ಅಧಿಕೃತ ಕೆಲಸದ ಅವಧಿಯ ಬಳಿಕ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಇಮೇಲ್‌ಗಳಿಗೆ ಉತ್ತರಿಸದಿರಲು ಅವಕಾಶ ನೀಡುವ ಸಂಪರ್ಕ ಕಡಿತ ಹಕ್ಕು ಮಸೂದೆಯನ್ನು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಲೆ ಲೋಕಸಭೆಯಲ್ಲಿ ಶುಕ್ರವಾರ ಮಂಡಿಸಿದ್ದಾರೆ.
12 ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಬಗ್ಗೆ ಚರ್ಚೆಗೆ ಆಗ್ರಹಿಸಿ ಗದ್ದಲದ ನಡುವೆಯೂ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗಿದೆ. ಈ ಕಾಯ್ದೆಯು ಅಧಿಕೃತ ಕೆಲಸದ ಸಮಯದ ಬಳಿಕ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು, ಸಂದೇಶಗಳು ಮತ್ತು ಇಮೇಲ್‌ಗಳನ್ನು ನಿರಾಕರಿಸುವ ಕಾನೂನುಬದ್ಧ ಹಕ್ಕನ್ನು ನೀಡುತ್ತದೆ.
ಇದನ್ನು ಓದಿದ್ದೀರಾ? ಸಾಮಾಜಿಕ – ಶೈಕ್ಷಣಿಕ ಸಮೀಕ್ಷೆಯ ಅವಧಿ ವಿಸ್ತರಣೆ; ಶಾಲಾ ಸಮಯಯೂ ಬದಲಾವಣೆ
ಏನಿದು ಸಂಪರ್ಕ ಕಡಿತ ಹಕ್ಕು ಮಸೂದೆ?
ಪ್ರಸ್ತುತ ಹಲವು ಸಂಸ್ಥೆಗಳಲ್ಲಿ ಕೆಲಸದ ಸಮಯದ ನಂತರ ಅಥವಾ ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿಕ ಕರೆಗಳು, ಇಮೇಲ್‌ಗಳಿಗೆ ಪ್ರತಿಕ್ರಿಯಿಸುವುದು ಕಡ್ಡಾಯವಾಗಿದೆ. ಆದರೆ ಈ ರೀತಿ ಪ್ರತಿಕ್ರಿಯಿಸಲು ಒತ್ತಾಯಿಸಬಾರದು ಎಂದು ಈ ಮಸೂದೆ ಹೇಳುತ್ತದೆ. ಕರೆಗಳನ್ನು ನಿರಾಕರಿಸುವ ಹಕ್ಕನ್ನು ಈ ಮಸೂದೆ ನೀಡುತ್ತದೆ
- ಕೆಲಸದ ಅವಧಿ ಬಳಿಕ ಕರೆಗಳು, ಇಮೇಲ್‌ಗಳು ಅಥವಾ ಸಂದೇಶಗಳಿಗೆ ಉದ್ಯೋಗಿಗಳು ಉತ್ತರಿಸಬೇಕಾಗಿಲ್ಲ.
- ಪ್ರತಿಕ್ರಿಯಿಸಲು ನಿರಾಕರಿಸಿದರೆ ಯಾವುದೇ ಉದ್ಯೋಗಿ ಶಿಸ್ತು ಕ್ರಮವನ್ನು ಆ ಉದ್ಯೋಗಿಯ ಮೇಲೆ ಕೈಗೊಳ್ಳುವಂತಿಲ್ಲ.
- ಅಗತ್ಯವಿದ್ದರೆ, ಉದ್ಯೋಗದಾತರು ಮತ್ತು ಉದ್ಯೋಗಿಗಳು ತುರ್ತು ಸಂಪರ್ಕ ನಿಯಮಗಳ ಬಗ್ಗೆ ಪರಸ್ಪರ ಒಪ್ಪಿಗೆ ಮಾಡಿಕೊಳ್ಳಬಹುದು.
- ಈ ಹಕ್ಕನ್ನು ಉಲ್ಲಂಘಿಸುವ ಸಂಸ್ಥೆಗಳಿಗೆ ಒಟ್ಟು ಉದ್ಯೋಗಿ ಸಂಭಾವನೆಯ ಶೇಕಡ 1ರಷ್ಟು ದಂಡ ವಿಧಿಸಲು ಕಾಯ್ದೆ ಅವಕಾಶ ನೀಡುತ್ತದೆ.
ತುರ್ತು ಸಂಪರ್ಕ ನಿಯಮಗಳು ಏನು ಹೇಳುತ್ತದೆ?
ಉದ್ಯೋಗಿಗಳ ವೈಯಕ್ತಿಕ ಸಮಯವನ್ನು ರಕ್ಷಿಸುವ ಮಸೂದೆಯು ನಿಜವಾದ ತುರ್ತು ಪರಿಸ್ಥಿತಿಗಳನ್ನು ಪರಿಹರಿಸಲು ಒಂದು ಕಾರ್ಯವಿಧಾನವನ್ನು ಸಹ ಪ್ರಸ್ತಾಪಿಸುತ್ತದೆ. ಕೆಲಸದ ಸಮಯದ ಬಳಿಕ ಉದ್ಯೋಗಿಗಳನ್ನು ಸಂಪರ್ಕಿಸಲು ಪರಸ್ಪರ ಒಪ್ಪಂದ ಮಾಡಿದ ನಿಯಮಗಳನ್ನು ರೂಪಿಸಲು ಸಮಿತಿಯನ್ನು ರಚಿಸಲು ಈ ಮಸೂದೆ ಅವಕಾಶ ನೀಡುತ್ತದೆ. ಸಾಮಾನ್ಯ ಉದ್ಯೋಗ ಅವಧಿಗಿಂತ ಹೆಚ್ಚುವರಿ ಕೆಲಸ ಮಾಡಿದರೆ ಅಧಿಕಾವಧಿ ವೇತನಕ್ಕೆ ಅರ್ಹರಾಗಿರಬೇಕು ಎಂದು ಮಸೂದೆಯು ಹೇಳುತ್ತದೆ.
ಪ್ರಸ್ತುತ ಉದ್ಯೋಗದ ಒತ್ತಡದಿಂದಾಗಿ ಹಲವು ಮಂದಿ ನಿದ್ರಾಹೀನತೆ, ಒತ್ತಡ, ಮಾನಸಿಕ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಜನರ ಆರೋಗ್ಯದ ಮೇಲೆಯೂ ಪ್ರಭಾವ ಬೀರುತ್ತಿದೆ. ಈ ನಿಟ್ಟಿನಲ್ಲಿ ಮಸೂದೆ ಅತ್ಯಗತ್ಯ ಎಂದು ಸುಪ್ರಿಯಾ ಸುಲೆ ಹೇಳಿದ್ದಾರೆ.





