ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (SIR) ಚುನಾವಣಾ ಆಯೋಗ ನಡೆಯುತ್ತಿದೆ. ಕೆಲಸದ ಒತ್ತಡದಿಂದ ಹಲವಾರು ಸಿಬ್ಬಂದಿಗಳು ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಕೆಲವರು ಸರಿಯಾಗಿ ಕೆಲಸ ನಿರ್ವಹಿಸಲಾಗದೆ ಅಮಾನತುಗೊಂಡಿದ್ದಾರೆ. ಸುಮಾರು ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೀಗ, ಉತ್ತರ ಪ್ರದೇಶದ ಸಿಬ್ಬಂದಿಯೊಬ್ಬರು ಎಸ್‌ಐಆರ್ ಒತ್ತಡದಿಂದಾಗಿ ತಮ್ಮ ಮದುವೆಗೂ ಒಂದು ದಿನ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಲೇಖಪಾಲ್‌ನಲ್ಲಿ ಸುಧೀರ್ ಕುಮಾರ್ (28) ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಲೇಖಪಾಲ್ ಅವರ ಆತ್ಮಹತ್ಯೆಯ ಕಾರಣದಿಂದಾಗಿ, ಕಂದಾಯ ಸಿಬ್ಬಂದಿಗಳು ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅತಿಯಾದ ಕೆಲಸದ ಒತ್ತಡ ಮತ್ತು ರಜೆ ನಿರಾಕರಣೆಯಿಂದಾಗಿ ಹಲವು ಸಿಬ್ಬಂದಿಗಳು ಸಾವಿನ ಹಾದಿ ತುಳಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಹಾನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಸುಧೀರ್ ಅವರು ಎಸ್‌ಐಆರ್ ಕಾರ್ಯಾಚರಣೆಯ ಮೇಲ್ವಿಚಾರಣೆಗೆ ನಿಯೋಜಿಸಲಾಗಿತ್ತು. ಆದರೆ, ಅವರ ಮೇಲೆ ಅಧಿಕ ಒತ್ತಡವಿತ್ತು ಎಂದು ಹೇಳಲಾಗಿದೆ.
ಕಂದಾಯ ಸಿಬ್ಬಂದಿಗಳ ಪ್ರತಿಭಟನೆಯಿಂದಾಗಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೇಶದ 12 ರಾಜ್ಯಗಳಲ್ಲಿ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದೆ. ಕೆಲಸ ಒತ್ತಡದಿಂದಾಗಿ ಸುಮಾರು 28 ಸಿಬ್ಬಂದಿಗಳು ಕೆಲಸ ತೊರೆದಿದ್ದಾರೆ. ಸುಮಾರು 16 ಮಂದಿ ಆತ್ಮಹತ್ಯೆ ಮತ್ತು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.




