ದಲಿತ ಮಹಿಳೆಯೊಬ್ಬರನ್ನು ಕೊಲೆ ಮಾಡಿ, ಆಕೆಯ ಮಗಳನ್ನು ಅಪಹರಿಸಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಮೀರತ್‌ನಲ್ಲಿ ಉದ್ವಿಗ್ನತೆ ಉಂಟಾಗಿದೆ. ಯುವತಿಯ ರಕ್ಷಣೆ ಮತ್ತು ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ಘಟನೆ ನಡೆದಿದೆ. ಮಹಿಳೆ ಮತ್ತು ಅವರ ಮಗಳು ಜಮೀನಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಯುವಕನೊಬ್ಬ ತಾಯಿಯ ಮೇಲೆ ಭೀಕರ ಹಲ್ಲೆ ನಡೆಸಿ, ಮಗಳನ್ನು ಎಳೆದೊಯ್ದಿದ್ದಾನೆ. ಮಹಿಳೆ ಕೂಗಿಕೊಂಡಿದ್ದು, ಗ್ರಾಮಸ್ಥರು ಸ್ಥಳಕ್ಕೆ ದಾವಿಸಿದ್ದಾರೆ. ರಕ್ತಸ್ರಾವವಾಗುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಗ್ರಾಮಸ್ಥರು ಮತ್ತು ಭೀಮ್ ಆರ್ಮಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕಾಣೆಯಾದ ಮಗಳನ್ನು ಸುರಕ್ಷಿತವಾಗಿ ಮರಳಿ ತರಬೇಕು ಎಂದ ಒತ್ತಾಯಿಸಿದ್ದಾರೆ.
ಪ್ರಕರಣದ ಕುರಿತು ಮಾತನಾಡಿರುವ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ, ಘಟನೆಯನ್ನು ದುರಂತ, ನಾಚಿಕೆಗೇಡು ಎಂದು ಕರೆದಿದ್ದಾರೆ. “ಮಹಿಳೆಯರ ಘನತೆಯ ಉಲ್ಲಂಘನೆ ಮತ್ತು ಕೊಲೆಯ ಘಟನೆಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅಪರಾಧಿಗಳು ಭವಿಷ್ಯದಲ್ಲಿ ಇಂತಹ ಘೋರ ಕೃತ್ಯಗಳನ್ನು ಎಸಗದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಜೆಪಿ ಸರ್ಕಾರವು ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಅಂತಿಮವಾಗಿ ಅದರ (ಬಿಜೆಪಿ ಸರ್ಕಾರ) ಪತನಕ್ಕೆ ಕಾರಣವಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.
ಆರೋಪಿಗಳನ್ನು ಹುಡುಕಲು ಮತ್ತು ಯುವತಿಯನ್ನು ರಕ್ಷಿಸಲು ಪೊಲೀಸರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ನೇತೃತ್ವದಲ್ಲಿ 10 ತಂಡಗಳನ್ನು ರಚಿಸಿದ್ದಾರೆ.




