ಸುಲಿಗೆ ಪ್ರಕರಣವೊಂದರಲ್ಲಿ ಉತ್ತರ ಪ್ರದೇಶದ ವಿಶ್ವ ಹಿಂದು ಪರಿಷತ್ (ವಿಎಚ್‌ಪಿ) ನಾಯಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಆರೋಪಿಯ ಬೆಂಬಲಿಗರು ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿದ ಬಳಿಕ, ಆರೋಪಿಯ ವಿರುದ್ಧ ದಾಖಲಾಗಿದ್ದ ಗಂಭೀರ ಸೆಕ್ಷನ್‌ಗಳನ್ನು ಪೊಲೀಸರು ಕೈಬಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ವಿಎಚ್‌ಪಿ ನಾಯಕ ಪ್ರಿನ್ಸ್ ಗೌರ್ ಬಂಧಿತ ಆರೋಪಿ. ಆತನ ವಿರುದ್ಧ ಉತ್ತರ ಪ್ರದೇಶದ ಪಿಲಿಭಿತ್ ಹೆಚ್ಚುವರಿ ಜಿಲ್ಲಾಧಿಕಾರಿ ರಿತು ಪುನಿಯಾ ಅವರು ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಿನ್ಸ್ ಗೌರ್ ತಮ್ಮ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟು, ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದರು. ಅವರ ದೂರಿನ ಆಧಾರದ ಮೇಲೆ ಪ್ರಿನ್ಸ್ ಗೌರ್‌ನನ್ನು ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಬಿಎನ್‌ಎಸ್ ಸೆಕ್ಷನ್ ಗಳು 132(2), 336(3), 338, 340(2), 308(5) ಹಾಗೂ 351(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.
ಆದರೆ, ವಿಎಚ್‌ಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಅವರು ಜಿಲ್ಲಾಧಿಕಾರಿ ಜ್ಞಾನೇಂದ್ರ ಸಿಂಗ್ ಮತ್ತು ಎಸ್‌ಪಿ ವಿಕ್ರಮ್ ದಹಿಯಾ ಅವರನ್ನು ಭೇಟಿ ಮಾಡಿದ್ದರು. ತಮ್ಮ ಮುಖಂಡನ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿದ್ದರು ಎಂದು ವರದಿಯಾಗಿದೆ.
ಈ ಬೆನ್ನಲ್ಲೇ, ಆರೋಪಿ ವಿರುದ್ಧ ದಾಖಲಾಗಿದ್ದ ಸೆಕ್ಷನ್‌ಗಳಲ್ಲಿ 338 (ಜೀವಾವಧಿ ಶಿಕ್ಷೆ) ಹಾಗೂ 308(5) (ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ) ಸೆಕ್ಷನ್‌ಗಳನ್ನು ಕೈಬಿಡಲಾಗಿದೆ. ಬದಲಾಗಿ, ಕೇವಲ ಏಳು ವರ್ಷಗಳ ಶಿಕ್ಷೆ ವಿಧಿಸುವ 308(4) ಸೇರಿಸಲಾಗಿದೆ.
ಈ ಲೇಖನ ಓದಿದ್ದೀರಾ?: ಮುಂದುವರೆದ ಮೋದಿ ಮುಸ್ಲಿಂ ದ್ವೇಷ ಭಾಷಣ; ವಿಪಕ್ಷಗಳ ಟೀಕೆಗೆ ರಾಮನ ಎಳೆದುತಂದ ಮೋದಿ
“ನಿಖಾ ಅಧಿಕಾರಿ ಸತೀಶ್ ಕುಮಾರ್ ಅವರು ಸಿಜೆಎಂ ನ್ಯಾಯಾಲಯಕ್ಕೆ ವರದಿ ಸಲ್ಲಿಸುವ ಮೂಲಕ ಕೆಲವು ಸೆಕ್ಷನ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಬದಲಿಸಲಾಗಿದೆ” ಎಂದು ಆರೋಪಿ ಪರ ವಕೀಲ ಅಶ್ವನಿ ಅಗ್ನಿಹೋತ್ರಿ ಹೇಳಿರುವುದಾಗಿ ‘ಟಿಓಐ’ ವರದಿ ಮಾಡಿದೆ.
“ವಸತಿ ನಿಲಯ ಅಭಿವೃದ್ಧಿ ಪ್ರಕರಣದಲ್ಲಿ ಆರೋಪಿಯು ನನ್ನ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತಂದಿದ್ದಾನೆ. ನನಗೆ ಕಿರುಕುಳ ನೀಡಿರುವುದು ಮಾತ್ರವಲ್ಲದೆ, ಹಣಕ್ಕೆ ಬೇಡಿಕೆ ಇಟ್ಟು, ಸುಲಿಗೆ ಮಾಡಲು ಯತ್ನಿಸಿದ್ದಾನೆ” ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಿತು ಪುನಿಯಾ ಆರೋಪಿಸಿದ್ದಾರೆ.
“ವಿಎಚ್‌ಪಿ ನಾಯಕರಿಗೆ ತಮ್ಮ ಆಕ್ಷೇಪಣೆಗಳನ್ನು ಲಿಖಿತವಾಗಿ ನೀಡುವಂತೆ ಸೂಚಿಸಲಾಗಿದೆ. ತನಿಖೆ ಸಂಪೂರ್ಣ ಪಾರದರ್ಶಕ ಮತ್ತು ಕಾನೂನಿನ ಪ್ರಕಾರ ನಡೆಯಲಿದೆ” ಎಂದು ಪಿಲಿಭಿತ್ ಜಿಲ್ಲಾಧಿಕಾರಿ ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ




