ಹಿಮಾಚಲ ಪ್ರದೇಶದ ಶಿಲ್ಲೈ ಗ್ರಾಮದಲ್ಲಿ ಒಂದೇ ಯುವತಿಯನ್ನು ಇಬ್ಬರು ಸಹೋದರರು ಮದುವೆಯಾಗಿದ್ದು, ಬಹುಪತಿತ್ವದ ಪುರಾತನ ಸಾಂಪ್ರದಾಯಿಕ ಆಚರಣೆಗೆ ನೂರಾರು ಜನ ಸಾಕ್ಷಿಯಾದರು.
ವಧು ಸುನೀತಾ ಚೌಹಾನ್ ಮತ್ತು ಇಬ್ಬರು ವರರಾದ ಪ್ರದೀಪ್ ಮತ್ತು ಕಪಿಲ್ ನೇಗಿ ಈ ನಿರ್ಧಾರವನ್ನು ಯಾವುದೇ ಒತ್ತಡವಿಲ್ಲದೇ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ವಿವಾಹ ಸಮಾರಂಭವು ಸಿರ್ಮೌರ್ ಜಿಲ್ಲೆಯ ಗಿರಿಯಾಚಗಿನ ಪ್ರದೇಶದಲ್ಲಿ ಜುಲೈ 12 ರಂದು ಆರಂಭವಾಗಿ ಮೂರು ದಿನಗಳ ಕಾಲ ನಡೆಯಿತು. ಸ್ಥಳೀಯ ಜಾನಪದ ಗೀತೆಗಳು ಮತ್ತು ನೃತ್ಯಗಳು ಸಮಾರಂಭಕ್ಕೆ ಮೆರುಗು ತಂದವು. ಈ ವಿವಾಹದ ವಿಡಿಯೊಗಳು ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.
ಹಿಮಾಚಲ ಪ್ರದೇಶದ ಕಂದಾಯ ಕಾನೂನುಗಳು ಈ ಸಂಪ್ರದಾಯವನ್ನು “ಜೋಡಿದಾರ” ಎಂದು ಗುರುತಿಸಿವೆ. ಗಿರಿಯಾಚಗಿನ ಬಧಾನಾ ಗ್ರಾಮದಲ್ಲಿ ಕಳೆದ ಆರು ವರ್ಷಗಳಲ್ಲಿ ಇಂತಹ ಐದು ವಿವಾಹಗಳು ನಡೆದಿವೆ. ಕುನ್ಹತ್ ಗ್ರಾಮದ ಸುನೀತಾ ಈ ಸಂಪ್ರದಾಯದ ಬಗ್ಗೆ ತಿಳಿದಿದ್ದು, ಯಾವುದೇ ಒತ್ತಡವಿಲ್ಲದೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಶಿಲ್ಲೈ ಗ್ರಾಮದ ಪ್ರದೀಪ್ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಕಿರಿಯ ಸಹೋದರ ಕಪಿಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ.
ಈ ಬಗ್ಗೆ ಮಾತನಾಡಿರುವ ವರ ಪ್ರದೀಪ್ “ನಾವು ಈ ಸಂಪ್ರದಾಯವನ್ನು ಸಾರ್ವಜನಿಕವಾಗಿ ಅನುಸರಿಸಿದ್ದೇವೆ, ಏಕೆಂದರೆ ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಇದು ನಮ್ಮ ಮೂವರ ನಿರ್ಧಾರವಾಗಿದೆ” ಎಂದಿದ್ದಾರೆ.
ಮತ್ತೊಬ್ಬ ವರ ಕಪಿಲ್ ಮಾತನಾಡಿ, “ನಾನು ವಿದೇಶದಲ್ಲಿ ವಾಸಿಸುತ್ತಿದ್ದರೂ, ಈ ವಿವಾಹದ ಮೂಲಕ ನಾವು ನಮ್ಮ ಪತ್ನಿಗೆ ಬೆಂಬಲ ಮತ್ತು ಪ್ರೀತಿಯನ್ನು ಕುಟುಂಬದಲ್ಲಿ ನೀಡುತ್ತೇವೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ: ಪೊಲೀಸ್ ಇಲಾಖೆಯ ಮಾದರಿ ಹೆಜ್ಜೆ
ಹಟ್ಟಿ ಸಮುದಾಯವು ಹಿಮಾಚಲ ಪ್ರದೇಶ-ಉತ್ತರಾಖಂಡ ಗಡಿಯಲ್ಲಿ ವಾಸಿಸುವ ಬುಡಕಟ್ಟು ಸಮುದಾಯವಾಗಿದ್ದು, ಮೂರು ವರ್ಷಗಳ ಹಿಂದೆ ಪರಿಶಿಷ್ಟ ಪಂಗಡವೆಂದು ಘೋಷಿಸಲಾಗಿದೆ. ಈ ಸಮುದಾಯದಲ್ಲಿ ಬಹುಪತಿತ್ವವು ಶತಮಾನಗಳಿಂದ ಪ್ರಚಲಿತವಾಗಿತ್ತು. ಆದರೆ, ಮಹಿಳೆಯರಲ್ಲಿ ಸಾಕ್ಷರತೆಯ ಏರಿಕೆ ಮತ್ತು ಸಮುದಾಯಗಳ ಆರ್ಥಿಕ ಅಭಿವೃದ್ಧಿಯಿಂದಾಗಿ ಇಂತಹ ವಿವಾಹಗಳ ಸಂಖ್ಯೆ ಕಡಿಮೆಯಾಗಿತ್ತು. ಈಗಲೂ ಕೆಲವು ವಿವಾಹಗಳು ರಹಸ್ಯವಾಗಿ ನಡೆಯಲಿದ್ದು, ಸಮಾಜ ಈ ವಿವಾಹವನ್ನು ಸ್ವೀಕರಿಸುತ್ತದೆ ಎಂದು ಗ್ರಾಮದ ಹಿರಿಯರು ಹೇಳುತ್ತಾರೆ.
ಕೆಲವರ ಪ್ರಕಾರ, ಈ ಸಂಪ್ರದಾಯದ ಮುಖ್ಯ ಉದ್ದೇಶವು ಪಿತೃಪಾರಂಪರಿಕ ಭೂಮಿಯನ್ನು ವಿಭಜನೆಯಿಂದ ತಡೆಯುವುದಾಗಿದೆ. ಆದರೆ, ಬುಡಕಟ್ಟು ಮಹಿಳೆಯರಿಗೆ ಪಿತೃಪಾರಂಪರಿಕ ಆಸ್ತಿಯಲ್ಲಿ ಪಾಲು ಸಿಗುವುದು ಇನ್ನೂ ಪ್ರಮುಖ ಸಮಸ್ಯೆಯಾಗಿದೆ. ಸಿರ್ಮೌರ್ ಜಿಲ್ಲೆಯ ಗಿರಿಯಾಚೆಗಿನ ಪ್ರದೇಶದ ಸುಮಾರು 450 ಗ್ರಾಮಗಳಲ್ಲಿ ವಾಸಿಸುವ ಒಟ್ಟು ಮೂರು ಲಕ್ಷದಷ್ಟು ಹಟ್ಟಿ ಸಮುದಾಯದ ಜನರಿದ್ದಾರೆ. ಕೆಲವು ಗ್ರಾಮಗಳಲ್ಲಿ ಬಹುಪತಿತ್ವವು ಇನ್ನೂ ಪಾಲನೆಯಾಗುತ್ತಿದೆ. ಈ ಸಂಪ್ರದಾಯವು ಉತ್ತರಾಖಂಡದ ಜೌನ್ಸಾರ್ ಬಾಬರ್ ಮತ್ತು ಹಿಮಾಚಲ ಪ್ರದೇಶದ ಕಿನ್ನೌರ್‌ನಂತಹ ಬುಡಕಟ್ಟು ಪ್ರದೇಶಗಳಲ್ಲಿಯೂ ಒಂದು ಕಾಲದಲ್ಲಿ ಪ್ರಚಲಿತವಾಗಿತ್ತು.
ಹಟ್ಟಿ ಸಮುದಾಯದ ಮುಖಂಡರಾದ ಕುಂದನ್ ಸಿಂಗ್ ಶಾಸ್ತ್ರಿ ಮಾತನಾಡಿ, ಈ ಸಂಪ್ರದಾಯವು ಕೃಷಿ ಭೂಮಿಯನ್ನು ವಿಭಜನೆಯಿಂದ ರಕ್ಷಿಸಲು ಸಾವಿರಾರು ವರ್ಷಗಳ ಹಿಂದೆ ಆರಂಭವಾಯಿತು. ಒಂದೇ ವಧುವನ್ನು ಇಬ್ಬರು ಅಥವಾ ಹೆಚ್ಚಿನ ಸಹೋದರರೊಂದಿಗೆ ಮದುವೆಯಾಗಿಸುವ ಮೂಲಕ ಅವಿಭಕ್ತ ಕುಟುಂಬದಲ್ಲಿ ಸಹೋದರತ್ವ ಮತ್ತು ಪರಸ್ಪರ ಒಗ್ಗಟ್ಟನ್ನು ಉತ್ತೇಜಿಸುದಾಗಿರುತ್ತದೆ. ದೊಡ್ಡ ಕುಟುಂಬವಿದ್ದರೆ, ಹೆಚ್ಚಿನ ಪುರುಷರಿದ್ದರೆ, ಬುಡಕಟ್ಟು ಸಮಾಜದಲ್ಲಿ ಭದ್ರತೆಯ ಭಾವನೆ ಹೆಚ್ಚುತ್ತದೆ. ಇದರ ಜೊತೆಗೆ, ದೂರದ ಬೆಟ್ಟಗಾಡು ಪ್ರದೇಶಗಳಲ್ಲಿ ಹರಡಿರುವ ಕೃಷಿ ಭೂಮಿಯನ್ನು ನಿರ್ವಹಿಸಲು ದೊಡ್ಡ ಕುಟುಂಬದ ಅಗತ್ಯವಿರುತ್ತದೆ” ಎನ್ನುತ್ತಾರೆ.





