಾಟೀಲ್, ಅನಿರುದ್ಧ ಕಟ್ಟಿಮನಿ ಹಾಗೂ ಚಂದ್ರಶೇಖರ್ ಕರ್ನಾಟಕದಿಂದ ಉತ್ತೀರ್ಣರಾಗಿದ್ದಾರೆ.





