ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಮತ್ತೆ ಮೈತೇಯಿ, ಕುಕಿ ಸಮುದಾಯದ ನಡುವೆ ಘರ್ಷಣೆ ಉಂಟಾಗಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಮೂರು ಐಇಡಿ ಸ್ಫೋಟಗೊಂಡಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇದನ್ನು ಕುಕಿ ಬುಡಕಟ್ಟು ಜನಾಂಗದ ಸದಸ್ಯರು ಐಇಡಿಗಳನ್ನು ಇಟ್ಟಿದ್ದಾರೆ ಎಂದು ಮೈತೇಯಿ ಸಮುದಾಯದವರು ದೂರಿದ್ದು, ಪ್ರತಿಭಟಿಸಿದ್ದಾರೆ.
ಬೆಳಿಗ್ಗೆ 5ರಿಂದ ಬೆಳಿಗ್ಗೆ 6ರ ನಡುವೆ ಪಾಳು ಬಿದ್ದಿದ್ದ ಮನೆಯಲ್ಲಿ ಮೊದಲು ಸ್ಫೋಟ ಸಂಭವಿಸಿದೆ. ಅದಾದ ಬಳಿಕ ಬಿಷ್ಣುಪುರದ ಸೈಟನ್ ಗ್ರಾಮದಲ್ಲಿ ಮನೆಯೊಂದರ ಸುಮಾರು 200 ಮೀಟರ್ ದೂರದಲ್ಲಿ ನಡೆದ ಎರಡನೇ ಸ್ಫೋಟ ಸಂಭವಿಸಿದೆ. ಈ ಸ್ಫೋಟದಲ್ಲಿ ಮಹಿಳೆ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಒಂದರ ನಂತರ ಒಂದರಂತೆ ಸ್ಫೋಟಗಳು ಸಂಭವಿಸಿವೆ ಎಂದು ಗ್ರಾಮಸ್ಥರು ಆ ಪ್ರದೇಶದಲ್ಲಿ ನಿಯೋಜಿಸಲಾದ ಕೇಂದ್ರ ಭದ್ರತಾ ಪಡೆಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ | 40 ಕೆಜಿ ಸ್ಫೋಟಕ ಹೊಂದಿರುವ ಸುಧಾರಿತ ರಾಕೆಟ್ ಪತ್ತೆ
ಎರಡನೇ ಸ್ಫೋಟದಲ್ಲಿ ಗಾಯಗೊಂಡ ಇಬ್ಬರನ್ನು ಸೋಯಿಬಮ್ ಸನತೊಂಬ ಸಿಂಗ್(52) ಮತ್ತು ನೊಂಗ್ಥೊಂಬಮ್ ಇಂದುಬಾಲಾ ದೇವಿ (37) ಎಂದು ಗುರುತಿಸಲಾಗಿದೆ. ಇಬ್ಬರನ್ನು ಬಿಷ್ಣುಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಮನೆ 70 ವರ್ಷದ ಸಲಾಮ್ ಮಣಿ ಸಿಂಗ್ ಎಂಬವರಿಗೆ ಸೇರಿದ್ದು, 2023ರ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾದಾಗಿನಿಂದ ಪಾಳು ಬಿದ್ದಿದೆ. ಸಲಾಮ್ ಸಿಂಗ್ ಇಂದಿಗೂ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಿದ್ದಾರೆ.
ಮೈತೇಯಿ ಸಮುದಾಯದ ಗ್ರಾಮಸ್ಥರು ಕುಕಿ ಬುಡಕಟ್ಟು ಜನಾಂಗದ ಸದಸ್ಯರು ಐಇಡಿಗಳನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಪದೇ ಪದೇ ದಾಳಿ ನಡೆಯುತ್ತಿದ್ದರೂ ಕೇಂದ್ರ ಪಡೆಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಹೇಳಿ ಪ್ರತಿಟಿಸಿದ್ದಾರೆ.
2023ರಲ್ಲಿ ಆರಂಭವಾದ ಹಿಂಸಾಚಾರವನ್ನು ಬಿಜೆಪಿ ಸರ್ಕಾರ ವಿಫಲವಾಗುತ್ತಿದ್ದಂತೆ ಅಂದಿನ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದರು. ಅದಾದ ಬಳಿಕ 2025ರ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬಂದಿದೆ. ಮೊದಲು ಆರು ತಿಂಗಳು ರಾಷ್ಟ್ರಪತಿ ಆಳ್ವಿಕೆ ಎಂದು ಹೇಳಲಾಗಿತ್ತು, ಆದರೆ ಮತ್ತೆ ಆರು ತಿಂಗಳು ವಿಸ್ತರಿಸಲಾಯಿತು.
ರಾಷ್ಟ್ರಪತಿ ಆಳ್ವಿಕೆಯನ್ನು ಪ್ರತಿ ಬಾರಿ 6 ತಿಂಗಳವರೆಗೆ ವಿಸ್ತರಿಸಬಹುದು. ಹೀಗೆ ಸಂಸತ್ತಿನ ಅನುಮೋದನೆಯೊಂದಿಗೆ ಗರಿಷ್ಠ 3 ವರ್ಷಗಳವರೆಗೆ ರಾಷ್ಟ್ರಪತಿ ಆಡಳಿತ ವಿಸ್ತರಿಸಬಹುದು. ಒಂದು ವರ್ಷಕ್ಕೂ ಅಧಿಕ ಕಾಲ ರಾಷ್ಟ್ರಪತಿ ಆಳ್ವಿಕೆಯನ್ನು ವಿಸ್ತರಿಸಬೇಕಾದರೆ ದೇಶದಾದ್ಯಂತ ಅಥವಾ ಇಡೀ ರಾಜ್ಯದಲ್ಲಿ ಅಥವಾ ಅದರ ಯಾವುದಾದರೂ ಭಾಗದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಜಾರಿಯಲ್ಲಿರಬೇಕು. ಆ ರಾಜ್ಯದಲ್ಲಿ ಚುನಾವಣೆ ನಡೆಸಲು ತೊಂದರೆಗಳಿವೆ ಎಂದು ಚುನಾವಣಾ ಆಯೋಗವು ಪ್ರಮಾಣೀಕರಿಸಿರಬೇಕು.





