ಪಶ್ಚಿಮ ಬಂಗಾಳದಲ್ಲಿನ ಇಂಡಿಯನ್ ಪೊಲಿಟಿಕ್ ಆ್ಯಕ್ಷನ್ ಕಮಿಟಿ (ಐ-ಪ್ಯಾಕ್) ಕಚೇರಿ ಮತ್ತು ಅದರ ನಿರ್ದೇಶಕ ಪ್ರತೀಕ್ ಜೈನ್ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ (ಜ.8) ಬೆಳಗ್ಗೆ 7 ಗಂಟೆಯಿಂದ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ಟಿಎಂಸಿಯ ರಹಸ್ಯ ದಾಖಲೆಗಳನ್ನು ಸಂಗ್ರಹಿಸಲು ಈ ದಾಳಿ ನಡೆಸಲಾಗಿದೆ’ ಎಂದು ಆರೋಪಿಸಿದ್ದಾರೆ.
ಈ ಪ್ರತೀಕ್ ಜೈನ್ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷದ ಐಟಿ ವಿಭಾಗ ಮುಖ್ಯಸ್ಥರು ಹೌದು. ಮೊದಲು ಪ್ರತೀಕ್ ಅವರ ಮನೆಯಲ್ಲಿ ಇ ಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿರುವ ವಿಷಯ ತಿಳಿದ ತಕ್ಷಣ ಕೋಲ್ಕತ್ತಾ ಪೊಲೀಸ್ ಆಯುಕ್ತ ಮನೋಜ್ ವರ್ಮಾ ಅವರು ಸ್ಥಳಕ್ಕೆ ತಲುಪಿದ್ದಾರೆ. ಆದಾದ ನಂತರ ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜೈನ್ ಅವರ ನಿವಾಸಕ್ಕೆ ಆಗಮಿಸಿ, ಕನಿಷ್ಠ 20-25 ನಿಮಿಷ ಮನೆಯ ಒಳಗಡೆ ಇದ್ದು, ಅವರ ನಿವಾಸದಿಂದ ಹೊರಬರುವಾಗ ಹಸಿರು ಬಣ್ಣದ ಕಡತ ಹಿಡಿದುಕೊಂಡು ಬಂದಿದ್ದಾರೆ.
‘ಇ.ಡಿ ಅಧಿಕಾರಿಗಳು ನಮ್ಮ ಐಟಿ ಸೆಲ್ ಉಸ್ತುವಾರಿಯ ನಿವಾಸ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಅವರು ನನ್ನ ಪಕ್ಷಕ್ಕೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಮತ್ತು ಹಾರ್ಡ್ ಡಿಸ್ಕ್‌ಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದರು’ ಎಂದು ಮನೆಯಿಂದ ಹೊರಬಂದ ತಕ್ಷಣ ಮಮತಾ ಬ್ಯಾನರ್ಜಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯತಂತ್ರ ಮತ್ತು ಅಭ್ಯರ್ಥಿಗಳ ವಿವರಗಳು ಅದರಲ್ಲಿದ್ದವು. ನಾನು ಅವುಗಳನ್ನು ಮನೆಯಿಂದ ಹೊರತಂದಿದ್ದೇನೆ’ ಎಂದು ಮಮತಾ ಹೇಳಿದರು.
ಇದನ್ನು ಓದಿ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಮನೆಯ ನಂತರ ಐ-ಪ್ಯಾಕ್ ಕಚೇರಿಯಲ್ಲಿಯೂ ಇ.ಡಿ ತಂಡ ಶೋಧ ಕಾರ್ಯ ನಡೆಸಿದೆ. ಮಧ್ಯಾಹ್ನ 1 ಗಂಟೆಯ ವೇಳೆಗೆ ಮಮತಾ ಬ್ಯಾನರ್ಜಿ ಐ-ಪ್ಯಾಕ್ ಕಚೇರಿಗೂ ಬಂದಿದ್ದಾರೆ. ವಿಐಪಿಗಳಿಗೆ ಪ್ರತ್ಯೇಕ ಲಿಫ್ಟ್ ಇದ್ದರೂ, ಸಾಮಾನ್ಯ ಜನರ ಲಿಫ್ಟ್ ಬಳಸಿ ಕಚೇರಿಯಿರುವ 11ನೇ ಮಹಡಿಗೆ ಬಂದಿದ್ದಾರೆ. ದಾಳಿಯ ಸಂದರ್ಭದಲ್ಲಿ ಕೇಂದ್ರೀಯ ಭದ್ರತಾ ಪಡೆಯ ಸಿಬ್ಬಂದಿ ಕಟ್ಟಡದ ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಮುಚ್ಚಿದ್ದರು.
ಪ್ರತೀಕ್ ಜೈನ್ ಬರುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಮಮತಾ ಹೇಳಿದರು. ಪ್ರತೀಕ್ ಅವರು ಕಚೇರಿಗೆ ಬಂದ ಬಳಿಕ ಸಂಜೆ 4.14ರ ಸುಮಾರಿಗೆ ಅಲ್ಲಿಂದ ತೆರಳಿದ್ದಾರೆ. ತೆರಳುವ ವೇಳೆ ಮಮತಾ ಆಪ್ತರು ಮತ್ತು ಪೊಲೀಸ್ ಅಧಿಕಾರಿಗಳ ನೆರವಿನಿಂದ ಕಚೇರಿಯಿಂದಲೂ ಅನೇಕ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಈ ಬೆಳವಣಿಗೆ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಮತಾ ಅವರು ಏನನ್ನೋ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ.
ಇ.ಡಿ ಅಧಿಕಾರಿಗಳು ಧೀಡಿರನೆ ಶೋಧ ನಡೆಸಿದ್ದೇಕೆ?
ಪ್ರತೀಕ್ ಜೈನ್ ನೇತೃತ್ವದ ಐ-ಪ್ಯಾಕ್ ಕಚೇರಿಯಿಂದ ಬಹುಕೋಟಿ ರೂಪಾಯಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ನಡೆಸಿದಿದೆ ಎಂದು ಆರೋಪಿಸಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
‘ಈ ಶೋಧ ಕಾರ್ಯದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ. ಕಲ್ಲಿದ್ದಲು ಹಗರಣ ಪ್ರಕರಣ ಮತ್ತು ಆ ಕುರಿತ ಅಪರಾಧಗಳಿಗೆ ಸಂಬಂಧಿಸಿದಂತೆ ಶೋಧ ನಡೆಸಲಾಗಿದೆ. ಹವಾಲಾ ವಹಿವಾಟಿನ ನಂಟು ಈ ಪ್ರಕರಣಕ್ಕೆ ಇದೆ’ ಎಂದು ಇ.ಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ತನಿಖೆ ಅಡ್ಡಿ ಆರೋಪದ ಮೇಲೆ ಇ.ಡಿ ಹೈಕೋರ್ಟ್ ಮೊರೆ
ಐ-ಪ್ಯಾಕ್ ಕಚೇರಿ ಹಾಗೂ ಅದರ ಮುಖ್ಯಸ್ಥನ ಮನೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿರುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಇ.ಡಿ ಗುರುವಾರ(ಜ.8) ಕೋಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದೆ.
‘ಶೋಧ ಕಾರ್ಯಕ್ಕೂ ಬಿಡದೆ ಅಲ್ಲಿದ್ದ ಫೈಲ್‌ಗಳು, ಹಾರ್ಡ್ ಡಿಸ್ಕ್‌ಗಳು, ಅನೇಕ ಕಡತಗಳು ಹಾಗೂ ಮೊಬೈಲ್ ಫೋನ್ ಗಳನ್ನು ತೆಗೆದುಕೊಂಡು ಹೊರಗೆ ನಡೆದಿದ್ದಾರೆ. ಮಮತಾ ಹಾಗೂ ಕೋಲ್ಕತ್ತಾ ಪೊಲೀಸ್ ಆಯುಕ್ತರ ನಡೆ ತನಿಖೆಗೆ ಅಡ್ಡಿ ಉಂಟುಮಾಡಿದೆ’ ಎಂದು ಇ.ಡಿ ಆರೋಪಿಸಿದೆ.
ಐ-ಪ್ಯಾಕ್ ಎಂದರೇನು?
ಇಂಡಿಯನ್ ಪೊಲಿಟಿಕ್ ಆ್ಯಕ್ಷನ್ ಕಮಿಟಿ (ಐ-ಪ್ಯಾಕ್) ಅನ್ನು 2014ರ ಲೋಕಸಭಾ ಚುನಾವಣೆಗೂ ಮುನ್ನ ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಸ್ಥಾಪಿಸಿದ್ದರು. ಈ ಸಂಸ್ಥೆಯು ಯಾವುದೇ ರಾಜಕೀಯ ಪಕ್ಷಗಳಿಗೆ ಸಲಹಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
ಪ್ರಶಾಂತ್ ಕಿಶೋರ್ ಅವರು ಜನ ಸುರಾಜ್ ಹೆಸರಿನ ರಾಜಕೀಯ ಪಕ್ಷವನ್ನು ಸ್ಥಾಪಿಸಿದ ಬಳಿಕ ‘ಐ-ಪ್ಯಾಕ್’ ನಿಂದ ಹೊರಬಂದಿದ್ದರು. ಈಗ ಸಂಸ್ಥೆಯ ಜವ್ದಾರಿಯನ್ನು ಪ್ರತೀಕ್ ಜೈನ್ (ಐಐಟಿ ಬಾಂಬೆ), ರಿಷಿ ರಾಜ್ ಸಿಂಗ್(ಐಐಟಿ ಕಾನ್ಪುರ್) ಹಾಗೂ ವಿನೇಶ್ ಚಂಡೆಲ್ (ಎನ್ಎಲ್ಐಯು ಭೋಪಾಲ್) ನಿರ್ದೇಶಕರಾಗಿ ಮುನ್ನೆಡೆಸುತ್ತಿದ್ದಾರೆ.
ಐ-ಪ್ಯಾಕ್ ಸಂಸ್ಥೆಯ ವೆಬ್‌ಸೈಟ್‌ನಲ್ಲಿ “ರಾಜಕೀಯವಾಗಿ ದೂರದೃಷ್ಟಿ ಹಾಗೂ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ನಾಯಕರೊಂದಿಗೆ ಇದು ಕಾರ್ಯನಿರ್ವಹಿಸುತ್ತದೆ” ಎಂದು ಬರೆದುಕೊಳ್ಳಲಾಗಿದೆ.
“ಯಾವುದೇ ರಾಜಕೀಯ ಪಕ್ಷಗಳ ಭಾಗವಾಗಿರದೆ, ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಹಾಗೂ ಭಾರತದಲ್ಲಿ ಚುನಾವಣಾ ಪ್ರಕ್ರಿಯೆಯ ಭಾಗವಾಗಲು ಮತ್ತು ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರಲು ಯುವಕರಿಗೆ ಒಂದು ಅನನ್ಯ ಅವಕಾಶವನ್ನು ಐ-ಪ್ಯಾಕ್ ಒದಗಿಸುತ್ತದೆ” ಎಂದು ಹೇಳಿದೆ.
ಮೊದಲು 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿದೆ. ಆಗ ಪ್ರಶಾಂತ್ ಕಿಶೋರ್ ಅವರು ಇದರ ಮುಖ್ಯಸ್ಥರಾಗಿದ್ದರು. ನಂತರ 2015ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರಿಗೆ, 2017ರಲ್ಲಿ ಪಂಜಾಬ್ ನಲ್ಲಿ ಅಮರಿಂದರ್ ಸಿಂಗ್, 2017ರಲ್ಲಿ ಉತ್ತರ ಪ್ರದೇಶದ ಚುನಾವಣೆಯಲ್ಲಿ ರಾಹುಲ್ ಗಾಂಧಿಗೆ, 2019ರಲ್ಲಿ ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ಅವರಿಗೆ, 2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಉದ್ಧವ್ ಠಾಕ್ರೆಗೆ, 2020ರಲ್ಲಿ ದೆಹಲಿ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ಗೆ, 2021ರ ತಮಿಳುನಾಡು ಚುನಾವಣೆ ವೇಳೆ ಎಂ.ಕೆ.ಸ್ಟಾಲಿನ್ ಅವರಿಗೆ, 2021ರ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಮಮತಾ ಬ್ಯಾನರ್ಜಿಗೆ, 2024ರ ಆಂಧ್ರಪ್ರದೇಶದ ಚುನಾವಣೆ ವೇಳೆ ಜಗನ್ ಮೋಹನ್ ರೆಡ್ಡಿಗೆ, 2024ರ ಪಶ್ಚಿಮ ಬಂಗಾಳ ಚುನಾವಣೆ ವೇಳೆ ಮತ್ತೆ ಮಮತಾ ಬ್ಯಾನರ್ಜಿಗೆ ಹಾಗೂ 2025ರ ದೆಹಲಿ ಚುನಾವಣೆ ವೇಳೆ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆಂಬಲ ಹಾಗೂ ರಾಜಕೀಯ ಸಲಹೆಗಳನ್ನು ನೀಡುತ್ತ ಬಂದಿದೆ.
ಐ-ಪ್ಯಾಕ್ ಹಾಗೂ ಮಮತಾ ಬ್ಯಾನರ್ಜಿ
ಈ ಸಂಸ್ಥೆಯು 2019ರ ಲೋಕಸಭಾ ಚುನಾವಣೆ ನಂತರ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷಕ್ಕೆ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಜೊತೆಗೆ ಕೆಲಸ ಮಾಡುತ್ತಾ ಬಂದಿದೆ.
2021ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ‘ದೀದಿ-10 ಭರವಸೆಗಳು” (DIDI’R 10 ONGIKAR) ಎಂಬ ಶೀರ್ಷಿಕೆಯಡಿಯಲ್ಲಿ ಈ ಸಂಸ್ಥೆಯು ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಕೆಲಸ ಆರಂಭಿಸಿತು. ನಂತರ 2024ರ ಸಾರ್ವತ್ರಿಕ ಚುನಾವಣೆಗಾಗಿ ಐ-ಪ್ಯಾಕ್ ಸಂಸ್ಥೆಯು ದೀದಿಯ ಪ್ರಮಾಣ-2024 (DIDI’R SOPOTH-2024) ಎಂದು ಸಹ ಉಲ್ಲೇಖಿಸಿ ಪ್ರಚಾರ ಮಾಡಿತ್ತು.
2024 ಲೋಕಸಭಾ ಚುನಾವಣೆಯ ವೇಳೆ ಪಶ್ಚಿಮ ಬಂಗಾಳದಲ್ಲಿ ಐ-ಪ್ಯಾಕ್ ಸಂಸ್ಥೆಯು 9 ಕೋಟಿಗೂ ಅಧಿಕ ಜನರನ್ನು ನೇರವಾಗಿ ಮಾತನಾಡಿಸಿದೆ. ತನ್ನ ರಾಜಕೀಯ ತಂತ್ರಗಾರಿಕೆ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸಂಸದರು ಗೆಲ್ಲುವಿಗೆ ಸಹಕರಿಸಿದೆ. ಒಟ್ಟು 42 ಲೋಕಸಭಾ ಸ್ಥಾನಗಳಿರುವ ಪಶ್ಚಿಮ ಬಂಗಾಳದಲ್ಲಿ 29 ಸ್ಥಾನಗಳನ್ನು ಟಿಎಂಸಿ ತನ್ನದಾಗಿಸಿಕೊಂಡು ಇತಿಹಾಸ ಸೃಷ್ಟಿಸುವಲ್ಲಿ ಐ-ಪ್ಯಾಕ್ ಬಹಳ ಕೆಲಸ ಮಾಡಿದೆ.
ಜೊತೆಗೆ ಐ-ಪ್ಯಾಕ್ ಸಂಸ್ಥೆಯ ಮುಖ್ಯಸ್ಥರಾದ ಪ್ರತೀಕ್ ಜೈನ್, ಟಿಎಂಸಿ ಸರ್ಕಾರದ ಐಟಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ ಅನೇಕ ರಾಜಕೀಯ ಸಲಹೆಗಳನ್ನು ಸಹ ಪ್ರತೀಕ್ ನೀಡಿದ್ದಾರೆ. ಪ್ರತೀಕ್ ಟಿಎಂಸಿ ಪಕ್ಷಕ್ಕೆ ಸಂಬಂಧಪಟ್ಟ ಅನೇಕ ದಾಖಲೆಗಳನ್ನು ಹೊಂದಿದ್ದರು. ಮಮತಾ ಬ್ಯಾನರ್ಜಿ ಅವರ ಆಪ್ತವಲಯದಲ್ಲಿ ಇವರು ಸಹ ಒಬ್ಬರಾಗಿದ್ದರು.
ಕೇವಲ ಚುನಾವಣಾ ಕಾರ್ಯತಂತ್ರವನ್ನು ರೂಪಿಸುವುದು ಮಾತ್ರವಲ್ಲದೆ ಮಮತಾ ಅವರ ನಂಬಿಕೆಗೆ ಸಂಸ್ಥೆ ಅರ್ಹವಾಗಿತ್ತು. ಐ-ಪ್ಯಾಕ್ ನಿರ್ದೇಶಕರೆಲ್ಲರೂ ಪಶ್ಚಿಮ ಬಂಗಾಳದ ಚುನಾವಣಾ ರಾಜಕೀಯದಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಈ ವರ್ಷ (2026) ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆ ಬರುತ್ತಿದ್ದು, ಅದಕ್ಕಾಗಿ ಅನೇಕ ಕಾರ್ಯತಂತ್ರಗಳನ್ನು ಸಂಸ್ಥೆಯು ರೂಪಿಸುತ್ತಿತ್ತು. ಮಮತಾ ಬ್ಯಾನರ್ಜಿ ಮತ್ತು ಐ-ಪ್ಯಾಕ್ ಸಂಸ್ಥೆಯೂ ಈ ಚುನಾವಣೆಯನ್ನು ತಮ್ಮದಾಗಿಸಿಕೊಳ್ಳುವ ನಿರ್ಧಾರ ಮಾಡಿದ್ದರು ಎಂದು ತಿಳಿದು ಬಂದಿದೆ.





