ಉತ್ತರ ಪ್ರದೇಶದಲ್ಲಿ ಚುನಾವಣಾ ಆಯೋಗವು ‘ಎಸ್‌ಐಆರ್’ ಪ್ರಕ್ರಿಯೆ ಪೂರ್ಣಗೊಳಿಸಿದೆ. ಕರಡು ಮತಪಟ್ಟಿಯನ್ನು ಬಿಡುಗಡೆ ಮಾಡಿದೆ. ಕರಡು ಪಟ್ಟಿಯಲ್ಲಿ ಬರೋಬ್ಬರಿ 2.89 ಕೋಟಿ, ಒಟ್ಟು ಮತದಾರರಲ್ಲಿ 18.70% ಮತದಾರರನ್ನು ಹೊರಹಾಕಲಾಗಿದೆ. ಇದು, ಬಹುತೇಕ ಪಂಜಾಬ್ ಅಥವಾ ಜಾರ್ಖಂಡ್ ರಾಜ್ಯದ ಜನಸಂಖ್ಯೆಯಷ್ಟು ಮತದಾರರು ಉತ್ತರ ಪ್ರದೇಶದಲ್ಲಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅವರಲ್ಲಿ, ಬಹುಸಂಖ್ಯಾತರು – ಬಡವರು, ದಲಿತರು, ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರೇ ಆಗಿದ್ದಾರೆ. ಮುಖ್ಯವಾಗಿ, ವಿಪಕ್ಷಗಳಿಗೆ ಮತ ಚಲಾಯಿಸುವವರೇ ಆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಒಟ್ಟು 12.55 ಕೋಟಿ ಮತದಾರರು ಇದ್ದರು. ಆದರೆ, ಈಗ 2.89 ಕೋಟಿ ಮತದಾರರನ್ನು ಆಯೋಗ ಹೊರದೂಡಿದೆ. ಇಡೀ ದೇಶದಲ್ಲೇ ಅತೀ ಹೆಚ್ಚು ಮತದಾರರನ್ನು ಹೊರಹಾಕುವಲ್ಲಿ ಉತ್ತರ ಪ್ರದೇಶ ಅಗ್ರಸ್ಥಾನದಲ್ಲಿದೆ.
ಒಂದೆಡೆ, ಬೃಹತ್ ಸಂಖ್ಯೆಯ ಮತದಾರ ಮತದಾನದ ಹಕ್ಕನ್ನು ಚುನಾವಣಾ ಆಯೋಗ ಕಸಿದುಕೊಂಡಿದೆ. ಮತ್ತೊಂದೆಡೆ, ಮತಪಟ್ಟಿಯಿಂದ ಹೊರಗಿಡಲಾದ ಸಂಖ್ಯೆಯನ್ನು ಸರಿದೂಗಿಸಲು ರಾಜ್ಯದ ಎಲ್ಲ 1.77 ಮತಗಟ್ಟೆಗಳಲ್ಲಿ ತಲಾ 200 ಮಂದಿಯನ್ನು ಹೊಸದಾಗಿ ಮತಪಟ್ಟಿಗೆ ಸೇರಿಸಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಪಂಕಜ್ ಚೌಧರಿ ತಮ್ಮ ಎಲ್ಲ ರಾಜ್ಯ ಸಚಿವರು, ಪಕ್ಷದ ಸಂಸದರು, ಶಾಸಕರು, ಎಂಎಲ್‌ಸಿಗಳು, ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮತದಾರರ ಸೇರ್ಪಡೆಯ ಗುರಿ ನೀಡಿದ್ದಾರೆ.
“ಪ್ರತಿ ಬೂತ್‌ನಲ್ಲಿ ಕನಿಷ್ಠ 200 ಮತದಾರರನ್ನು ಹೊಸದಾಗಿ ಪಟ್ಟಿಗೆ ಸೇರಿಸಲು ಬಿಜೆಪಿ ನಾಯಕರು ಸೇರಿಸಿದ್ದಾರೆ. ಎಲ್ಲ 1.77 ಲಕ್ಷ ಮತಗಟ್ಟೆಗಳಲ್ಲಿ ತಲಾ 200ರಂತೆ 3.5 ಕೋಟಿ ರೂ. ಅಧಿಕ ಮತದಾರನ್ನು ನೋಂದಾಯಿಸುವ ಗುರಿ ಬಿಜೆಪಿಗಿದೆ” ಎಂದು ಬಿಜೆಪಿ ನಾಯರೊಬ್ಬರು ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ರಾಜ್ಯದಲ್ಲಿ 15.5 ಕೋಟಿ ಅರ್ಹ ಮತದಾರರು ಇರಲಿದ್ದಾರೆ ಎಂದು ಬಿಜೆಪಿ ಅಂದಾಜಿಸಿದ್ದು, ಅದಕ್ಕೆ ಅನುಗುಣವಾಗಿ ಈ ಗುರಿ ನಿಗದಿ ಮಾಡಿದೆ ಎಂದು ವರದಿ ಹೇಳಿದೆ.
ಚುನಾವಣಾ ಆಯೋಗದ ಟೈಮ್‌ಟೇಬಲ್ ಪ್ರಕಾರ, ಮತದಾನದಿಂದ ವಂಚಿತರಾದವರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಹೊಸ ಮತದಾರರು ಸೇರ್ಪಡೆಗೆ ಅರ್ಜಿ ಸಲ್ಲಿಸಲು ಫೆಬ್ರವರಿ 6ರವರೆಗೆ ಅವಕಾಶವಿದೆ. ಈ ಒಂದು ತಿಂಗಳ ಅವಧಿಯೊಳಗೆ 3.5 ಕೋಟಿ ಮತದಾರರನ್ನು ಸೇರಿಸಲು ಬಿಜೆಪಿ ತಯಾರಿ ನಡೆಸುತ್ತಿದೆ.
ಬಿಜೆಪಿಯ ಈ ಹೊಸ ಗುರಿಯು ‘ವೋಟ್ ಚೋರಿ’ಯ ಮುಂದುವರಿದ ಭಾಗವೆಂದು ವಿಪಕ್ಷಗಳು ಆರೋಪಿಸುತ್ತಿವೆ. ರಾಜ್ಯದಲ್ಲಿರುವ ಮತದಾರರನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕುವುದು ಮತ್ತು ಯಾರನ್ನೋ ಕರೆತಂದು ಸೇರ್ಪಡೆಗೊಳಿಸುವುದು, ಅವರಿಗೆ ಆಮಿಷವೊಡ್ಡಿ ಬಿಜೆಪಿಗೆ ಮತಹಾಕುವಂತೆ ಮಾಡುವುದು ಬಿಜೆಪಿಯ ಕುತಂತ್ರವಾಗಿದೆ ಎಂದು ಹೇಳಲಾಗುತ್ತಿದೆ.
ಮತಪಟ್ಟಿಯಿಂದ ತೆಗೆದುಹಾಕಿರುವವರಲ್ಲಿ ನಿರ್ದಿಷ್ಟವಾಗಿ ಮುಸ್ಲಿಂ, ದಲಿತ ಅಥವಾ ವಿಪಕ್ಷಗಳ ಬೆಂಬಲಿಗರೇ ಹೆಚ್ಚಿದ್ದಾರೆ. ಬಿಜೆಪಿಯ ಸೇರ್ಪಡೆ ಯೋಜನೆಯು ತಮ್ಮ ಬೆಂಬಲಿಗರನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ಇದು ಚುನಾವಣಾ ಫಲಿತಾಂಶದ ಮೇಲೆ ನೇರಪರಿಣಾಮ ಬೀರುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.
“ಉತ್ತರ ಪ್ರದೇಶದ ಮೂಲದವರಾಗಿದ್ದು, ಇತರ ರಾಜ್ಯಗಳಿಗೆ ವಲಸೆ ಹೋಗಿರುವವರು ಮತ್ತು ಆ ರಾಜ್ಯಗಳ ಮತಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡಿರುವವರನ್ನು ಹುಡುಕಿ, ಉತ್ತರ ಪ್ರದೇಶದ ಮತಪಟ್ಟಿಯಲ್ಲಿ ಸೇರಿಸಲಾಗುತ್ತದೆ ಎಂದು ಬಿಜೆಪಿಗರೇ ಹೇಳಿರುವುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಹೀಗೆ ಮಾಡಿದಲ್ಲಿ, ಇತರ ರಾಜ್ಯಗಳಲ್ಲಿರುವ ಜನರಿಗೆ ಬಿಜೆಪಿ ಹಣ-ಆಮಿಷವೊಡ್ಡಿ ಉತ್ತರ ಪ್ರದೇಶಕ್ಕೆ ಕರೆತರಬಹುದು. ತಮ್ಮ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಪ್ರಭಾವ ಬೀರಬಹುದು. ಇದು, ಒಂದು ರೀತಿಯ ‘ಮತ ಕಳ್ಳತನ’ವೇ ಆಗಿದೆ. ಮಾತ್ರವಲ್ಲದೆ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬಿಹಾರದ ಮತಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದರೆ, ಅವರನ್ನು ಉತ್ತರ ಪ್ರದೇಶಕ್ಕೆ ಕರೆತಂದು, ಇಲ್ಲಿನ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈಗಾಗಲೇ, ಬಿಹಾರ ಚುನಾವಣೆಯಲ್ಲಿ ಮತ ಚಲಾಯಿಸಿರುವ ಆ ವ್ಯಕ್ತಿ, ಮತ್ತೆ ಉತ್ತರ ಪ್ರದೇಶದಲ್ಲೂ ಮತ ಚಲಾಯಿಸುತ್ತಾರೆ. ಓರ್ವ ವ್ಯಕ್ತಿ ಒಂದು ವರ್ಷದ ಅವಧಿಯಲ್ಲಿ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಮತ ಚಲಾಯಿಸುವಂತೆ ಮಾಡುವುದು ಕೂಡ ಬಹಿರಂಗ ‘ಮತಗಳತನ’ವೇ ಆಗಿರಲಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.




