ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಹತ್ಯೆಗೈಯಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ. ಬದಲಾಗಿ, ‘ಫಾರೂಕ್ ಅವರನ್ನು ಕೊಲ್ಲಲು 20 ವರ್ಷಗಳಿಂದ ಕಾಯುತ್ತಿದ್ದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಫಾರೂಕ್ ಅವರ ಹತ್ಯೆಗೆ ಯತ್ನ ನಡೆದಿದೆ. 63 ವರ್ಷದ ದಾಳಿಕೋರ ಕಮಲ್ ಸಿಂಗ್ ಜಮ್ವಾಲ್ ಎಂಬಾತ Z+ ಭದ್ರತಾ ರಕ್ಷಣೆಯ ನಡುವೆಯೂ ಫಾರೂಕ್ ಅವರ ಹತ್ತಿರ ಬಂದು ಗುಂಡು ಹಾರಿಸಿದ್ದಾರೆ. ಗುಂಡು ಗುರಿತಪ್ಪಿದೆ. ಎನ್‌ಎಸ್‌ಜಿ ಕಮಾಂಡೋಗಳು ತಕ್ಷಣವೇ ಜಮ್ವಾಲ್ ಅವರನ್ನು ಹಿಡಿದಿದ್ದಾರೆ. ಘಟನೆಯ ವಿಡಿಯೋ ವೈರಲ್ ಆಗಿದೆ.
ಕುಡಿದ ಮತ್ತಿನಲ್ಲಿದ್ದ ಜಮ್ವಾಲ್ ಅವರನ್ನು ಜನರು ಥಳಿಸಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂತರ ಅವರನ್ನು ಕುರ್ಚಿಯಲ್ಲಿ ಶಾಂತವಾಗಿ ಕೂರಿಸಿ ವಿಚಾರಣೆ ನಡೆಸಿದ್ದಾರೆ. ಆತ, ‘ಫಾರೂಕ್ ಅವರನ್ನು ಕೊಲ್ಲಲು 20 ವರ್ಷಗಳಿಂದ ಯೋಜಿಸಿದ್ದೆ’ ಎಂದು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಪ್ರತ್ಯಕ್ಷದರ್ಶಿ ರಾಕೇಶ್ ಸಿಂಗ್ ಹೇಳುವಂತೆ; ಜಮ್ವಾಲ್ ಅವರು ‘ಜಾಗ್ರಣ್ ಮಂಚ್’ನ ಅಧ್ಯಕ್ಷರೆಂದು ಹೇಳಿಕೊಂಡಿದ್ದಾರೆ. ಆರೋಪಿಯು ತನ್ನ ಒಡೆತನದ ಮೂರು ಅಂಗಡಿಗಳಿಂದ ಬಂದ ಬಾಡಿಗೆ ಹಣದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಘಟನೆ ಕುರಿತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು, “ಅಲ್ಲಾಹು ದಯೆ ತೋರಿಸಿದ್ದಾರೆ. ನನ್ನ ತಂದೆಗೆ ತುಂಬಾ ಹತ್ತಿರದಿಂದ ದಾಳಿ ಮಾಡಲಾಗಿತ್ತು. ಪ್ರಸ್ತುತ ವಿವರಗಳು ಸ್ಪಷ್ಟವಾಗಿಲ್ಲ. ಆದರೆ, ತಿಳಿದಿರುವ ವಿಷಯವೆಂದರೆ ಲೋಡ್ ಮಾಡಿದ ಪಿಸ್ತೂಲ್ ಹೊಂದಿರುವ ವ್ಯಕ್ತಿ ಪಾಯಿಂಟ್ ಬ್ಲಾಂಕ್‌ನಲ್ಲಿ ಗುಂಡು ಹಾರಿಸಿದ್ದಾರೆ. ಗುಂಡು ಗುರಿತಪ್ಪಿದಿದ್ದರಿಂದ ಅಪಾಯ ತಪ್ಪಿದೆ. ರಕ್ಷಣಾ ತಂಡವು ಹತ್ಯೆ ಪ್ರಯತ್ನ ವಿಫಲವಾಗುವಂತೆ ಮಾಡಿದೆ. Z+ NSG ರಕ್ಷಣೆಯ ನಡುವೆಯೂ ಮಾಜಿ ಮುಖ್ಯಮಂತ್ರಿಯ ಹತ್ತಿರಕ್ಕೆ ಯಾರಾದರೂ ಹೇಗೆ ಬರಲು ಸಾಧ್ಯವಾಯಿತು ಎಂಬುದು ಸೇರಿದಂತೆ ಹಲವು ಪ್ರಶ್ನೆಗಳಿವೆ” ಎಂದು ಹೇಳಿದ್ದಾರೆ.




