ಯೂಟ್ಯೂಬರ್ ಮತ್ತು ಪೊಲೀಸ್ ಅಧಿಕಾರಿಗಳು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಸಬ್‌ಇನ್ಸ್‌ಪೆಕ್ಟರ್ ಮತ್ತು ಯೂಟ್ಯೂಬರ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕಾನ್ಪುರದ ಸಚೆಂಡಿ ಪ್ರದೇಶದಲ್ಲಿ 7ನೇ ತರಗತಿಯ ವಿದ್ಯಾರ್ಥಿನಿಯನ್ನು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಹರಿಸಲಾಗಿತ್ತು. ಆಕೆಯ ಮೇಲೆ ಅತ್ಯಾಚಾರ ನಡೆಸಿ, ನಂತರ ಆಕೆಯ ಮನೆಯ ಹೊರಗೆ ಎಸೆಯಲಾಗಿತ್ತು ಎಂದು ವರದಿಯಾಗಿದೆ.
ಆಕೆಯ ಹೇಳಿಕೆ ಆಧಾರದ ಮೇಲೆ, ಸಬ್-ಇನ್ಸ್‌ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಮತ್ತು ಯೂಟ್ಯೂಬರ್ ಶಿವಬರನ್ ಯಾದವ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಯೂಟ್ಯೂಬರ್ ಶಿವಬರನ್ ಯಾದವ್ ಎಂಬಾತನನ್ನು ಬಂಧಿಸಲಾಗಿದೆ. ಪರಾರಿಯಾಗಿರುವ ಎಸ್‌ಐ ಬಂಧನಕ್ಕೆ ಪೊಲೀಸರು 4 ತಂಡಗಳನ್ನು ರಚಿಸಿದ್ದಾರೆ. ಅಪರಾಧಕ್ಕೆ ಬಳಸಲಾದ ಎಸ್‌ಯುವಿ ಕಾರು ಎಸ್‌ಐ ಮೌರ್ಯ ಅವರ ಹೆಸರಿನಲ್ಲಿಯೇ ನೋಂದಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಸಂತ್ರಸ್ತೆಯ ಕುಟುಂಬಸ್ಥರು ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಆರೋಪದ ಆಧಾರದ ಮೇಲೆ, ಉಪ ಪೊಲೀಸ್ ಆಯುಕ್ತ (ಪಶ್ಚಿಮ) ದಿನೇಶ್ ಚಂದ್ರ ತ್ರಿಪಾಠಿ ಮತ್ತು ಸಚೇಂಡಿ ಸ್ಟೇಷನ್ ಹೌಸ್ ಅಧಿಕಾರಿ ವಿಕ್ರಮ್ ಸಿಂಗ್ ಅವರನ್ನು ಅಮಾನತುಗೊಳಿಸಿ ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಆದೇಶಿಸಿದ್ದಾರೆ.




