ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ, ತ್ರಿಪುರಾದಲ್ಲಿ ಬಿಜೆಪಿಯಿಂದ ಸರಣಿ ದಾಳಿಗಳು ನಡೆಯುತ್ತಿವೆ. ಇಡೀ ರಾಜ್ಯ ಹಿಂಸಾಭೂಮಿಯಾಗಿ ಬದಲಾಗಿದೆ
ತ್ರಿಪುರಾದಲ್ಲಿ ಕಳೆದ ತಿಂಗಳು (ನವೆಂಬರ್) ಹೆಚ್ಚಾಗಿ ಕಂಡುಬಂದದ್ದು ಸುಟ್ಟುಹೋದ ಪಕ್ಷಗಳ ಕಚೇರಿಗಳು, ಒಡೆದ ಕಿಟಕಿಗಳು ಹಾಗೂ ಗಾಯಗೊಂಡ ರಾಜಕೀಯ ಕಾರ್ಯಕರ್ತರು. ಇದು ತ್ರಿಪುರಾದಲ್ಲಿ ರಾಜಕೀಯವು ಹಿಂಸಾಚಾರಕ್ಕೆ ತಿರುಗಿದೆ. ಇದು ಜನರಲ್ಲಿ ಆತಂಕ ಹುಟ್ಟುಹಾಕಿದೆ. ಮಾತ್ರವಲ್ಲದೆ, ಪ್ರಜಾಪ್ರಭುತ್ವವು ಹಿಂಸೆ ಮತ್ತು ಯುದ್ಧಭೂಮಿಯಾಗಿ ರೂಪಾಂತರಗೊಂಡಿದೆ ಎಂಬುದನ್ನು ಸೂಚಿಸುತ್ತಿವೆ.
ಕಳೆದ ಎರಡು ವಾರಗಳಲ್ಲಿ, ತ್ರಿಪುರಾದ ನಾಲ್ಕು ಜಿಲ್ಲೆಗಳಲ್ಲಿ ತಮ್ಮ ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ಹದಿನೈದಕ್ಕೂ ಹೆಚ್ಚು ಪ್ರಮುಖ ದಾಳಿಗಳು ನಡೆದಿವೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಆಳುವ ಪಕ್ಷ ಬಿಜೆಪಿ ವಿಪಕ್ಷಗಳನ್ನು ದಮನಿಸುತ್ತಿದೆ ಎಂದು ಪ್ರಮುಖ ವಿಪಕ್ಷಗಳಾದ ಸಿಪಿಐ(ಎಂ) ಮತ್ತು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿಯ ಮಿತ್ರ ಪಕ್ಷವೇ ಆದ ‘ಟಿಪ್ರಾ ಮೋಥಾ’ ಕೂಡ ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದು, ಸಂಘರ್ಷಕ್ಕಿಳಿದಿದೆ.
ನವೆಂಬರ್ 26ರ ಬುಧವಾರ ಮಧ್ಯಾಹ್ನ, ತ್ರಿಪುರಾದ ಧರ್ಮನಗರದಲ್ಲಿ ಸಿಪಿಐಎಂನ ಸುಮಾರು 15ರಿಂದ 20 ಕಾರ್ಯಕರ್ತರು ‘ಅಖಿಲ ಭಾರತ ಕಿಸಾನ್ ಸಭಾ’ (ಎಐಕೆಎಸ್) ಬ್ಯಾನರ್ ಅಡಿಯಲ್ಲಿ ಶಾಂತಿಯುತ ರ್ಯಾಲಿ ನಡೆಸುತ್ತಿದ್ದರು. ಆದರೆ, ಅವರ ಮೇಲೆ ಬಿಜೆಪಿ ಕಾರ್ಯಕರ್ತರು ಕ್ರೂರವಾಗಿ ನಡೆಸಿದ್ದರಿಂದ, ಪರಿಸ್ಥಿತಿ ಉದ್ವಿಗ್ನಗೊಂಡಿತು. ಘಟನೆಯಲ್ಲಿ, ಸಿಪಿಐಎಂನ ಉತ್ತರ ತ್ರಿಪುರ ಜಿಲ್ಲಾ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಅಮಿತಾಭ ದತ್ತ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಐಐಎಂ ಪಾಲಿಟ್‌ಬ್ಯೂರೋ ಸದಸ್ಯ, ವಿಪಕ್ಷ ನಾಯಕ ಜಿತೇಂದ್ರ ಚೌಧರಿ, “ನಮ್ಮ ರಾಜ್ಯದ ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಅವರು ರಾಜ್ಯದಲ್ಲಿ ಉತ್ತಮ ಆಡಳಿತವಿದೆ ಎಂಬುದಾಗಿ ನಿರರ್ಗಳವಾಗಿ ಮಾತನಾಡುತ್ತಾರೆ. ಆದರೆ, ವಾಸ್ತವ ಸ್ಥಿತಿಯನ್ನು ನೋಡಿದಾಗ, ಅವರ ವೈಫಲ್ಯಗಳು ಕಾಣಸಿಗುತ್ತವೆ. ಸರ್ಕಾರದ ವೈಫಲ್ಯವನ್ನು ಪ್ರಶ್ನಿಸುವ ವಿಪಕ್ಷಗಳ ಮೇಲೆ ಅವರ ಪಕ್ಷ ದಾಳಿ ನಡೆಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಸಿದ್ದಾರೆ.
“ಬಿಜೆಪಿಗರ ದಾಳಿಗಳಿಗೆ ಪೊಲೀಸರು ನಿಷ್ಕ್ರಿಯತೆಯ ಮೂಲಕ ಪರೋಕ್ಷವಾಗಿ ಸಹಕಾರ ನೀಡಿದ್ದಾರೆ. ದಾಳಿ ನಡೆಯುವಾಗ ಪೊಲೀಸರು ಸ್ಥಳದಲ್ಲಿದ್ದರು. ಆದರೆ, ಅವರ ಕೈಯಲ್ಲಿ ಲಾಠಿ ಕೂಡ ಇರಲಿಲ್ಲ. ಇದು ಹಠಾತ್ ಅಥವಾ ಅನಿರೀಕ್ಷಿತ ಘಟನೆಯಲ್ಲ. ಮುಖ್ಯಮಂತ್ರಿ ಡಾ. ಮಾಣಿಕ್ ಸಹಾ ಫ್ಯಾಸಿಸ್ಟ್ ಆಡಳಿತವನ್ನು ನಡೆಸಲು ಯತ್ನಿಸುತ್ತಿದ್ದಾರೆ” ಎಂದು ದೂರಿದ್ದಾರೆ.
ಇದೇ ಸಮದಯಲ್ಲಿ ದಾಳಿಕೋರರು ಕಾಂಗ್ರೆಸ್ ಕಾರ್ಯಕರ್ತರ ಮೇಲೂ ದಾಳಿ ನಡೆಸಿದ್ದಾರೆ. ನವೆಂಬರ್ 25ರಂದು ಕಾಂಗ್ರೆಸ್ ಕಾರ್ಯಕರ್ತರು ಧರ್ಮನಗರದಲ್ಲಿರುವ ತಮ್ಮ ಕಚೇರಿಯ ಬಳಿ ಸಂವಿಧಾನ ದಿನಾಚರಣೆಗೆ ತಯಾರಿ ನಡೆಸುತ್ತಿದ್ದ ವೇಳೆ, ಅವರ ಮೇಲೆ ಬಿಜೆಪಿಗರು ಹಲ್ಲೆ ನಡೆಸಿದ್ದಾರೆ ಎಂದು ತ್ರಿಪುರಾ ಕಾಂಗ್ರೆಸ್ ಅಧ್ಯಕ್ಷ ಆಶಿಶ್ ಕುಮಾರ್ ಸಹಾ ಆರೋಪಿಸಿದ್ದಾರೆ. ಪಕ್ಷದ ಧ್ವಜಗಳಿಗೆ ಬೆಂಕಿ ಹಚ್ಚಿ, ಕಚೇರಿಯ ಕಿಟಕಿಗಳನ್ನು ಒಡೆದುಹಾಕಲಾಗಿದೆ ಎಂದು ಅವರು ವಿವರಿಸಿದ್ದಾರೆ.
“ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಸಂವಿಧಾನ ದಿನಾಚರಣೆ ನಡೆಸುವುದಾಗಿ ಘೋಷಿಸುತ್ತಿದ್ದರೂ, ವಾಸ್ತವದಲ್ಲಿ, ಅವರು ಈ ಸಂವಿಧಾನವನ್ನು ಗೌರವಿಸುವುದಿಲ್ಲ. ಸಂವಿಧಾನವು ನೀಡಿರುವ ಹಕ್ಕುಗಳು, ವಿಶೇಷವಾಗಿ ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ಸಮುದಾಯಗಳು, ಬಡವರು, ರೈತರು ಹಾಗೂ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳಲು ಬಿಜೆಪಿಗರು ಹವಳಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಬಿಹಾರ ಗೆಲುವು ಮತ್ತು ದಾಳಿ
ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ, ತ್ರಿಪುರಾದಲ್ಲಿ ಬಿಜೆಪಿಯಿಂದ ಸರಣಿ ದಾಳಿಗಳು ನಡೆಯುತ್ತಿವೆ. ನವೆಂಬರ್ 14ರಂದು ಬಿಹಾರ ಫಲಿತಾಂಶ ಪ್ರಕಟವಾದಾಗಿನಿಂದ ತ್ರಿಪುರಾದಲ್ಲಿ ಮೂರು ಜಿಲ್ಲೆಗಳಲ್ಲಿ ಸಿಪಿಐಎಂನ ಹಲವು ಕಚೇರಿಗಳ ಮೇಲೆ ಬಿಜೆಪಿಗರ ಸಂಘಟಿತ ದಾಳಿ ನಡೆಸಿದ್ದಾರೆ ಎಂಬುದು ಕಂಡುಬಂದಿದೆ.
ಉತ್ತರ ತ್ರಿಪುರಾ ಜಿಲ್ಲೆಯ ಬಾಗ್ಬಸ್ಸಾ ವಿಧಾನಸಭಾ ಕ್ಷೇತ್ರದಲ್ಲಿ, ಬಿಜೆಪಿ ಶಾಸಕ ಜದಾಬ್ ಲಾಲ್ ನಾಥ್ ನೇತೃತ್ವದಲ್ಲಿ ನವೆಂಬರ್ 14ರಂದು ಬಿಜೆಪಿ ವಿಜಯೋತ್ಸವದ ಮೆರವಣಿಗೆ ನಡೆಸಿತು. ಆಗ, ಬಾಗ್ಬಸ್ಸಾದಲ್ಲಿರುವ ಸಿಪಿಐ(ಎಂ) ವಲಯ ಕಚೇರಿಯ ಮೇಲೆ ಭೀಕರ ದಾಳಿ ನಡೆಯಿತು. ಬಿಜೆಪಿ ಕಾರ್ಯಕರ್ತರು ಸಿಐಐಎಂ ಕಚೇರಿಯನ್ನು ಧ್ವಂಸಗೊಳಿಸಿ, ಮೇಜುಗಳು, ಕುರ್ಚಿಗಳು ಹಾಗೂ ಅಧಿಕೃತ ದಾಖಲೆಗಳನ್ನು ನಾಶಪಡಿಸಿದರು ಎಂದು ಆರೋಪಿಸಲಾಗಿದೆ.
ಕಮಲಪುರ ಉಪವಿಭಾಗದ ಧಲೈ ಜಿಲ್ಲೆಯಲ್ಲಿ, ನವೆಂಬರ್ 14 ರಂದು ಹಲಹಲಿ ಮತ್ತು ಮಾಣಿಕ್ ಭಂಡಾರ್‌ನಲ್ಲಿರುವ ಎರಡು ಸಿಪಿಐ(ಎಂ) ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು. ಸಿಪಿಐಎಂನ ಹಲಹಲಿ ಕಚೇರಿಯಲ್ಲಿ ಸುಮಾರು 200 ಕುರ್ಚಿಗಳು, ಮೇಜುಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಧ್ವಂಸಗೊಳಿಸಲಾಯಿತು. ಅಲ್ಲದೆ, ಸಿಪಿಐಎಂ ನಾಯಕರಿಗೆ ಕೊಲೆ ಬೆದರಿಕೆ ಕರೆಗಳೂ ಬಂದಿವೆ ಎಂದು ವರದಿಯಾಗಿದೆ.
ಅದೇ ರೀತಿ, ದಕ್ಷಿಣ ತ್ರಿಪುರ ಜಿಲ್ಲೆಯಲ್ಲಿ, ಸಬ್ರೂಮ್ ವ್ಯಾಪ್ತಿಯ ಮನು ಬಜಾರ್ ಪ್ರದೇಶದಲ್ಲಿಯೂ ಸಿಪಿಐಎಂ ಕಚೇರಿ ಮತ್ತು ಬಜಾರ್‌ನ ಸಿಪಿಐ(ಎಂ) ಮುಖಂಡ ಸುಕಾಂತ ಪೊದ್ದಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳನ್ನು ಬಿಜೆಪಿಗರು ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಮತ್ತೊಂದು ಘಟನೆಗೆ ಸಂಬಂಧಿಸಿದಂತೆ, ಸಿಪಿಐಎಂ ಮುಖಂಡರು ನವೆಂಬರ್ 16 ರಂದು ನ್ಯೂ ಕ್ಯಾಪಿಟಲ್ ಕಾಂಪ್ಲೆಕ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ನೂತನ್ ನಗರ ಸಹಕಾರಿ ಸಂಘದ ವಿಜಯೋತ್ಸವದ ರ್ಯಾಲಿ ನಡೆಸಿದ ಬಿಜೆಪಿ ಮುಖಂಡ ಟಿಂಕು ಬ್ರಾತಾ ದಾಸ್ ಅವರು ಸಿಪಿಐಎಂಗೆ ಹಿಂಸಾತ್ಮಕ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ರಾತಾ ದಾಸ್ ಅವರ ಬೆದರಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ; ಸಿಪಿಐ(ಎಂ) ಕಾರ್ಯಕರ್ತರು ಜಾಗರೂಕರಾಗಿರಿ, ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳುತ್ತಿರುವುದು ಕಂಡುಬಂದಿದೆ.
ತ್ರಿಪುರಾದಲ್ಲಿ ನವೆಂಬರ್‌ಗೂ ಮುನ್ನವೂ ನಡೆದಿವೆ ಹಲವು ದಾಳಿಗಳು
ತ್ರಿಪುರಾದಲ್ಲಿ ದಾಳಿಗಳು ಕೇವಲ ನವೆಂಬರ್‌ನಲ್ಲಿ ಮಾತ್ರವೇ ನಡೆದಿಲ್ಲ. ಸೆಪ್ಟೆಂಬರ್‌ನಲ್ಲಿಯೂ ಹಲವು ದಾಳಿಗಳು ನಡೆದಿವೆ. ಸೆಪ್ಟೆಂಬರ್ 20 ರಂದು, ಅಗರ್ತಲಾದ ಪ್ರತಾಪ್‌ಗಢದಲ್ಲಿರುವ ಸಿಪಿಐ(ಎಂ) ಕಚೇರಿಯನ್ನು ರಾತ್ರೋರಾತ್ರಿ ಬುಲ್ಡೋಜರ್‌ನಿಂದ ಉರುಳಿಸಲಾಯಿತು. ಅಕ್ಟೋಬರ್ 4 ರಂದು, ಧಲೈ ಜಿಲ್ಲೆಯ ಕಮಲಪುರ ಮತ್ತು ಅಂಬಾಸ್ಸಾ ಉಪವಿಭಾಗಗಳಾದ್ಯಂತ ಹಲವಾರು ಸಿಪಿಐ(ಎಂ) ಕಚೇರಿಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ದಾಳಿಗಳು ನಡೆದವು. ಸಲೇಮಾ, ಶಾಂತಿರ್ ಬಜಾರ್, ಜಯಂತಿ ಬಜಾರ್ ಹಾಗೂ ಮರಚೆರಾದಲ್ಲಿ ಪಕ್ಷದ ಕಚೇರಿಗಳ ಮೇಲೆ ದಾಳಿಗಳು ನಡೆದಿವೆ.
ಬಿಜೆಪಿ ದಾಂಧಲೆಗೆ ಮಿತ್ರಪಕ್ಷ ‘ಟಿಪ್ರಾ ಮೋಥಾ’ ವಿರೋಧ ಮತ್ತು ಘರ್ಷಣೆ
ವಿರೋಧ ಪಕ್ಷಗಳು ಆಡಳಿತಾರೂಢ ಬಿಜೆಪಿಯಿಂದ ದಾಳಿಯನ್ನು ಎದುರಿಸುತ್ತಿವೆ. ಇದೇ ಸಮಯದಲ್ಲಿ, ಸಮ್ಮಿಶ್ರ ಸರ್ಕಾರದ ಭಾವವಾಗಿರುವ ಬಿಜೆಪಿ ಮತ್ತು ‘ಟಿಪ್ರಾ ಮೋಥಾ’ ಪಕ್ಷಗಳೇ ಪರಸ್ಪರ ಘರ್ಷಣೆ ನಡೆಸಿವೆ. ನವೆಂಬರ್ 18ರಿಂದ 23ರವರೆಗೆ ಖುಮುಲ್ವ್ಂಗ್‌ನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಗಳು ನಡೆದಿವೆ.
ನವೆಂಬರ್ 18ರಂದು, ಖುಮುಲ್ವ್ಂಗ್‌ನ ಉದ್ಯಾನವನದ ಬಳಿ ಮೂವರು ಟಿಪ್ರಾ ಮೋಥಾ ಬೆಂಬಲಿಗರ ಮೇಲೆ ಬಿಜೆಪಿ ಕಾರ್ಯಕರ್ತರು ಭೀಕರ ದಾಳಿ ನಡೆಸಿದ್ದರು. ಪ್ರತೀಕಾರವಾಗಿ, ಮೋಥಾ ಬೆಂಬಲಿಗರು ರಾತ್ರಿ 8:30ರ ಸುಮಾರಿಗೆ ಬಿಜೆಪಿ ಕಚೇರಿಗೆ ಬೆಂಕಿ ಹಂಚಿದರು. ಪಕ್ಷದ ಧ್ವಜಗಳು, ಪೀಠೋಪಕರಣಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಾಣಿಕ್ ಸಾಹಾ ಅವರ ಛಾಯಾಚಿತ್ರಗಳನ್ನು ನಾಶಮಾಡಿದರು.
ಈ ಲೇಖನ ಓದಿದ್ದೀರಾ?: ಸಿಟಿ ಮಾರ್ಕೆಟ್‌ನಿಂದ ವಿಧಾನಸೌಧದವರೆಗೆ ಆರ್.ವಿ. ದೇವರಾಜ್ ಪಯಣ
ನವೆಂಬರ್ 19ರಂದು ಜಂಪುಯಿಜಾಲಾದಲ್ಲಿ ಟಿಪ್ರಾ ಮೋಥಾ ಬೆಂಬಲಿಗರು ಬಿಜೆಪಿ ಕಚೇರಿಯ ಮೇಲೆ ದಾಳಿ ನಡೆಸಿದರು. ದಾಳಿಯಲ್ಲಿ ಬಿಜೆಪಿ ಕಾರ್ಯಕರ್ತ ಸುಮನ್ ದೇಬ್ಬರ್ಮಾ ಅವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಅಲ್ಲದೆ, ಕಚೇರಿಯ ಹಿಂದೆ ಅಡುಗೆ ಮಾಡುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಅದೇ ದಿನ, ಬಿಜೆಪಿ ಮತ್ತು ಮೋಥಾ ಪಕ್ಷಗಳ ಕಾರ್ಯಕರ್ತರ ನಡುವೆ ಹಲವು ದಾಳಿಗಳು ನಡೆದಿವೆ. ಮೂರು ಟಿಪ್ರಾ ಮೋಥಾ ಕಚೇರಿಗಳು ಸುಟ್ಟುಹೋಗಿವೆ. ಜಿರಾನಿಯಾ ಖೋಲಾದಲ್ಲಿ ಬಿಜೆಪಿ ಕಾರ್ಯಕರ್ತನ ಮನೆಯನ್ನು ಸುಟ್ಟುಹಾಕಲಾಗಿದೆ.
ನವೆಂಬರ್ 21ರಂದು ಮುಖ್ಯಮಂತ್ರಿ ಸಹಾ ಅವರು ಖುಮುಲ್ವಂಗ್‌ಗೆ ಭೇಟಿ ನೀಡಿದ್ದರು. ಈ ವೇಳೆ, ಗೃಹ ಇಲಾಖೆಯನ್ನು ಮೋಥಾ ಸುಪರ್ದಿಗೆ ನೀಡಬೇಕು. ಮೂರೇ ತಿಂಗಳಲ್ಲಿ ರಾಜ್ಯದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುತ್ತೇವೆಂದು ಅರಣ್ಯ ಸಚಿವ, ಟಿಪ್ರಾ ಮೋಥಾ ನಾಯಕ ಅನಿಮೇಶ್ ದೇಬ್ಬರ್ಮಾ ಒತ್ತಾಯಿಸಿದರು. ಆದರೆ, ಅವರ ಬೇಡಿಕೆಯನ್ನು ಬಿಜೆಪಿ ತಿರಸ್ಕರಿಸಿತು.
ರಾಜಕೀಯದ ಭಾಷೆಯಾದ ಹಿಂಸಾಚಾರ
ತ್ರಿಪುರಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಾದರಿಯು ರಾಜಕೀಯ ಭಿನ್ನಾಭಿಪ್ರಾಯವನ್ನು ನಿಗ್ರಹಿಸುವ ವ್ಯವಸ್ಥಿತ ಪ್ರಯತ್ನವನ್ನು ಪ್ರತಿಬಿಂಬಿಸುತ್ತದೆ. ಮಾತ್ರವಲ್ಲದೆ, ಹಿಂಸಾಚಾರವು ರಾಜಕೀಯದ ಭಾಷೆಯಾಗಿ ಬೆಳೆಯುತ್ತಿದೆ ಎಂಬುದನ್ನು ಸೂಚಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
“ಬಿಜೆಪಿಗೆ ಪ್ರಜಾಪ್ರಭುತ್ವದ ಮೇಲೆ ಎಂದಿಗೂ ಗೌರವ ಇರಲಿಲ್ಲ. ಅವರು ಎಂದಿಗೂ ಪ್ರಜಾಪ್ರಭುತ್ವವನ್ನು ಪಾಲಿಸುವುದಿಲ್ಲ. ಬಿಜೆಪಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಎಲ್ಲ ಪ್ರಜಾಪ್ರಭುತ್ವ ಶಕ್ತಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು” ಎಂದು ಸಿಪಿಐ(ಎಂ) ನಾಯಕ ಚೌಧರಿ ಕರೆಕೊಟ್ಟಿದ್ದಾರೆ.
ತ್ರಿಪುರಾದಲ್ಲಿ ರಾಜಕೀಯ ಉದ್ವಿಗ್ನತೆಯು ಹೆಚ್ಚುತ್ತಲೇ ಇರುವುದರಿಂದ, ರಾಜ್ಯವು ಒಂದು ಹಿಂಸಾತ್ಮಕ ಚಿತ್ರಣದಲ್ಲಿ ಕಾಣುತ್ತಿದೆ. ಅಲ್ಲಿ ಸಾಂವಿಧಾನಿಕ ಹಕ್ಕುಗಳು ಬೆದರಿಕೆಗೆ ಒಳಗಾಗಿವೆ. ರಾಜಕೀಯವು ದಾಳಿ-ಪ್ರತಿದಾಳಿಗಳಿಂದ ಕೂಡಿದೆ. ಪಕ್ಷದ ಕಚೇರಿಗಳು ಮತ್ತು ಪ್ರಜಾಪ್ರಭುತ್ವ ಸಂಘಟನೆಗಳ ಸ್ಥಳಗಳು ನಿರಂತರ ದಾಳಿಗೆ ಗುರಿಯಾಗಿವೆ. ರಾಜಕೀಯ ಅನಿಶ್ಚಿತತೆಯಲ್ಲಿ ಹಿಂಸಾಚಾರವು ಪ್ರಬಲ ಭಾಷೆಯಾಗಿ ಕಾಣುತ್ತಿದೆ.
2026ರಲ್ಲಿ ತ್ರಿಪುರಾದ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆಯಲಿವೆ. ಆ ಚುನಾವಣೆಯ ವೇಳೆಗೆ ಪ್ರಜಾಪ್ರಭುತ್ವದ ಮಾನದಂಡಗಳನ್ನು ಪುನಃಸ್ಥಾಪಿಸಬಹುದೇ ಅಥವಾ ಈಶಾನ್ಯ ರಾಜ್ಯದಲ್ಲಿ ಹಿಂಸಾಚಾರವು ರಾಜಕೀಯವನ್ನು ಹೊಸದಾಗಿ ವ್ಯಾಖಾನಿಸುವುದೇ ಎಂಬ ಪ್ರಶ್ನೆ ಎಲ್ಲರ ಮುಂದಿದೆ.




