ದಲಿತ ಯುವಕನ ಮೇಲೆ ದುರುಳರ ಗುಂಪೊಂದು ಕ್ರೂರವಾಗಿ ಥಳಿಸಿ, ನಡುರಸ್ತೆಯಲ್ಲಿ ಕೋಳಿಯಂತೆ ಕೂರಲು ಒತ್ತಾಯಿಸಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದ ಇಟಾವಾ ಜಿಲ್ಲೆಯ ಭರತಾನಾ ಪಟ್ಟಣದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂತ್ರಸ್ತನನ್ನು ಸುಮಿತ್ ದಿವಾಕರ್ ಎಂದು ಹೆಸರಿಸಲಾಗಿದೆ. ಸಂತ್ರಸ್ತ ಯುವಕ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ; ತನ್ನ ಮೇಲೆ ಪುರಾಣ ಭರತಾನಾ ಮೊಹಲ್ಲಾ ನಿವಾಸಿ ನಂದನ್ ಗುಪ್ತಾ, ಲಡ್ಡು ಗುಪ್ತಾ ಹಾಗೂ ಸತ್ಯೇಂದ್ರ ಕುಮಾರ್ ಹಲ್ಲೆ ನಡೆಸಿದ್ದಾರೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ನನ್ನನ್ನು ತಡೆ ದುರುಳರು, ಜಾತಿ ಆಧಾರಿತ ನಿಂದನೆ ಮಾಡಿ, ನಿರ್ದಯವಾಗಿ ಥಳಿಸಿದರು. ಕೋಳಿಯಂತೆ ಕೂರಲು ಒತ್ತಾಯಿಸಿದರು. ಮಾತ್ರವಲ್ಲದೆ, ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
ಸಂತ್ರಸ್ತನ ದೂರು ಆಧರಿಸಿ, ಮೂವರು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಇತರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೀಡಿಯೊವನ್ನು ಪರಿಶೀಲಿಸಲಾಗುತ್ತಿದೆ, ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಬಿಹಾರ ಚುನಾವಣೆ | ಮಹಾಘಟಬಂಧನ್ ಭರಪೂರ ಭರವಸೆ; ಕಾರ್ಯಸಾಧುವೇ?
ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, “ದೂರು ಸ್ವೀಕರಿಸಿದ ತಕ್ಷಣ, ನಾವು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿದ್ದೇವೆ. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ದಾರಿತಪ್ಪಿಸುವ ಮಾಹಿತಿ ಹರಡಲಾಗುತ್ತಿದೆ. ಆದರೆ ನಮ್ಮ ತನಿಖೆಯಲ್ಲಿ ಯಾವುದೇ ಇತರ ಘಟನೆಯ ಪುರಾವೆಗಳು ಕಂಡುಬಂದಿಲ್ಲ. ಜನರು ವದಂತಿಗಳನ್ನು ನಂಬಬೇಡಿ, ಏನನ್ನಾದರೂ ಹಂಚಿಕೊಳ್ಳುವ ಮೊದಲು ಸತ್ಯಗಳನ್ನು ಪರಿಶೀಲಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದು ಮನವಿ ಮಾಡಿದ್ದಾರೆ.




