ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ನಜೀರಾಬಾದ್‌ನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ನಜೀರಾಬಾದ್‌ನ ಗೋದಾಮಿನಲ್ಲಿ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡು ದುರ್ಘಟನೆ ಸಂಭವಿಸಿದೆ. ಸುಟ್ಟುಹೋದ ಗೋದಾಮಿನಿಂದ ಈವರೆಗೆ 11 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಇನ್ನೂ, ಮೂವರು ಕಾಣೆಯಾಗಿದ್ದು, ಅವರ ಪತ್ತೆಗಾಗಿ ಶೋಧ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹಗಳು ಬಹುತೇಕ ಸುಟ್ಟುಹೋಗಿದ್ದು, ಅವರ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲು ಅಧಿಕಾರಿಗಳಿಗೆ ಬರುಯಿಪುರ ಪೊಲೀಸ್ ಜಿಲ್ಲಾ ಎಸ್‌ಪಿ ಸುಭೇಂದ್ರ ಕುಮಾರ್ ಸೂಚಿಸಿದ್ದಾರೆ. ಡಿಎನ್‌ಎ ಪರೀಕ್ಷೆಗಾಗಿ ಅಧಿಕಾರಿಗಳು ನ್ಯಾಯಾಲಯದ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಗೋದಾಮಿನ ಮಾಲೀಕ, ಡೆಕೋರೇಟರ್ ಸಂಸ್ಥೆಯ ಮುಖ್ಯಸ್ಥ ಗಂಗಾಧರ್ ದಾಸ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅವಘಡಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಬಂಗಾಳದ ಮಮತಾ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.




