ಮಸೂದೆಯಲ್ಲಿ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಅಧಿಕಾರ ನೀಡಲಾಗಿದೆ. ರಚನೆಯಾಗುವ ಅನಿಷ್ಠಾನ ಮತ್ತು ಮಂಡಳಿಗಳು ಕೇಂದ್ರ ಸರ್ಕಾರದಿಂದ ನೀಡಲಾಗುವ ನಿರ್ದೇಶನಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಭಿನ್ನಾಭಿಪ್ರಾಯ ಉಂಟಾದ ಸಮಯದಲ್ಲಿ, ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
‘ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ಮಸೂದೆ-2025’ಅನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಇದು, ಉನ್ನತ ಶಿಕ್ಷಣದ ಮೇಲಿನ ಸಂಪೂರ್ಣ ನಿಯಂತ್ರಣ, ಪರಿಶೀಲನೆ, ನೀತಿ-ನಿರ್ಧಾರಗಳ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಅರ್ಥಾಥ್, ಉನ್ನತ ಶಿಕ್ಷಣವನ್ನು ಕೇಂದ್ರ ಸರ್ಕಾರವು ಅತಿಕ್ರಮಿಸಿಕೊಳ್ಳುವಂತೆ ಮಾಡುತ್ತದೆ. ವಿಪಕ್ಷಗಳು ಮಸೂದೆಯನ್ನು ವಿರೋಧಿಸಿ, ಗಂಭೀರ ಆಕ್ಷೇಪ ಮತ್ತು ಪ್ರಶ್ನೆಗಳನ್ನು ಎತ್ತಿವೆ. ಪರಿಣಾಮ, ಅಂತಿಮವಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ನೀಡಲಾಗಿದೆ.
ಪ್ರಸ್ತಾವಿತ ಮಸೂದೆಯ ಮೂಲಕ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ ಎಂದು ವಿಪಕ್ಷಷಗಳು ಆರೋಪಿಸಿವೆ. ಮಾತ್ರವಲ್ಲದೆ, ಮಸೂದೆಗೆ ಹಿಂದಿ ಭಾಷೆಯ ಹೆಸರನ್ನೂ ಖಂಡಿಸಿವೆ.
ಪ್ರಸ್ತುತ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಮೂರು – ‘ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯ್ದೆ-1956’, ‘ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಕಾಯ್ದೆ-1987’ ಹಾಗೂ ‘ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ ಕಾಯ್ದೆ-1993’ – ಕಾಯ್ದೆಗಳಿವೆ. ಈ ಕಾಯ್ದೆಗಳ ಅಡಿಯಲ್ಲಿ ಭಾರತದಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ (HEI) ನಿಯಂತ್ರಣ, ಮಾನ್ಯತೆ ಹಾಗೂ ಶೈಕ್ಷಣಿಕ ಮಾನದಂಡಗಳನ್ನು ನೀಡಲು ಮೂರು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈಗ, ಪ್ರಸ್ತಾಪಿಸಲಾಗಿರುವ ಮಸೂದೆಯು ಮೇಲಿನ ಮೂರು ಕಾಯ್ದೆಗಳು ಮತ್ತು ಅವುಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂರು ಸಂಸ್ಥೆಗಳನ್ನು ರದ್ದುಗೊಳಿಸಲು ಸೂಚಿಸುತ್ತದೆ.
ಮಸೂದೆಯು, ಉನ್ನತ ಶಿಕ್ಷಣದ ಎಲ್ಲವನ್ನು ಕೇಂದ್ರದ ನಿಯಂತ್ರಣಕ್ಕೆ ನೀಡುವ ‘ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ’ ಎಂಬ ಉನ್ನತ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ಈ ಅಧಿಷ್ಠಾನವು ‘ವಿಕ್ಷಿತ್ ಭಾರತ ಶಿಕ್ಷಾ ವಿನಿಯಮನ್ ಪರಿಷತ್’ (ನಿಯಂತ್ರಣ ಮಂಡಳಿ), ‘ವಿಕ್ಷಿತ್ ಭಾರತ ಶಿಕ್ಷಾ ಗುಣವಟ್ಟ ಪರಿಷತ್’ (ಮಾನ್ಯತೆ ಮಂಡಳಿ) ಹಾಗೂ ‘ವಿಕ್ಷಿತ್ ಭಾರತ ಶಿಕ್ಷಾ ಮನಕ್ ಪರಿಷತ್’ (ಪ್ರಮಾಣಿತ ಮಂಡಳಿ) ಒಳಗೊಂಡಿರುತ್ತದೆ.
ಮಸೂದೆಯ ಉದ್ದೇಶಗಳು ಮತ್ತು ಕಾರಣಗಳ ಕುರಿತ ಸರ್ಕಾರ ವಿವರಣೆಯ ಪ್ರಕಾರ, 2020ರ ರಾಷ್ಟ್ರೀಯ ಶಿಕ್ಷಣ ನೀತಿ (NEP)ಗೆ ಅನುಗುಣವಾಗಿ 21ನೇ ಶತಮಾನದ ಶಿಕ್ಷಣದ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಧಿಸಲು ಹೊಸ ವ್ಯವಸ್ಥೆಯನ್ನು ರಚಿಸಲಾಗುತ್ತದೆ. ಶಿಕ್ಷಣ ವ್ಯವಸ್ಥೆಯ ನಿಯಂತ್ರಣ ಮತ್ತು ಆಡಳಿತ ಸೇರಿದಂತೆ ಶಿಕ್ಷಣ ರಚನೆಯ ಎಲ್ಲ ಅಂಶಗಳನ್ನು ಪರಿಷ್ಕರಿಸುವುದು ಮತ್ತು ಮರುರೂಪಿಸುವುದು ಮಸೂದೆಯ ಉದ್ದೇಶವಾಗಿದೆ.
“2020ರ NEP ಅಡಿಯಲ್ಲಿ ಉನ್ನತ ಶಿಕ್ಷಣ ವಲಯವನ್ನು ಪುನರ್‌ರೂಪಿಸಲು, ಶಿಕ್ಷಣವು ಕ್ಷೇತ್ರವು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡಲು ನಿಯಂತ್ರಕ ವ್ಯವಸ್ಥೆಯ ಸಂಪೂರ್ಣ ಕೂಲಂಕಷ ಪರಿಶೀಲನೆಯ ಅಗತ್ಯವಿದೆ. ಇದೆಲ್ಲವನ್ನೂ ಪರಿಗಣಿಸಿ, ಹೊಸ ಶಾಸನವನ್ನು ತರಲಾಗುತ್ತಿದೆ” ಎಂದು ಮಸೂದೆಯ ವಿವರಣೆ ಹೇಳುತ್ತದೆ.
“NEP-2020 – ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಮಗ್ರತೆ, ಪಾರದರ್ಶಕತೆ ಹಾಗೂ ಸಂಪನ್ಮೂಲ ದಕ್ಷತೆಯನ್ನು ಲೆಕ್ಕಪರಿಶೋಧನೆ ಮತ್ತು ಸಾರ್ವಜನಿಕ ಬಹಿರಂಗಪಡಿಸುವಿಕೆ ಮೂಲಕ ಖಾತ್ರಿಪಡಿಸಲು ‘ಹಗುರವಾದ ಆದರೆ ಬಿಗಿಯಾದ’ ನಿಯಂತ್ರಕ ಚೌಕಟ್ಟನ್ನು ರೂಪಿಸುತ್ತದೆ. ಜೊತೆಗೆ ಸ್ವಾಯತ್ತತೆ, ಉತ್ತಮ ಆಡಳಿತ ಹಾಗೂ ಸಬಲೀಕರಣದ ಮೂಲಕ ನಾವೀನ್ಯತೆ ಮತ್ತು ಪಠ್ಯೇತರ ವಿಷಯಗಳನ್ನು ಪ್ರೋತ್ಸಾಹಿಸುತ್ತದೆ” ಎಂದು ಸರ್ಕಾರದ ವಿವರಣೆ ವಾದಿಸಿದೆ.
ಮಸೂದೆ ಹೇಳುವಂತೆ, ಉನ್ನತ ಶಿಕ್ಷಣ ವ್ಯವಸ್ಥೆಯ ಸರ್ವೋಚ್ಚ ಛತ್ರಿ ಸಂಸ್ಥೆಯಾದ ‘ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ’ವು ಒಬ್ಬ ಅಧ್ಯಕ್ಷರು ಮತ್ತು ಇತರ 12 ಸದಸ್ಯರನ್ನು ಒಳಗೊಂಡಿರುತ್ತದೆ. ಅವರೆಲ್ಲರನ್ನೂ ಭಾರತದ ರಾಷ್ಟ್ರಪತಿಗಳು ನೇಮಿಸುತ್ತಾರೆ. ಮೂರು ಮಂಡಳಿಗಳು ತಲಾ ಓರ್ವ ಅಧ್ಯಕ್ಷರು ಮತ್ತು 14 ಸದಸ್ಯರನ್ನು ಹೊಂದಿರುತ್ತವೆ. ಅಧ್ಯಕ್ಷರು ಮತ್ತು ಮಂಡಳಿಗಳ ಸದಸ್ಯರನ್ನು ಕೇಂದ್ರ ಸರ್ಕಾರದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ನೇಮಿಸುತ್ತಾರೆ.
ಈ ಮಸೂದೆಯ ಸೆಕ್ಷನ್ 45 ಮತ್ತು 47ರ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಅತ್ಯಧಿಕ ಅಧಿಕಾರ ನೀಡಲಾಗಿದೆ. ಶಿಕ್ಷಣ ನೀತಿಯ ಹಲವು ಮಾನದಂಡಗಳ ಆಧಾರದಲ್ಲಿ, ಹೊಸ ಮಂಡಳಿಗಳು ಕೇಂದ್ರ ಸರ್ಕಾರದಿಂದ ನೀಡಲಾಗುವ ನಿರ್ದೇಶನಗಳಿಗೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಷರತ್ತುಗಳನ್ನು ಪಾಲಿಸಬೇಕು. ಕೇಂದ್ರ ಸರ್ಕಾರ ಮತ್ತು ಹೊಸ ಕಾಯಿದೆಯಡಿಯಲ್ಲಿ ರಚಿಸಲಾದ ಯಾವುದೇ ಸಂಸ್ಥೆಗಳ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ಕೇಂದ್ರ ಸರ್ಕಾರದ ನಿರ್ಧಾರವೇ ಅಂತಿಮವಾಗಿರುತ್ತದೆ.
ಅಧಿಷ್ಠಾನ ಅಥವಾ ಮಂಡಳಿಗಳು ಯಾವ ಕಾರ್ಯವನ್ನು ನಿರ್ವಹಿಸಬೇಕು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಸರ್ಕಾರ ನಿರ್ಧರಿಸುವ ಯಾವುದೇ ಇತರ ಕಾರ್ಯಗಳನ್ನೂ ಮಂಡಳಿಗಳು ಪಾಲಿಸಬೇಕು ಎಂದೂ ಮಸೂದೆ ವಿವರಿಸಿದೆ.
ಈ ಲೇಖನ ಓದಿದ್ದೀರಾ?: ನಿರುದ್ಯೋಗದ ಪ್ರಶ್ನೆಗೆ ನಿಗ್ರಹವೇ ಉತ್ತರವೇ?; ಉದ್ಯೋಗಾಕಾಂಕ್ಷಿಗಳಿಗೆ ಉತ್ತರಿಸುವವರಾರು?
ಇದಲ್ಲದೆ, ಪ್ರಸ್ತಾವಿತ ಶಾಸನದ ಅಡಿಯಲ್ಲಿ ಸ್ಥಾಪಿಸಲಾಗುವ ಮಂಡಳಿಗಳು ಮತ್ತು ಅಧಿಷ್ಠಾನವನ್ನು ರದ್ದುಗೊಳಿಸುವ ಅಧಿಕಾರವೂ ಕೇಂದ್ರ ಸರ್ಕಾರಕ್ಕೆ ಇರುತ್ತದೆ. ಮಸೂದೆಯ ಸೆಕ್ಷನ್ 47ರಲ್ಲಿ, ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪಾಲಿಸುವಲ್ಲಿ ಯಾವುದೇ ಸಂಸ್ಥೆಗಳು ವಿಫಲವಾಗಿವೆ ಎಂದು ಯಾವುದೇ ಸಮಯದಲ್ಲಿ ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟರೆ, ಅಧಿಷ್ಠಾನ ಅಥವಾ ಮಂಡಳಿಗಳನ್ನು ಸರ್ಕಾರವು ರದ್ದುಗೊಳಿಸಬಹುದು ಎಂದು ಹೇಳಲಾಗಿದೆ.
ಅಂತಹ ರದ್ದುಗೊಳಿಸುವಿಕೆಯ ಸಂದರ್ಭಗಳಲ್ಲಿ, ಅಧಿಷ್ಠಾನ ಅಥವಾ ಮಂಡಳಿಗಳ ಅಧ್ಯಕ್ಷರು ಮತ್ತು ಇತರ ಸದಸ್ಯರು ತಮ್ಮ ಕಚೇರಿಗಳನ್ನು ಖಾಲಿ ಮಾಡಬೇಕು. ಸಂಸ್ಥೆಯ ಪುನರ್ರಚನೆಯಾಗುವವರೆಗೆ ಈ ಅಧಿಷ್ಠಾನ ಮತ್ತು ಮಂಡಳಿಗಳ ಕಾರ್ಯಗಳನ್ನು ಕೇಂದ್ರ ಸರ್ಕಾರವೇ ನಿರ್ವಹಿಸುತ್ತದೆ ಎಂದು ಮಸೂದೆ ಹೇಳುತ್ತದೆ.
ಅಧಿಷ್ಠಾನವು ಕೇಂದ್ರ ಸರ್ಕಾರದಿಂದ ಹಣವನ್ನು ಪಡೆಯುತ್ತದೆ. ತನ್ನದೇ ಆದ ನಿಧಿಯನ್ನು ಹೊಂದಿರುತ್ತದೆ. ಇದನ್ನು ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ನಿಧಿ ಎಂದು ಕರೆಯಲಾಗುತ್ತದೆ.
“ವಿಕ್ಷಿತ್ ಭಾರತ್ ಶಿಕ್ಷಾ ಅಧಿಷ್ಠಾನ ನಿಧಿಗೆ ಕೇಂದ್ರ ಸರ್ಕಾರದಿಂದ ಕಾಲಕಾಲಕ್ಕೆ ನೀಡಬಹುದಾದ ಎಲ್ಲ ರೀತಿಯ ಹಣ, ಅಧಿಷ್ಠಾನ ಮತ್ತು ಮಂಡಳಿಗಳ ಎಲ್ಲ ರಶೀದಿಗಳನ್ನು (ರಾಜ್ಯ ಸರ್ಕಾರ ಅಥವಾ ಇತರ ಪ್ರಾಧಿಕಾರ ಅಥವಾ ವ್ಯಕ್ತಿಗಳು ನೀಡುವ ಮೊತ್ತ ಒಳಗೊಂಡಂತೆ) ನಿಧಿಗೆ ವರ್ಗಾಯಿಸಲಾಗುತ್ತದೆ. ಅಧಿಷ್ಠಾನ ಮತ್ತು ಮಂಡಳಿಗಳ ಎಲ್ಲ ಪಾವತಿಗಳನ್ನು ಆ ನಿಧಿಯಿಂದ ಮಾಡಲಾಗುತ್ತದೆ” ಎಂದು ಮಸೂದೆ ಹೇಳುತ್ತದೆ.
ಉನ್ನತ ಶಿಕ್ಷಣ ವ್ಯವಸ್ಥೆಯ ವಿಸ್ತರಣೆಗೆ ಈ ಎಲ್ಲ ನೀತಿ-ನಿಯಮಗಳು ಅಗತ್ಯ. ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸರಳೀಕೃತ ನಿಯಂತ್ರಕ ವ್ಯವಸ್ಥೆಗಳನ್ನು ಬಲವಾಗಿ ಒದಗಿಸುವ ಅವಶ್ಯಕತೆಯಿದೆ” ಎಂದು ಮಸೂದೆ ಹೇಳಿಕೊಂಡಿದೆ.
ಆದಾಗ್ಯೂ, ಮಸೂದೆಯನ್ನು ಪರಿಚಯದ ಹಂತದಲ್ಲಿಯೇ ವಿರೋಧಿಸಲಾಯಿತು. ಶಿಕ್ಷಣ ವ್ಯವಸ್ಥೆಯ ಮೇಲೆ ಕೇಂದ್ರ ಸರ್ಕಾರದ ಅತಿಯಾದ ಅಧಿಕಾರ ಕೇಂದ್ರೀಕರಣವು ರಾಜ್ಯ ಸರ್ಕಾರಗಳು ಮತ್ತು ಒಕ್ಕೂಟದ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ, ಹಿಂದಿಯಲ್ಲಿ ಮಸೂದೆಗೆ ನಾಮಕರಣ ಮಾಡಿರುವುದಕ್ಕೂ ಆಕ್ಷೇಪಗಳು ವ್ಯಕ್ತವಾದವು. ವ್ಯಾಪಕ ಆಕ್ರೋಶ-ಆಕ್ಷೇಪಗಳಿಂದಾಗಿ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯ ಪರಿಶೀಲನೆಗೆ ಕಳುಹಿಸುವುದಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.




