ಬಂಗಾಳದಲ್ಲೂ ವಾಟ್ಸ್ಆ್ಯಪ್ ಯೂನಿರ್ವಸಿಟಿಯ ಮೂಲಕ ಮಮತಾ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದೆಡೆಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಮತಾ ದಿಟ್ಟವಾಗಿ ಹೋರಾಡುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ವಾಮಮಾರ್ಗವನ್ನು ಪ್ರಯೋಗಿಸಲು ಯತ್ನಿಸುತ್ತಿದೆ. ಬಿಜೆಪಿ – ಟಿಎಂಸಿ ಯುದ್ಧದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಸ್ಥಿತ್ವ ಉಳಿಸಿಕೊಳ್ಳಲು ಸೆಣೆಸಾಡುತ್ತಿವೆ.
2026ರ ಪಶ್ಚಿಮ ಬಂಗಾಳ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇವೆ. ಕಳೆದು 15 ವರ್ಷಗಳಿಂದ ಅಧಿಕಾರಲ್ಲಿರುವ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರ ಹಿಡಿಯುವ ಉತ್ಸುಕದಲ್ಲಿದ್ದಾರೆ. ಹೇಗಾದರೂ ಮಾಡಿ, ತೃಣಮೂಲ ಕಾಂಗ್ರೆಸ್ ಯಿಂದ(ಟಿಎಂಸಿ) ಅಧಿಕಾರವನ್ನು ಕಿತ್ತುಕೊಳ್ಳಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ಒಟ್ಟು 294 ವಿಧಾನಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ ಎದುರಾಳಿಯಾಗಿ ಹೋರಾಡಲು ಸಿದ್ಧಗೊಂಡಿವೆ. ಇವೆರಡರ ನಡೆವೆ ಕಾಂಗ್ರೆಸ್ ಪಕ್ಷ ಸ್ವಲ್ಪವಾದರೂ ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಶ್ರಮಪಡುತ್ತಿದೆ. ಆದರೆ, ಬರೋಬ್ಬರಿ 34 (1977-2011) ವರ್ಷಗಳ ಕಾಲ ಪಶ್ಚಿಮ ಬಂಗಾಳದ ಅಧಿಕಾರವನ್ನು ಹಿಡಿದಿದ್ದ ಎಡಪಕ್ಷಗಳು ಸಹ ಮತ್ತೆ ಅಧಿಕಾರ ಪಡೆಯಲು ಸೆಣಸಾಡುತ್ತಿವೆ.
2011, 2016 ಮತ್ತು 2021ರ ಮೂರು ಅವಧಿಯಲ್ಲಿಯೂ ಪಶ್ಚಿಮ ಬಂಗಾಳದ ಅಧಿಕಾರ ಚುಕ್ಕಾಣಿ ಹಿಡಿದು ಮುಖ್ಯಮಂತ್ರಿ ಹುದ್ದೆಯಲ್ಲಿರುವ ಮಮತಾ ಬ್ಯಾನರ್ಜಿ ಈ ವರ್ಷದ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದಾರೆಯೇ ಎಂಬ ಪ್ರಶ್ನೆ ಬಂದಿದೆ. ಬಂಗಾಳದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ, ಬಡತನ, ಭದ್ರತೆ ಇಲ್ಲದಿರುವುದು, 2024 ಆಗಸ್ಟ್ 9ರಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜಿನಲ್ಲಿ 31 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಮಮತಾ ಅವರ ಆಡಳಿತದ ಮೇಲೆ ಕೆಟ್ಟ ಪರಿಣಾವ ಬೀರಿದೆ. ಇವೆಲ್ಲದರ ನಡುವೆ ಮಮತಾ ಬ್ಯಾನರ್ಜಿ ಅವರು ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ.
ಮಮತಾ ಅಧಿಕಾರ ಹಿಡಿದು ಇಲ್ಲಿಗೆ ಹದಿನೈದು ವರ್ಷಗಳಾಗಿವೆ. ಕಳೆದ ಹದಿನೈದು ವರ್ಷಗಳಲ್ಲಿ ಮತದಾರರ ಆದ್ಯತೆಗಳು ಬದಲಾಗಿವೆ. ಸಾಮಾಜಿಕ ಜಾಲತಾಣಗಳು ಜನರ ಚಿಂತನೆಗಳ ಮೇಲೆ ನೇರ ಪರಿಣಾಮ ಬೀರುತ್ತಿರುವುದರಿಂದ ಅಭಿಪ್ರಾಯಗಳನ್ನು ಮತದಾರರೇ ರೂಪಿಸುತ್ತಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನೇಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಇದೇ ಸಾಮಾಜಿಕ ಮಾಧ್ಯಮವನ್ನು ವ್ಯಾಪಕವಾಗಿ ಬಳಸಿಕೊಂಡಿದೆ. ಬಂಗಾಳದಲ್ಲೂ ವಾಟ್ಸ್ಆ್ಯಪ್ ಯೂನಿರ್ವಸಿಟಿಯ ಮೂಲಕ ಮಮತಾ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಒಂದೆಡೆಗೆ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮಮತಾ ದಿಟ್ಟವಾಗಿ ಹೋರಾಡುತ್ತಿದ್ದಾರೆ. ಇನ್ನೊಂದು ಕಡೆ ಬಿಜೆಪಿ ವಾಮಮಾರ್ಗವನ್ನು ಪ್ರಯೋಗಿಸಲು ಯತ್ನಿಸುತ್ತಿದೆ. ಬಿಜೆಪಿ – ಟಿಎಂಸಿ ಯುದ್ಧದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳು ಅಸ್ಥಿತ್ವ ಉಳಿಸಿಕೊಳ್ಳಲು ಸೆಣೆಸಾಡುತ್ತಿವೆ.
ಇದನ್ನು ಓದಿ : ಬಂಗಾಳ ಚುನಾವಣೆ | ಶೂನ್ಯದಲ್ಲಿರುವ ಎಡಪಕ್ಷಗಳು ಪುಟಿದೇಳುವವೇ?
ಇತ್ತೀಚೆಗೆ ರಾಜಕೀಯ ಸಲಹಾ ಸಂಸ್ಥೆಯಾದ ಐ-ಪ್ಯಾಕ್ ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದರು. ಇ.ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾಗಲೇ ಮಮತಾ ಸ್ಥಳಕ್ಕೆ ಧಾವಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲಿ ಟಿಎಂಸಿಯ ರಾಜಕೀಯ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ಮಾಹಿತಿಯನ್ನು ಕದಿಯಲು ಇ.ಡಿ ದಾಳಿ ನಡೆಸಿದೆ.’ ಎಂದು ಆರೋಪಿಸಿದ್ದರು.
ಬಿಜೆಪಿಯ ವಿರುದ್ಧ ಬೀದಿಗಿಳಿದಿರುವ ಮಮತಾ ‘ಅಮಿತ್ ಶಾ ಒಬ್ಬ ಕೆಟ್ಟ ಗೃಹ ಮಂತ್ರಿ’ ಎಂದು ಗಂಭೀರ ಆರೋಪ ಮಾಡಿದ್ದರು. ಇ.ಡಿ ಅಧಿಕಾರಿಗಳು ನಡೆಸಿದ ದಾಳಿಯ ವಿರುದ್ಧ ಬಂಗಾಳದಲ್ಲಿ ದೊಡ್ಡ ರ್ಯಾಲಿಯನ್ನೇ ನಡೆಸಿದರು. ಬಿಜೆಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ‘ಚುನಾವಣಾ ಕಣದಲ್ಲಿ ಹೋರಾಟ ಮಾಡಲಾಗದ ಬಿಜೆಪಿ, ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿ ವಿರೋಧ ಪಕ್ಷಗಳನ್ನು ಬೆದರಿಸಲು ಪ್ರಯತ್ನಿಸುತ್ತಿದೆ’ ಎಂದಿದ್ದಾರೆ. ಅದೇ ರೀತಿ ‘ಚುನಾವಣೆ ಸಮೀಪಿಸುತ್ತಿರುವ ಕೆಲವೇ ದಿನಗಳ ಹಿಂದೆ ‘ಬಿಜೆಪಿ’ಯು ಇ.ಡಿಯನ್ನು ಬಳಸಿ ಪಕ್ಷದ ಕಾರ್ಯತಂತ್ರವನ್ನು ಕದಿಯುವ ಪ್ರಯತ್ನ ನಡೆಸಿದೆ’ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.
2011ರ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ, ಟಿಎಂಸಿ-ಕಾಂಗ್ರೆಸ್ ಮೈತ್ರಿಕೂಟವು 227 ಸ್ಥಾನಗಳನ್ನು ಗೆದ್ದಿತು. ಇದರಲ್ಲಿ, ಟಿಎಂಸಿ 184 ಸ್ಥಾನಗಳನ್ನು, ಕಾಂಗ್ರೆಸ್ 42 ಸ್ಥಾನಗಳನ್ನು ಪಡೆದುಕೊಂಡಿದ್ದವು. ಕಾಂಗ್ರೆಸ್ ಪಕ್ಷವನ್ನೇ ತ್ಯಜಿಸಿ ಹೊರಬಂದು 1998ರಲ್ಲಿ ಸ್ವಂತ ಪಕ್ಷವನ್ನು ಕಟ್ಟಿದ ಮಮತಾ ಬ್ಯಾನರ್ಜಿ 2011ರ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಬೇಕಾಯಿತು. ಮೊದಲ ಮೈತ್ರಿ ಯಶಸ್ವಿಯಾಯಿತು. ಅಂದು ಮುಖ್ಯಮಂತ್ರಿಯಾದ ಮಮತಾ ಬ್ಯಾನರ್ಜಿ ಇಲ್ಲಿವರೆಗೂ ಅಲುಗಾಡಿಲ್ಲ. 1977 ರಿಂದ 2011ರ ತನಕ ಪಶ್ಚಿಮ ಬಂಗಾಳವನ್ನು ಮುನ್ನಡೆಸಿದ ಎಡಪಕ್ಷಗಳು ಕೇವಲ 62 ಸ್ಥಾನಗಳನ್ನು ಮಾತ್ರವೇ ಗೆದ್ದಿತು. ಈ ಪೈಕಿ, ಸಿಪಿಐ(ಎಂ) 40 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಅಂದಿಗೆ, ಎಡಪಕ್ಷಗಳ ಆಡಳಿತ ಕೊನೆಗೊಂಡಿತು.
2016ರ ಚುನಾವಣೆಯ ವೇಳೆಗೆ ಟಿಎಂಸಿ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಹೊರಗುಳಿದಿದ್ದವು. ಟಿಎಂಸಿ ಏಕಾಂಗಿಯಾಗಿ ಸ್ಪರ್ಧಿಸಿ ಅಧಿಕಾರ ಉಳಿಸಿಕೊಂಡರೆ, ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದುಕೊಂಡಿತು. ಸಿಪಿಐ(ಎಂ) 26 ಸ್ಥಾನಗಳಿಗೆ ಮತ್ತೆ ಕುಸಿಯಿತು. 2021ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡರಂಗಗಳು ಮೈತ್ರಿ ಮಾಡಿಕೊಂಡವು. ಆದರೂ, ಟಿಎಂಸಿ 213 ಸ್ಥಾನಗಳೊಂದಿಗೆ ಮೂರನೇ ಬಾರಿಗೆ ಅಧಿಕಾರ ಉಳಿಸಿಕೊಂಡರೆ, 2016ರಲ್ಲಿ 3 ಸ್ಥಾನಗಳನ್ನು ಮಾತ್ರ ಗೆದ್ದಿದ್ದ ಬಿಜೆಪಿ 77 ಸ್ಥಾನಗಳಿಗೆ ಜಿಗಿಯಿತು. ಕಾಂಗ್ರೆಸ್-ಎಡಪಕ್ಷಗಳು ಶೂನ್ಯ ಸಾಧನೆ ಮಾಡಿದವು.
ಇದನ್ನು ಓದಿ : ಪಶ್ಚಿಮ ಬಂಗಾಳ | 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ಕೇವಲ 10 ವರ್ಷಗಳಲ್ಲಿ ಎಡರಂಗವು ಆಡಳಿತದಿಂದ ಶೂನ್ಯಕ್ಕೆ ಕುಸಿದುಬಿದ್ದಿತು. ಈಗ, 2026 ಕಾಂಗ್ರೆಸ್ ಮತ್ತು ಎಡರಂಗಕ್ಕೆ ನಿರ್ಣಾಯಕ ಚುನಾವಣೆಯಾಗಿದೆ. ಎಡಪಂಥೀಯ ಪಕ್ಷಗಳು ತಮ್ಮ ಸ್ಥಾನ-ನೆಲೆಯನ್ನು ಗುರುತಿಸಿಕೊಳ್ಳಲು ಮತ್ತೊಂದು ರಾಜಕೀಯ ಪರೀಕ್ಷೆ ಎದುರಾಗಿದೆ.
ಈ ಬಾರಿಯ ಚುಣಾವಣೆಯಲ್ಲಿ ಟಿಎಂಸಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಬಹುದೇ? ಅಥವಾ ಕಾಂಗ್ರೆಸ್ ಮತ್ತು ಟಿಎಂಸಿ ಏಕಾಂಗಿಯಾಗಿ ಹೋರಾಡಬಹುದೇ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ. ಪ್ರಬಲ ಪಕ್ಷವಾಗಿ ಬೆಳೆದಿರುವ ಬಿಜೆಪಿ ಯಾವ ತಂತ್ರವನ್ನು ಉಪಯೋಗಿಸಬಹುದು ಎಂಬುದು ಸಹ ಕುತೂಹಲವೇ. ಒಂದು ಕಡೆ ಮಮತಾ ಬ್ಯಾನರ್ಜಿಗೆ ಇರುವ ಆಡಳಿತ ವಿರೋಧಿ ಅಲೆ, ಇನ್ನೊಂದು ಕಡೆ ಬಿಜೆಪಿ ನಡೆಸುತ್ತಿರುವ ವಾಟ್ಸಪ್ ಯೂನಿವರ್ಸಿಟಿಯ ಸುಳ್ಳು ಸಂದೇಶಗಳು ಜನರ ಒಲವನ್ನು ಯಾವ ಕಡೆ ತಿರುಗಿಸಬಹುದು ಎಂಬುದು ಪ್ರಶ್ನೆಯಾಗಿದೆ.
ಪಶ್ಚಿಮ ಬಂಗಾಳ ಕಾಂಗ್ರೆಸ್ ನಾಯಕ ‘ಶುಭಂಕರ್ ಸರ್ಕಾರ್’, ಈ ಬಾರಿಯ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ‘ಟಿಎಂಸಿ’ ಎದುರಿಸುತ್ತಿರುವ ಆಡಳಿತ ವಿರೋಧಿ ಅಲೆಯು ಕಾಂಗ್ರೆಸ್‌ಗೆ ಒಂದಷ್ಟು ಮತಗಳನ್ನು ತಂದುಕೊಡಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಕಳೆದ ನಾಲ್ಕು ದಶದಿಂದ ಕಾಂಗ್ರೆಸ್ ಪಕ್ಷ ಸ್ವಾತಂತ್ರವಾಗಿ ಇಲ್ಲಿಯವರೆಗೂ ಗೆದ್ದು ಬಂದಿಲ್ಲ. ಮೈತ್ರಿಯಲ್ಲಿ ಗೆದ್ದು ಬಂದ ಕಾಂಗ್ರೆಸ್ ಪಕ್ಷವು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಗೆಲ್ಲಬಹುದೇ?
ಬಿಜೆಪಿಯವರು ಟಿಎಂಸಿ ಮೇಲೆ ಅನೇಕ ಆರೋಪಗಳನ್ನು ಮಾಡುತ್ತಿದ್ದಾರೆ. ಮುಖ್ಯವಾಗಿ “ಟಿಎಂಸಿಯು ಮುಸ್ಲಿಂ ಓಲೈಕೆ ರಾಜಕಾರಣ ಮಾಡುವ ಜೊತೆಗೆ ಬಾಂಗ್ಲಾದೇಶದ ನುಸುಳುಕೋರರನ್ನು ಪಶ್ಚಿಮ ಬಂಗಾಳದಲ್ಲಿ ಆಶ್ರಯ ನೀಡುತ್ತಿದೆ” ಎಂದು ಆರೋಪಿಸಲಾಗಿದೆ. ಕಳೆದ ಹನ್ನೊಂದು ವರ್ಷದಿಂದ ಬಿಜೆಪಿ ಮಾಡುತ್ತಿರುವ ಹಿಂದುತ್ವದ ರಾಜಕಾರಣಕ್ಕೆ ಟಿಎಂಸಿ ಬಲಿಯಾಗಬಹುದು ಎನ್ನಲಾಗಿದೆ. ವಿಶೇಷವಾಗಿ ಬಂಗಾಳದ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಮುಖ್ಯಸ್ಥ ‘ಸುವೇಂದು ಅಧಿಕಾರಿ’ ಮೊದಲು ‘ಟಿಎಂಸಿ’ಯಲ್ಲಿದ್ದವರು. ಅವರೇ ಮಮತಾ ಬ್ಯಾನರ್ಜಿ ವಿರುದ್ಧ ಬಲೆ ಹೆಣೆಯುವ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ.
ಟಿಎಂಸಿ ಸರ್ಕಾರಕ್ಕೆ ಈಗಾಗಲೇ ಅನೇಕ ಹಿನ್ನೆಡೆ ಅಂಶಗಳು ಸೇರಿವೆ. ಮೊದಲು, ಮಮತಾ ಬ್ಯಾನರ್ಜಿ ತಮ್ಮ ಅಳಿಯ ‘ಅಭಿಷೇಕ್ ಬ್ಯಾನರ್ಜಿ’ ಅವರಿಗೆ ಮಣೆ ಹಾಕುತ್ತಿದ್ದಾರೆ ಎಂಬ ಆರೋಪ ಪಕ್ಷದೊಳಗಡೆಯೇ ಕೇಳಿ ಬರುತ್ತಿದೆ. ಈ ಭಾರಿ ಸರ್ಕಾರ ಅಧಿಕಾರಕ್ಕೆ ಬಂದರೇ, ತಮ್ಮ ಅಳಿಯನಿಗೆ ಅಧಿಕಾರ ಕೊಡಬಹುದು ಎಂದು ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಇನ್ನೊಂದು, 2024 ಜನವರಿ 5 ರಂದು ಇ.ಡಿ ಅಧಿಕಾರಿಗಳು ಟಿಎಂಸಿ ನಾಯಕ ‘ಶೇಖ್ ಶಹಜಹಾನ್’ ಮನೆಯ ಮೇಲೆ ದಾಳಿ ನಡೆಸುವ ಸಮಯದಲ್ಲಿ ಅಧಿಕಾರಿಗಳ ಮೇಲೆಯೇ ಹಲ್ಲೆ ನಡೆಸಲಾಗಿತ್ತು. ಅದರಲ್ಲಿ ಪ್ರಮುಖ ಆರೋಪಿಯೇ ಶೇಖ್ ಶಹಜಹಾನ್ ಆಗಿದ್ದರು. 2024 ಫೆಬ್ರವರಿ 28 ರಂದು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದರು. ಇದರ ಜೊತೆಗೆ ಸಂದೇಶ್ ಖಾಲಿ ಗ್ರಾಮದಲ್ಲಿ ಭೂಕಬಳಿಕೆ ಮತ್ತು ಲೈಂಗಿಕ ದೌರ್ಜನ್ಯದ ಆರೋಪಗಳ ಮೇಲೆ ಪರಗಣ ಜಿಲ್ಲೆಯ ನ್ಯಾಯಾಲಯವು ಶೇಖ್ ಶಹಜಹಾನ್ ಅವರ ಮೇಲೆ ಬಂಧನದ ಆದೇಶ ಹೊರಡಿಸಿತ್ತು. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ತೃಣಮೂಲ ಕಾಂಗ್ರೆಸ್ ನಾಯಕರ ವಿರುದ್ಧ ಭೂಕಬಳಿಕೆ ಆರೋಪಗಳು ಮಮತಾ ಸರ್ಕಾರಕ್ಕೆ ಹೊಡೆತ ಕೊಡಬಹುದು.
ಆರಂಭದಲ್ಲಿ ಬಂಗಾಳದ ಜನರು ಕಾಂಗ್ರೆಸ್ ಜೊತೆಗಿದ್ದರು, 1977ರ ಬಳಿಕ ಎಡಪಕ್ಷಗಳೊಂದಿಗೆ ಧೃವೀಕರಣಗೊಂಡರು. ಪ್ರಸ್ತುತ, 2011ರಿಂದ ಟಿಎಂಸಿ ಜೊತೆಗೆ ಬೆಸೆದುಕೊಂಡಿದ್ದಾರೆ. ಇದೇ ಸಮಯದಲ್ಲಿ, ಬಿಜೆಪಿಯೂ ತನ್ನ ನೆಲೆಯನ್ನು ಬಲಪಡಿಸಿಕೊಂಡಿದೆ. ಈಗ ಟಿಎಂಸಿ ಮತ್ತು ಬಿಜೆಪಿ ನಡುವಿನ ನೇರ ಪೈಪೋಟಿಯ ಕಣವಾಗಿ ಬಂಗಾಳ ಕಾಣುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಯನ್ನು ಮಣಿಸುವ ಉದ್ದೇಶದಿಂದ ರೂಪಗೊಂಡ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದಲ್ಲಿ ಟಿಎಂಸಿ ಕೂಡ ಭಾಗವಾಗಿತ್ತು. ಆದರೆ, ಬಂಗಾಳದಲ್ಲಿ ಸೀಟು ಹಂಚಿಕೆಯ ವಿಚಾರವಾಗಿ ಒಮ್ಮತಕ್ಕೆ ಬಾರದ ಕಾರಣವೊಡ್ಡಿ ಚುನಾವಣೆಗೂ ಮುನ್ನವೇ 2024ರ ಜನವರಿಯಲ್ಲಿ ಮೈತ್ರಿಯನ್ನು ತೊರೆಯಿತು. ಅದಾದ ನಂತರ, ಈಗ ಮತ್ತೆ ಕಾಂಗ್ರೆಸ್-ಟಿಎಂಸಿ ಮೈತ್ರಿಯ ಚರ್ಚೆ ಮುನ್ನೆಲೆಯಲ್ಲಿದೆ. ಆದರೆ, ಈಗ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು ಟಿಎಂಸಿ ಜೊತೆ ಮೈತ್ರಿಗೆ ಮಾಡಿಕೊಳ್ಳಬಹುದಾ? ಅಥವಾ ಕಾಂಗ್ರೆಸ್ ಪಕ್ಷ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಟಿಎಂಸಿಗೆ ಬರುವ ‘ಮತ’ಗಳು ಛಿದ್ರವಾಗಬಹುದಾ? ಇವೆಲ್ಲ ಪ್ರಶ್ನೆಗಳು ಮುಖ್ಯವಾಗಿವೆ.
3 ದಶಕಕ್ಕೂ ಹೆಚ್ಚು ಕಾಲ ಬಂಗಾಳದ ಅಧಿಕಾರ ಚುಕ್ಕಾಣೆ ಹಿಡಿದ ಎಡಪಕ್ಷಗಳು ಟಿಎಂಸಿ ಜೊತೆ ಮೈತ್ರಿಮಾಡಿಕೊಂಡರೆ ಬಿಜೆಪಿಯನ್ನು ಎದುರು ಹಾಕಿಕೊಳ್ಳುವುದು ಸುಲಭವಾಗಬಹುದೇ? ಜೊತೆಗೆ ಕಳೆದ ಹದಿನೈದು ವರ್ಷಗಳಲ್ಲಿ ತನ್ನ ಅಸ್ಥಿತ್ವವನ್ನೇ ಕಳೆದುಕೊಂಡಿರುವ ಎಡಪಕ್ಷವು ಮೈತ್ರಿ ಮಾಡಿಕೊಳ್ಳದೆ ಸ್ಪರ್ಧಿಸಿದರೆ, ಬಂಗಾಳದ ಮತ ಬ್ಯಾಂಕ್ ಅನ್ನು ವಿಭಜಿಸುವ ಸಾಧ್ಯತೆಯು ಕಡಿಮೆ ಇದೆ.
ಅಥವಾ, ಈ ಚುನಾವಣೆಯಲ್ಲಿ ಕಾಂಗ್ರೆಸ್-ಎಡಪಕ್ಷಗಳು ಮೈತ್ರಿಯಲ್ಲಿ ಕಣಕ್ಕಿಳಿದರೆ, ಉತ್ತರ ಬಂಗಾಳ, ಮಾಲ್ಡಾ ಹಾಗೂ ಮುರ್ಷಿದಾಬಾದ್‌ನಲ್ಲಿ ಪಕ್ಷಗಳ ಮತ ಹಂಚಿಕೆಯ ಹೆಚ್ಚುವ ಸಾಧ್ಯತೆ ಹೆಚ್ಚಿದೆ. ಆದರೆ, ಈ ಮೈತ್ರಿ ಸಾಧ್ಯತೆಯೇ ಇನ್ನೂ ಗೊಂದಲದಲ್ಲಿದೆ. ಜೊತೆಗೆ ಮೈತ್ರಿ ಆಗುವುದೇ ಅನುಮಾನವಾಗಿದೆ.





