ಚುನಾವಣಾ ಆಯೋಗ ಮತ್ತು ಬಿಜೆಪಿ ಹಲವಾರು ರಾಜ್ಯಗಳಲ್ಲಿ ಮತದಾರರ ಪಟ್ಟಿಯನ್ನು ‘ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಮೂಲಕ ‘ಮತ ಕಳ್ಳತನ’ವನ್ನು ಮುಚ್ಚಿಹಾಕಲು ಪ್ರಯತ್ನಿಸಿವೆ ಎಂಎಉ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ‘ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಿಗೆ ತರಬೇತಿ ಶಿಬಿರ’ದಲ್ಲಿ ಅವರು ಮಾತನಾಡಿದರು. “ನವೆಂಬರ್ 4 ರಂದು 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇದು, ಮತದಾರರ ಪಟ್ಟಿಗಳ ಮೂಲಕ ನಡೆದಿರುವ ದೊಡ್ಡ ಅಕ್ರಮ ಮತ್ತು ಮತಗಳ್ಳತನವನ್ನು ಮುಚ್ಚಿಹಾಕುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ” ಎಂದು ಹೇಳಿದ್ದಾರೆ.
“ಮತ ಕಳ್ಳತನವು ಒಂದು ಸಮಸ್ಯೆಯಾಗಿದೆ. ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಹಾಘೂ ಛತ್ತೀಸ್‌ಗಢಗಳಲ್ಲಿ ಮತದಾರರ ಪಟ್ಟಿಯನ್ನು ತಿರುಚಲಾಗಿದೆ. ಈಗ, ಅದನ್ನು ಮುಚ್ಚಿಹಾಕಲು ಮತ್ತು ಸಾಂಸ್ಥಿಕಗೊಳಿಸಲು ಎಸ್‌ಐಆರ್ ನಡೆಸಲಾಗುತ್ತದೆ” ಎಂದು ಹೇಳಿದ್ದಾರೆ.
“ಕೆಲವು ದಿನಗಳ ಹಿಂದೆ, ನಾನು ಹರಿಯಾಣ ಮತಗಳ್ಳತನದ ಬಗ್ಗೆ ಪಿಪಿಟಿ ಪ್ರಸ್ತುತ ಪಡಿಸಿದ್ದೆ. ಸುಮಾರು 25 ಲಕ್ಷ ಮತಗಳು, ಸರಿಸುಮಾರು ಪ್ರತಿ ಎಂಟರಲ್ಲಿ ಒಂದು ಮತ ಕಳ್ಳತನವಾಗಿದೆ. ಆ ದತ್ತಾಂಶವನ್ನು ಪರಿಶೀಲಿಸಿದ ನಂತರ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿಯೂ ಅದೇ ರೀತಿ ನಡೆದಿದೆ ಎಂಬುದನ್ನು ನಾನು ನಂಬುತ್ತೇನೆ. ಇದು ಬಿಜೆಪಿ ಮತ್ತು ಚುನಾವಣಾ ಆಯೋಗವು ಎಸಗಿರುವ ಪಿತೂರಿ” ಎಂದು ಹೇಳಿದ್ದಾರೆ.
“ನಮ್ಮಲ್ಲಿ ಸಾಕಷ್ಟು ವಿವರವಾದ ಮಾಹಿತಿ ಇದೆ, ಮತ್ತು ನಾವು ಇಲ್ಲಿಯವರೆಗೆ ತೋರಿಸಿರುವುದು ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ. ಪ್ರಜಾಪ್ರಭುತ್ವ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ನೇರ ದಾಳಿಗೆ ಒಳಗಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ, ಭಾರತ ಮಾತೆಗೆ ಹಾನಿಯಾಗುತ್ತಿದೆ” ಎಂದಿದ್ದಾರೆ.




