‌ದೇಶಾದ್ಯಂತ ಭಾರೀ ಮಳೆ; ಅವಾಂತರ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳೇನು?

Date:

ದೇಶದ ಕೆಲವು ಭಾಗಗಳಲ್ಲಿ ಸೇರಿದಂತೆ ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದೆ. ಮಳೆ ಅವಾಂತರದಿಂದ ಅಲ್ಲಲ್ಲಿ ಗುಡ್ಡ ಕುಸಿತಗಳು ಕಂಡುಬರುತ್ತಿವೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈಲು ಮತ್ತು ವಾಹನ ಸಂಚಾರ ವ್ಯತ್ಯಯವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂತರ ಜಿಲ್ಲಾ ಸಂಪರ್ಕ ಕಡಿತಗೊಂಡಿದೆ.

ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪುದು ಕೇಂದ್ರದಲ್ಲಿ ರಾಜ್ಯದಲ್ಲೇ ಅತ್ಯಧಿಕ, 18.95 ಸೆಂ.ಮೀ ಮಳೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜಿಲ್ಲೆಯ 34 ಕೇಂದ್ರಗಳಲ್ಲಿ 10 ಸೆಂ.ಮೀಗಿಂತ ಅಧಿಕ ಮಳೆಯಾಗಿದ್ದು, ಪುತ್ತೂರಿನ ಕೆದಂಬಾಡಿಯಲ್ಲಿ ಜಿಲ್ಲೆಯ ಅತಿ ಕಡಿಮೆ, 4.5 ಸೆಂ.ಮೀ ಮಳೆಯಾಗಿದೆ.

ದಕ್ಷಿಣ ಕನ್ನಡ ಮಂಗಳೂರು–ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ 169ರ ವಾಮಂಜೂರು ಸಮೀಪದ ತಿರುವೈಲ್ ಗ್ರಾಮದ ತೆತ್ತಿಕಲ್‌ ಎಂಬಲ್ಲಿ ಶನಿವಾರ ರಾತ್ರಿ ಗುಡ್ಡ ಕುಸಿತವಾಗಿ ರಸ್ತೆಯ ಒಂದು ಭಾಗಕ್ಕೆ ಬೃಹತ್‌ ಕಲ್ಲುಗಳು ಮತ್ತು ಮಣ್ಣು ಬಿದ್ದ ಕಾರಣ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಯಿತು. ಇಲ್ಲಿ ಕಳೆದ ಮಳೆಗಾಲದಲ್ಲೂ ಕುಸಿತ ಉಂಟಾಗಿ ಆತಂಕ ಮೂಡಿತ್ತು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಮಂಗಳೂರು ನಗರ ಸಮೀಪದ ಪಡೀಲ್ ಮತ್ತು ಜೋಕಟ್ಟೆ ನಡುವೆ ರೈಲು ಹಳಿಯ ಮೇಲೆ ಗುಡ್ಡದ ಮಣ್ಣು ಬಿದ್ದ ಕಾರಣ ಶನಿವಾರ ರಾತ್ರಿಯಿಂದ ರೈಲು ಸಂಚಾರ ವ್ಯತ್ಯಯವಾಯಿತು. ಈ ಭಾಗದಲ್ಲಿ ಸಾಗುವ ಮತ್ತು ಮಂಗಳೂರು ಸೆಂಟ್ರಲ್‌, ಮಂಗಳೂರು ಜಂಕ್ಷನ್‌ನಿಂದ ಹೊರಡುವ ರೈಲುಗಳು ಮಣ್ಣು ತೆರವು ಕಾರ್ಯ ಮುಗಿಯುವವರೆಗೆ ತಡವಾಗಿ ಸಾಗಲಿವೆ ಎಂದು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಲಾಗಿದೆ.

ಮಂಗಳೂರು ನಗರದ ಕಂಕನಾಡಿಯ ಸುವರ್ಣ ಲೇನ್‌ನಲ್ಲಿ ಆವರಣ ಗೋಡೆಯೊಂದು ಎದುರು ಭಾಗದ ಮನೆಯ ಕಾಂಪೌಂಡ್‌ಗೆ ಬಡಿದು ಗೇಟ್ ತುಂಡಾಗಿ ಮನೆಯ ಅಂಗಳದಲ್ಲಿ ಬಿದ್ದ ಘಟನೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ತಾಣಗಳಲ್ಲಿ  ಹರಿದಾಡಿದೆ. ಗೋಡೆ ಗೇಟ್‌ಗೆ ಬಡಿಯುವಾಗ ಸಮೀಪದ ಟ್ರಾನ್ಸ್‌ಫಾರ್ಮರ್‌ನಿಂದ ಕಿಡಿ ಹಾರಿದೆ. ಇದು ನಡೆದಾಗ ಯಾರೂ ಹೊರಗೆ ಇರಲಿಲ್ಲ.

ನಗರದ ಶಿವಬಾಗ್‌ನಲ್ಲೂ ಆವರಣ ಗೋಡೆ ಕುಸಿದಿದ್ದು ಸಮೀಪದ ಒಂಟಿ ಮನೆಯಲ್ಲಿ ವಾಸವಾಗಿದ್ದ ಕುಟುಂಬವನ್ನು ಜೋಡುಕಟ್ಟೆಯ ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕಂಕನಾಡಿ ಬಳಿಯ ನಾಗುರಿ ಜನವಸತಿ ಪ್ರದೇಶದಲ್ಲಿ ಗುಡ್ಡ ಸಣ್ಣ ಪ್ರಮಾಣದಲ್ಲಿ ಕುಸಿದಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಬಿಟ್ಟು ಬಿಟ್ಟು ಮಳೆ ಸುರಿದಿದೆ.  ನಗರದ ಹಲವೆಡೆ ರಸ್ತೆಗಳಲ್ಲಿ ನೀರು ಸಂಗ್ರಹವಾದ ಕಾರಣ ವಾಹನ ಸಂಚಾರಕ್ಕೆ ತೊಡಕಾಯಿತು. ಕುಂದಾಪುರ, ಬೈಂದೂರು, ಬ್ರಹ್ಮಾವರ, ಕಾರ್ಕಳ, ಹೆಬ್ರಿ, ಕಾಪು ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟ ಪ್ರದೇಶದಲ್ಲಿ ಪುನಃ ಭೂಕುಸಿತ ಸಂಭವಿಸಿದೆ. ಇದೇ ಘಟ್ಟದಲ್ಲಿ ಶನಿವಾರವೂ ಕುಸಿತ ಉಂಟಾಗಿ ವಾಹನ ಸಂಚಾರ ಸ್ಥಗಿತವಾಗಿತ್ತು.

ಮುಂಜಾಗೃತಾ ಕ್ರಮವಾಗಿ ತಾತ್ಕಾಲಿಕವಾಗಿ ಕೆರೆಕಟ್ಟೆ, ಎಸ್ ಕೆ ಬಾರ್ಡರ್ ಮೂಲಕ ಉಡುಪಿ ಮತ್ತು ಮಂಗಳೂರು ಕಡೆ ಸಾಗುವ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಪರ್ಯಾಯವಾಗಿ ಆಗುಂಬೆ ಮಾರ್ಗದಲ್ಲಿ ಸಂಚರಿಸಲು ಸೂಚಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ  ಗಾಳಿಯ ರಭಸಕ್ಕೆ ಹಲವೆಡೆ ಮರಗಳು ಉರುಳಿ, ಮನೆಗಳಿಗೆ ಹಾನಿಯುಂಟಾ ಗಿದೆ. ಭಟ್ಕಳದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಸುಂಕದಮಕ್ಕಿ ನೆಮ್ಮಾರು ಸಮೀಪ ಭಾರೀ ಮಳೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೆ ಗುಡ್ಡಕುಸಿತ ಉಂಟಾಗಿದ್ದು, ಶೃಂಗೇರಿಯಿಂದ ಉಡುಪಿ ಮತ್ತು ಮಂಗಳೂರು ಸಂಪರ್ಕಿಸುವ ಮಾರ್ಗ ಕಡಿತಗೊಂಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರು ತಾಲೂಕುಗಳ ಶಾಲೆ ಮತ್ತು ಅಂಗನವಾಡಿಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ.  ಚಿಕ್ಕಮಗಳೂರು, ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲ್ಲೂಕುಗಳ ಶಿಶುಪಾಲನ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ 13 ಸೆಂ.ಮೀನಷ್ಟು ಭಾರೀ ಮಳೆ ಸುರಿದಿದೆ. ಶಾಂತಳ್ಳಿಯಲ್ಲಿ 7 ಸೆಂ.ಮೀ, ಸಂಪಾಜೆ, ವಿರಾಜಪೇಟೆಯಲ್ಲಿ ತಲಾ 6 ಸೆಂ.ಮೀ, ಮಡಿಕೇರಿಯಲ್ಲಿ 5 ಸೆಂ.ಮೀ ಮಳೆಯಾಗಿದೆ. 

ಮಡಿಕೇರಿ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಬಿರುಸಿನಿಂದ ಮಳೆಯಾಗಿದೆ. ಜೋರಾದ ಗಾಳಿಯೊಂದಿಗೆ ಶನಿವಾರ ತಡರಾತ್ರಿ ಆರಂಭವಾದ ಮಳೆ ಭಾನುವಾರ ದಿನವಿಡೀ ಸುರಿಯಿತು. ಈ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಸೋಮವಾರ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾರಂಗಿ ಜಲಾಶಯದ ಮಟ್ಟ 2851.73 ಅಡಿ ಇದ್ದು(ಗರಿಷ್ಠ ಮಟ್ಟ 2,859 ಅಡಿ), ಸದ್ಯ, 3,208 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುಂಜಾಗೃತಾ ಕ್ರಮವಾಗಿ 3,750 ಕ್ಯೂಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಕಳೆದೆರೆಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ರಾಜ್ಯಾದ್ಯಂತ ಹಲವು ಅವಾಂತರಗಳು ಸೃಷ್ಟಿಯಾಗಿವೆ. ಇದೇ ವೇಳೆ ಗೋಡೆ ಕುಸಿತದಿಂದ ವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಆಯನೂರು ಬಳಿಯಿರುವ ಮಂಡಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಡುಗಡಿಯಲ್ಲಿ ಸಿದ್ದಮ್ಮ ಎಂಬುವವರು ನಿನ್ನೆ ರಾತ್ರಿ ಗೋಡೆ ಕುಸಿತದಿಂದ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಹೇಮಾವತಿ, ಪರಶುರಾಮ್‌, ಪಲ್ಲವಿ ಹಾಗೂ ಚೇತನ್‌ ಎಂಬುವವರಿಗೆ ಗಾಯಗಳಾಗಿವೆ.

ಹುಬ್ಬಳ್ಳಿ–ಧಾರವಾಡದಲ್ಲಿಯೂ ಭಾನುವಾರ ಕೆಲ ಸಮಯ ಮಳೆಯಾಗಿದ್ದು, ಹುಬ್ಬಳ್ಳಿ ನಗರದಲ್ಲಿ ಸಾಯಂಕಾಲವಿಡೀ ಜಿಟಿಜಿಟಿ ಮಳೆಯಾಗಿದೆ.

ಪುಣೆಯ ಮಾವಲ್‌ ತಾಲೂಕಿನ ಕುಂದಾಮಲ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕಬ್ಬಿಣದ ಸೇತುವೆ ಭಾನುವಾರ ಮಧ್ಯಾಹ್ನ ಕುಸಿದಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಇಲ್ಲಿ ಭಾರೀ ಮಳೆಯಾಗಿದ್ದು, ನದಿಯಲ್ಲಿ ನೀರಿನ ಹರಿವು ಹೆಚ್ಚಿತ್ತು. ಆದರೆ, ಸೇತುವೆ ಕುಸಿದ ವೇಳೆ ಮಳೆಯಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿಯೂ ಭಾನುವಾರ ಭಾರೀ ಮಳೆ, ಮಿಂಚಿನ ಹೊಡೆತಕ್ಕೆ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ವಿವಿಧೆಡೆ ಮಳೆ ಸಂಬಂಧಿ ಅನಾಹುತಗಳಿಂದ 8 ಮಂದಿ ಪ್ರಾಣ ಕಳೆದುಕೊಂಡಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಮುಂಬೈ, ಸಿಂಧುದುರ್ಗ, ಧುಲೆ, ನಾಸಿಕ್‌, ಸಂಭಾಜಿನಗರ, ನಂದೂರ್‌ಬರ್‌, ಅಮರಾವತಿ ಜಿಲ್ಲೆಗಳಲ್ಲಿ ಮಿಂಚಿನ ಹೊಡೆತದಿಂದ ಇವರು ಮೃತಪಟ್ಟಿದ್ದಾರೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳಾದ ರತ್ನಗಿರಿ, ರಾಯಗಢ ಜಿಲ್ಲೆಗಳಿಗೆ ಹವಮಾನ ಇಲಾಖೆಯು ‘ರೆಡ್‌ ಅಲರ್ಟ್‌’ ಘೋಷಿ ಸಿದ್ದು, ಪಾಲ್ಘರ್, ಠಾಣೆ, ಸಿಂಧುದುರ್ಗ, ಪುಣೆಯ ಘಾಟಿ ಪ್ರದೇಶಗಳು, ಸತಾರಾ, ಕೊಲ್ಹಾಪುರ ಜಿಲ್ಲೆಗಳಿಗೆ ‘ಆರೆಂಜ್‌ ಅಲರ್ಟ್‌’ ಘೋಷಿಸಲಾಗಿದೆ.

ಕೊಂಕಣ ತೀರದ ಪ್ರಮುಖ ನದಿಗಳು, ರತ್ನಗಿರಿ ಜಿಲ್ಲೆಯ ಜಗ್‌ಬುಡಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನದಿ ನೀರಿನ ಮಟ್ಟ ಉಕ್ಕಿ ಹರಿದರೆ, ಖೇಡ್‌, ಅಲ್ಸುರೆ, ಛಿಂಚಘಢ, ಪ್ರಭುವಾಡಿ ಜಿಲ್ಲೆಗಳಲ್ಲಿ ಸಮಸ್ಯೆ ಉಂಟಾಗಲಿದೆ ಎಂದು ವಿಪತ್ತು ನಿರ್ವಹಣಾ ತಂಡವು ವರದಿಯಲ್ಲಿ ತಿಳಿಸಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ರಾಜ್ಯ ವಿಪತ್ತು ನಿರ್ವಹಣಾ ಪಡೆಯನ್ನು (ಎಸ್‌ಡಿಆರ್‌ಎಫ್‌) ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ.

ಎಸ್‌ಡಿಆರ್‌ಎಫ್‌ ಬಿಡುಗಡೆ ಗೊಳಿಸಿದ ವರದಿ ಪ್ರಕಾರ ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಭಾನುವಾರ ಬೆಳಿಗ್ಗೆ 11ರವರೆಗೆ, ‘ರತ್ನಗಿರಿ ಜಿಲ್ಲೆಯಲ್ಲಿ ಗರಿಷ್ಠ ಮಳೆಯಾಗಿದ್ದು, (8.81 ಸೆಂ.ಮೀ.) ರಾಯಗಢದಲ್ಲಿ 6.5 ಸೆಂ.ಮೀ., ಸಿಂಧುದುರ್ಗದಲ್ಲಿ 4.3 ಸೆಂ.ಮೀ., ಠಾಣೆಯಲ್ಲಿ 2.9 ಸೆಂ.ಮೀ. ಯವತ್‌ಮಾಲ್‌ ಜಿಲ್ಲೆಯಲ್ಲಿ 2.7 ಸೆಂ.ಮೀ. ಮಳೆಯಾಗಿದೆ.

ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಮೂರು ಮಂದಿ ಮಳೆಯ ಪರಿಣಾಮಗಳಿದಾಗಿ ಹಾಗೂ ಉತ್ತರ ಪ್ರದೇಶದಲ್ಲಿ 11 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಕೇರಳದ ಕಾಸರಗೋಡು, ಕಣ್ಣೂರು, ವಯನಾಡ್, ಕೋಯಿಕ್ಕೋಡ್ ಹಾಗೂ ಮಲಪ್ಪುರ ಜಿಲ್ಲೆಗಳಿಗೆ ಸೋಮವಾರದವರೆಗೆ ಹವಾಮಾನ ಇಲಾಖೆಯು ‘ರೆಡ್ ಅಲರ್ಟ್’ ಘೋಷಿಸಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿ ಎರಡು ದಿನಗಳ ಅವಧಿಯಲ್ಲಿ ಮುಂಗಾರು ತೀವ್ರಗೊಂಡಿದೆ. ಮಳೆಗೆ ಸಂಬಂಧಿಸಿದ ಅವಘಡಗಳಲ್ಲಿ ಮೂವರು ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಆಂಧ್ರಪ್ರದೇಶದ ವಿವಿಧೆಡೆಗಳಲ್ಲಿ ಜೂನ್‌ 19ರವರೆಗೂ ಭಾರೀ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುನ್ಸೂಚನೆ ನೀಡಿದೆ.

ಉತ್ತರ ಪ್ರದೇಶದ ಪ್ರಯಾಗರಾಜ್, ಸಂಭಲ್, ಗೋರಖಪುರ ಹಾಗೂ ಬಿದ್ನೌರ್ ಜಿಲ್ಲೆಗಳಲ್ಲಿ ಸಿಡಿಲು ಬಡಿದು 11 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.  

ಮಳೆಯು ಪ್ರಕೃತಿಯ ವರದಾನವಾದರೂ, ಅತಿವೃಷ್ಟಿ ಅಥವಾ ಅನಿಯಮಿತ ಮಳೆಯಿಂದಾಗಿ ಉಂಟಾಗುವ ಅವಾಂತರಗಳು ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತವೆ. ಹಿಂದಿನ ಕೆಲವು ಗಮನಾರ್ಹ ಮಳೆ ಅವಾಂತರಗಳಿಂದ ಎಚ್ಚೆತ್ತುಕೊಂಡು ಪ್ರಸ್ತುತ ಮಳೆಗಾಲ ಆರಂಭವಾಗುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

2015ರಲ್ಲಿ ತಮಿಳುನಾಡಿನ ಚೆನ್ನೈನಲ್ಲಿ ಅತಿವೃಷ್ಟಿಯಿಂದಾಗಿ ಭಾರೀ ಪ್ರವಾಹ ಉಂಟಾಯಿತು. ಕೊಯಮ್ಬೇಡು, ಅಡಯಾರ್ ನದಿಗಳು ಉಕ್ಕಿ ಹರಿದವು. ಇದರ ಪರಿಣಾಮ ಸಾವಿರಾರು ಮನೆಗಳು ಜಲಾವೃತ, ರಸ್ತೆ-ರೈಲು ಸಂಚಾರ ಸ್ಥಗಿತಗೊಂಡು, 500ಕ್ಕೂ ಹೆಚ್ಚು ಜನರು ಮೃತಪಟ್ಟರು. ಕಳಪೆ ಒಳಚರಂಡಿ ವ್ಯವಸ್ಥೆ, ಅತಿಕ್ರಮಣದಿಂದ ಕೆರೆ-ಕಾಲುವೆಗಳ ಮುಚ್ಚುವಿಕೆ ಮತ್ತು ಹವಾಮಾನ ಎಚ್ಚರಿಕೆಯನ್ನು ನಿರ್ಲಕ್ಷಿಸಿದ್ದು ಇಂತಹ ಘಟನೆಗಳಿಗೆ ಕಾರಣವಾಯಿತು.

2018ರ ಆಗಸ್ಟ್‌ ವೇಳೆ ಕೇರಳದಲ್ಲಿ ಶತಮಾನದ ಅತಿದೊಡ್ಡ ಪ್ರವಾಹವು ಸಂಭವಿಸಿತ್ತು. 483 ಜನರು ಮೃತಪಟ್ಟರು, 14 ಜಿಲ್ಲೆಗಳು ಸಂಕಷ್ಟಕ್ಕೀಡಾದವು. ಇದರಿಂದ ಲಕ್ಷಾಂತರ ಜನರು ನಿರಾಶ್ರಿತರಾದರು, ಬೆಳೆ ನಾಶ, ಮೂಲಸೌಕರ್ಯಗಳು ಹಾನಿಯಾದವು.

2023ರಲ್ಲಿ ಯಮುನಾ ನದಿಯ ಜಲಮಟ್ಟ ಗರಿಷ್ಠಕ್ಕೇರಿದ್ದರಿಂದ ದೆಹಲಿ-ಎನ್‌ಸಿಆರ್ ಪ್ರವಾಹದಿಂದಾಗಿ ದೆಹಲಿಯ ಕೆಲವು ಭಾಗಗಳು ಮುಳುಗಡೆಯಾದವು. ಇದರಿಂದ ಶಾಲೆ-ಕಾಲೇಜುಗಳು ಬಂದ್ ಆಗಿದ್ದವು. ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಅಲ್ಲದೆ ಜನರಿಗೆ ಆಹಾರ-ನೀರಿನ ಕೊರತೆ ಎದುರಾಯಿತು. ಸರಿಯಾದ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದು ಮತ್ತು ನದಿಯ ಅತಿಕ್ರಮಣವೇ ಇಂತಹ ದುರ್ಘಟನೆಗಳಿಗೆ ಕಾರಣವಾಯಿತು.

2024ರ ಮುಂಗಾರಿನಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಾದ ಯಲಹಂಕ, ಕೆ ಆರ್ ಪುರಂ ಪ್ರದೇಶಗಳಂತಹ ಹಲವೆಡೆ ಜಲಾವೃತವಾಯಿತು. ಕೆರೆಗಳ ಅತಿಕ್ರಮಣ, ಕಾಲುವೆಗಳನ್ನು ಮುಚ್ಚಿರುವುದು ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯ ಕೊರತೆ ಇರುವುದರಿಂದ ಇಂತಹ ಸಮಸ್ಯೆಗಳು ಕಂಡುಬರುತ್ತಲೇ ಇವೆ. 2025ರ ಮುಂಗಾರು ಪೂರ್ವ ಮಳೆಗೆ ಬೆಂಗಳೂರಿನ ಕೆಲವೆಡೆ ಅವಂತರಗಳು ಸೃಷ್ಟಿಯಾಗಿರುವುದು ಕೂಡ ಗಮನಾರ್ಹ.

ಮಳೆ ಅವಾಂತರಗಳನ್ನು ತಡೆಗಟ್ಟಬೇಕಾದರೆ ನಗರಗಳಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸಬೇಕು. ಕಾಲುವೆಗಳನ್ನು ಆಗಾಗ ಶುಚಿಗೊಳಿಸಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ತಡೆಗಟ್ಟುವ ಕಾರ್ಯಕ್ರಮಗಳನ್ನು ಜನಪಿಯಗೊಳಿಸಬೇಕು. ಉದಾಹರಣೆಗೆ, ಸಿಂಗಾಪೂರ್‌ನಂತಹ ದೇಶಗಳು ಒಳಚರಂಡಿಯನ್ನು ಯಾಂತ್ರಿಕವಾಗಿ ನಿರ್ವಹಿಸುತ್ತವೆ. ಇಂತಹ ಯೋಜನೆಗಳನ್ನು ಭಾತರದಲ್ಲಿಯೂ ಕೂಡ ಅಳವಡಿಸಿಕೊಳ್ಳುವುದು ಉತ್ತಮ.

ಮನೆ, ಅಪಾರ್ಟ್‌ಮೆಂಟ್, ಸರ್ಕಾರಿ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಇದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗುತ್ತದೆ. ಅಲ್ಲದೆ ಪ್ರವಾಹವೂ ಕಡಿಮೆಯಾಗುತ್ತದೆ.

ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಆಕ್ರಮಣಕಾರರಿಂದ ರಕ್ಷಿಸಬೇಕು. ಕಾಲುವೆಗಳನ್ನು ಪುನರ್‌ಸ್ಥಾಪನೆ ಮಾಡಬೇಕು. ಚೆನ್ನೈನ 2015ರ ಪ್ರವಾಹದ ಬಳಿಕ ಕೆರೆ ಸಂರಕ್ಷಣೆಯ ಕಾಯ್ದೆ ಜಾರಿಗೆ ಬಂದಿತಾದರೂ, ಅನುಷ್ಠಾನದ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ.

ಇದನ್ನೂ ಓದಿದ್ದೀರಾ? ಈಶಾನ್ಯ ಮತ್ತು ದಕ್ಷಿಣ ಭಾರತದಲ್ಲಿ ಪ್ರವಾಹ ಸಾಧ್ಯತೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಭಾರತೀಯ ಹವಾಮಾನ ಇಲಾಖೆ(IMD) ಸೇರಿದಂತೆ ಹಲವು ಸಂಸ್ಥೆಗಳಿಂದ ಬರುವ ಹವಾಮಾನ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಜನರಿಗೆ ಎಸ್‌ಎಂಎಸ್, ಆ್ಯಪ್‌ಗಳ ಮೂಲಕ ಮಾಹಿತಿ ತಲುಪಿಸಬೇಕು. ಯಮುನಾ, ಕಾವೇರಿಯಂತಹ ನದಿಗಳ ತೀರದಲ್ಲಿ ಅಕ್ರಮ ನಿರ್ಮಾಣವನ್ನು ತಡೆಗಟ್ಟಲು ಕಠಿಣ ಕಾನೂನು ಜಾರಿಗೊಳಿಸಬೇಕು.

ಹಿಂದಿನ ಮಳೆ ಅವಾಂತರಗಳಿಂದಾದ ಪಾಠಗಳನ್ನು ಅರಿತು, ಸರ್ಕಾರ, ಸಂಸ್ಥೆಗಳು ಮತ್ತು ಜನರು ಒಗ್ಗೊಟ್ಟಿಗೆ ಕೆಲಸ ಮಾಡಿದರೆ ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ಕಡಿಮೆ ಮಾಡಬಹುದು. ಮಳೆಯನ್ನು ಶಾಪವೆಂದು ಭಾವಿಸದೆ, ಮುನ್ನೆಚ್ಚರಿಕೆಯಿಂದ ಮಳೆಯ ಅವಾಂತರವನ್ನು ತಡೆಗಟ್ಟಲು ಮುಂದಾಗಬೇಕು. ಜತೆಗೆ ಮಳೆ ನೀರನ್ನು ಸಂರಕ್ಷಣೆ ಮಾಡುವುದರಿಂದ ಇದು ನಮಗೆ ವರದಾನವಾಗಬಹುದು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪುದುಚೆರಿ ಚುನಾವಣೆ | ‘ಇಂಡಿಯಾ’ ಗೊಂದಲ ನಿವಾರಣೆ: ಕಾಂಗ್ರೆಸ್ 16, ಡಿಎಂಕೆ 14 ಕ್ಷೇತ್ರಗಳಲ್ಲಿ ಸ್ಪರ್ಧೆ

ಪುದುಚೆರಿಯ 'ಇಂಡಿಯಾ' ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್‌ ಪಕ್ಷಗಳ...

ತಮಿಳುನಾಡು ಚುನಾವಣೆ | ಎಐಎಡಿಎಂಕೆ 178, ಬಿಜೆಪಿ 27 ಕ್ಷೇತ್ರಗಳಲ್ಲಿ ಸ್ಪರ್ಧೆ

ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರಲೇ ಬೇಕೆಂದು ಪಣ...

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ; ವಿಧಾನಸಭೆಯಲ್ಲಿ ಮಸೂದೆ ಅಂಗೀಕಾರ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರ...

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...