ಮಾಧವ ಗಾಡ್ಗೀಳ್ ಸಮಿತಿಯ ವರದಿಯಲ್ಲೇನಿತ್ತು? ಸರ್ಕಾರಗಳೇ ಅಪಪ್ರಚಾರ ನಡೆಸಿ ಕಲ್ಲು ಹೊಡೆದದ್ದು ಯಾಕೆ?

Date:

ಪಶ್ಚಿಮ ಘಟ್ಟಗಳಲ್ಲಿ ಮಾನವ ನಿರ್ಮಿತ ಬಂಡವಾಳ ಬೆಳೆಯತೊಡಗಿದಂತೆ ಪ್ರಕೖತಿ ನಿರ್ಮಿತ ಇಡುಗಂಟು ಶರವೇಗದಲ್ಲಿ ಕರಗತೊಡಗಿತು ಎಂಬುದು ಪ್ರೊ.ಮಾಧವ ಗಾಡ್ಗೀಳ್ ಸಮಿತಿಯು ಪಶ್ಚಿಮ ಘಟ್ಟಗಳ ಕುರಿತು ನೀಡಿದ ವರದಿಯಲ್ಲಿನ ಕಠೋರ ಸತ್ಯ. ಅಭಿವೖದ್ಧಿ ಹಾದಿಯ ದೊಡ್ಡ ಅಡ್ಡಗಲ್ಲು ಎಂದು ಗಾಡ್ಗೀಳ್ ವರದಿಗೆ ಕಲ್ಲು ಹೊಡೆದ ರಾಜ್ಯ ಸರ್ಕಾರಗಳು ಹಾಲಿ ಅಭಿವೖದ್ಧಿಯ ಪರಿಕಲ್ಪನೆ, ಅದರ ಅಂತರ್ಗತ ದೌರ್ಬಲ್ಯಕ್ಕೆ ಕುರುಡಾದವು.

ಭೂಮಿಯ ಇನ್ಯಾವುದೇ ಭಾಗದಲ್ಲಿ ಕಂಡು ಬಾರದೆ ಪಶ್ಚಿಮ ಘಟ್ಟಗಳಿಗೆ ಮಾತ್ರವೇ ಸೀಮಿತ ಆಗಿರುವ ವಿರಳಾತಿವಿರಳ ಸ್ಥಾನಿಕ ಸಸ್ಯ ಮತ್ತು ಪ್ರಾಣಿ ಪ್ರಬೇಧಗಳ ಇರವನ್ನು ಎಲ್ಲ ಕಾಲಕ್ಕೂ ಅಳಿಸಿ ಹಾಕಿಬಿಡುವ ಜಲ ವಿದ್ಯುತ್ ಯೋಜನೆಗಳಿಗೆ, ಹೊಸ ರೈಲ್ವೆ ಮಾರ್ಗಗಳು, ಹೆದ್ದಾರಿಗಳು ಮುಂತಾದ ನಿರ್ಮಾಣಗಳಿಗೆ ಆಸ್ಪದ ನೀಡಕೂಡದು ಎಂದು ಗಾಡ್ಗೀಳ್ ಸಮಿತಿ ವಿಧಿಸಿತ್ತು.

ಶೇ.75ರಷ್ಟು ಪಶ್ಚಿಮ ಘಟ್ಟ ಪ್ರದೇಶವನ್ನು ಗಣಿಗಾರಿಕೆಯ ಲಾಭಬಡುಕತನದ ವಿನಾಶದಿಂದ ದೂರ ಇರಿಸುವಂತೆ ಶಿಫಾರಸು ಮಾಡಿತ್ತು. ಆದರೆ ಕಸ್ತೂರಿರಂಗನ್ ಸಮಿತಿ ಗಣಿ ನಿಷೇಧವನ್ನು ಶೇ.50ಕ್ಕೆ ತಗ್ಗಿಸಿ ಸಡಿಲಗೊಳಿಸಿತು. ಕರ್ನಾಟಕದ ಗುಂಡ್ಯ ಮತ್ತು ಕೇರಳದ ಅತ್ತಿರಪಳ್ಳಿ ಜಲವಿದ್ಯುತ್ ಯೋಜನೆಗಳಿಗೆ ಅಸ್ತು ಎಂದಿತು ಕಸ್ತೂರಿ ರಂಗನ್ ಸಮಿತಿ.

ಇಡೀ ಪಶ್ಚಿಮ ಘಟ್ಟಗಳ ಪ್ರದೇಶವನ್ನು ಪರಿಸರ ಸೂಕ್ಷ್ಮ ಸ್ವರೂಪಿ ಎಂದು ಸಾರಿದ್ದ ಪ್ರೊ.ಮಾಧವ ಗಾಡ್ಗೀಳ ಅಧ್ಯಕ್ಷತೆಯ ತಜ್ಞ ಸಮಿತಿಯ ವರದಿಯು ಅನುಷ್ಠಾನಯೋಗ್ಯ ಅಲ್ಲ ಎಂಬ ಟೀಕೆಯ ಹಿನ್ನೆಲೆಯಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕಸ್ತೂರಿರಂಗನ್ ಸಮಿತಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಹಿಮಾಲಯ ವಲಯಕ್ಕಿಂತ ಪುರಾತನ ಎಂದು ಪರಿಗಣಿಸಲಾಗಿರುವ ಪಶ್ಚಿಮ ಘಟ್ಟದ ಪರಿಸರವು ಜಗತ್ತಿನ ಕೆಲವೇ ಜೀವ ವೈವಿಧ್ಯ ಸಂಪತ್ತಿನ ಅಪರೂಪದ ಖಜಾನೆಗಳ ಪೈಕಿ ಒಂದು ಎಂದು ಪ್ರಸಿದ್ಧ. ವಿಶ್ವಸಂಸ್ಥೆಯ ಪರಿಸರ ವಿಭಾಗದ ಪ್ರಕಾರ ಪ್ರಮುಖವಾಗಿ ಮತ್ತು ಪ್ರತ್ಯೇಕವಾಗಿ ಭದ್ರವಾಗಿ ಮುಚ್ಚಿಟ್ಟು ಕಾಪಾಡಿಕೊಳ್ಳಬೇಕಿರುವ ಪ್ರದೇಶವಿದು.

ಹದಿನೈದು ಕೋಟಿ ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿತೆನ್ನಲಾದ ಎಣೆಯಿಲ್ಲದ ಬೆಲೆ ಕಟ್ಟಲಾಗದ ಈ ಪ್ರಾಕೖತಿಕ ಸಿರಿ ಸಂಪತ್ತಿನ ಆಳ ಅಗಲಗಳ ಕೀರ್ತನೆ- ಕೊಂಡಾಟ ವಿವಾದಾತೀತ.

ದಕ್ಷಿಣ ಭಾರತದ ಪರಿಸರ ಮತ್ತು ಅರ್ಥಿಕ ಸ್ಥಿತಿಗತಿಯ ಬೆನ್ನೆಲುಬು. ಕೖಷ್ಣೆ, ಕಾವೇರೀ, ಗೋದಾವರಿ ಅಲ್ಲದೆ ಚಕ್ರಾ, ಕಾಳಿ, ಶರಾವತಿ, ಬೇಡ್ತಿ, ಮಹದಾಯಿ, ಅಘನಾಶಿನಿ, ಕಪಿಲೆ ಮುಂತಾದ ಹತ್ತಾರು ಉಪನದಿಗಳ ಜಲರಾಶಿಯ ಜೀವಸ್ರೋತ. ಹೋಲಿಕೆಯಲ್ಲಿ ಅಮೆಜಾನ್ ಕಾಡುಗಳಿಗೆ ನಿಲುಕುವ ಈ ಜೀವಲೋಕ, ಅಳಿವಿನ ನಿರಂತರ ಬೆದರಿಕೆಯಲ್ಲಿ ದಿನ ದೂಡಿರುವ ವಿದ್ಯಮಾನ ನಮ್ಮ ನಡುವಿನ ಅತಿ ಕಠೋರ ವಾಸ್ತವ.

ಹತ್ತು ಹಲವು ಕಠೋರ ಸತ್ಯಗಳೆಡೆಗೆ ಬೊಟ್ಟು ಮಾಡಿ ತೋರಿಸಿದ ಕಾರಣವಾಗಿಯೇ ಗಾಡ್ಗೀಳ್ ಸಮಿತಿಯು ಪಶ್ಚಿಮ ಘಟ್ಟಗಳ ಕುರಿತು ಸಲ್ಲಿಸಿದ ವರದಿಯ ಮೇಲೆ ವ್ಯವಸ್ಥಿತ ದಾಳಿ ನಡೆಯಿತು. ರೈತರು, ಮೀನುಗಾರರು, ಸ್ವಯಂಸೇವಾ ಸಂಸ್ಥೆಗಳು, ತಜ್ಞರು ಹಾಗೂ ಪಂಚಾಯಿತಿ ಸದಸ್ಯರಿಂದ ಮೊದಲುಗೊಂಡು ಸಂಸದರು ಮತ್ತು ರಾಜ್ಯ- ಕೇಂದ್ರ ಸಚಿವರ ಜೊತೆ ವ್ಯಾಪಕ ಸಮಾಲೋಚನೆ ನಡೆಸಿ ಪಾರದರ್ಶಕ ವಿಧಾನದಲ್ಲಿ ವರದಿ ತಯಾರಿಸಿದ್ದರು ಮಾಧವ ಗಾಡ್ಗೀಳ್. ಸೂಕ್ಷ್ಮ ಪರಿಸರ ವಲಯಗಳನ್ನು ಅಂತಿಮವಾಗಿ ಗುರುತಿಸುವ ಕಾರ್ಯ ಸ್ಥಳೀಯ ಸಮುದಾಯಗಳು ಮತ್ತು ಪಂಚಾಯತಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆಯಬೇಕು. ಆದರೆ ಸಾರ್ವಜನಿಕ ಸಂವಾದಕ್ಕೆ ಅವಕಾಶವೇ ಸಿಗಲಿಲ್ಲ ಎಂಬುದು ಗಾಡ್ಗೀಳ್ ಅವರ ಅಸಮಾಧಾನವಾಗಿತ್ತು.

ಗಾಡ್ಗೀಳ್ ಸಮಿತಿಯ ವರದಿಯನ್ನು ಮತ್ತು ವರದಿಯಲ್ಲಿನ ಶಿಫಾರಸುಗಳ ಕುರಿತ ಜನತಾಂತ್ರಿಕ ಸಂವಾದವನ್ನು ತುಳಿದಿಡುವ ಪ್ರಯತ್ನ ಮಾಡಿದ ಆರೋಪ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲಿದೆ. ವರದಿ ಕುರಿತು ವಿಕೃತ ಅಪಪ್ರಚಾರಗಳ ಪರಿಣಾಮವಾಗಿ ಹಿತಾಸಕ್ತ ಗುಂಪುಗಳು ಎಬ್ಬಿಸಿದ ಪ್ರತಿಭಟನೆಯ ಧೂಳಿಗೆ ಕೇಂದ್ರ ಸರ್ಕಾರದ ಧೋರಣೆಯೇ ಕಾರಣ ಎಂಬುದು ಖುದ್ದು ಗಾಡ್ಗೀಳ್ ಆಪಾದಿಸಿದ್ದರು. ಅಂದು ಅಧಿಕಾರ ನಡೆಸಿದ್ದು ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ.

ಅರಣ್ಯವಾಸಿ ಬುಡಕಟ್ಟು ಜನ ಮತ್ತು ರೈತರನ್ನು ಗಾಡ್ಗೀಳ್ ವರದಿಯ ವಿರುದ್ಧ ಎತ್ತಿ ಕಟ್ಟಿದವರು ಯಾರು? ತಿರುಗಿಬಿದ್ದ ಕೈಗಾರಿಕೆ ಲಾಬಿ, ಗಣಿಗಾರಿಕೆ ಲಾಬಿ ಹಾಗೂ ರಾಜಕಾರಣಿಗಳ ಬೆಂಬಲದಿಂದ ಅರಣ್ಯ ಭೂಮಿಯನ್ನು ಕಬಳಿಸಿರುವ ಭೂ ಮಾಫಿಯಾ ಇತರೆ ಇತ್ಯಾದಿ ಆಸಕ್ತ ಹಿತಗಳು ಯಾವುವು? ಅವುಗಳಿಗೆ ಮನಮೋಹನಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಮಣಿದದ್ದು ಯಾಕೆ ಎಂಬ ಪ್ರಶ್ನೆಗೆ ಈ ದೇಶದ ಶಾಸಕಾಂಗ-ಕಾರ್ಯಾಂಗ-ನ್ಯಾಯಾಂಗಗಳ ಒಟ್ಟು ವ್ಯವಸ್ಥೆ ಉತ್ತರ ನೀಡಬೇಕಿದೆ.

ಪಶ್ಚಿಮ ಘಟ್ಟಗಳು

“ಕೈಗಾರಿಕೆಗಳಿಗೆ ಮಾರಕ, ಅರಣ್ಯವಾಸಿ ಬುಡಕಟ್ಟು ಜನರ ಹಕ್ಕುಗಳ ದಮನ ಹಾಗೂ ಘಟ್ಟಗಳ ಸಂರಕ್ಷಣೆಗೆ ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಬದಿಗೊತ್ತುವ ದೈತ್ಯಶಕ್ತಿಯ ಪ್ರಾಧಿಕಾರದ ರಚನೆ ಶಿಫಾರಸು ಮಾಡಿದೆ. ಘಟ್ಟಗಳ ಸಂರಕ್ಷಣಾ ಕಾರ್ಯದಲ್ಲಿ ಕೇಂದ್ರ- ರಾಜ್ಯ ಸರ್ಕಾರಗಳ ಅಧಿಕಾರಗಳನ್ನು ಘರ್ಷಣೆಗೆ ಹಚ್ಚಿದೆ” ಎಂದು ಗಾಡ್ಗೀಳ್ ಸಮಿತಿಯ ವರದಿಯ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಯಿತು.

ಈ ವರದಿಯ ಪುಟ ಪುಟಗಳಲ್ಲಿದ್ದದ್ದು ವಿಶ್ವದ ಅಪರೂಪದ ಜೀವ ಸಂಪತ್ತಿನ ಅಳಿವು ಉಳಿವಿನ ಮತ್ತು ಆ ಮೂಲಕ  ಅಂತಿಮವಾಗಿ ದಕ್ಷಿಣ ಭಾರತದ ಈ ಭೂಭಾಗ ಮತ್ತು ಜನಜೀವನದ ಅಳಿವು ಉಳಿವಿನ ಪ್ರಶ್ನೆ.

ಪರಿಸರ ಮತ್ತು ಅಭಿವೖದ್ಧಿಯ ನಡುವೆ ಹುಸಿ ವೈರುಧ್ಯಗಳನ್ನು ವಿಕೖತ ರೀತಿಯಲ್ಲಿ ಕಟ್ಟಿದ ಹಿತಾಸಕ್ತಿಗಳು ವರದಿಯ ಆಯ್ದ ಭಾಗಗಳನ್ನಷ್ಟೇ ಸ್ಥಳೀಯ ಭಾಷೆಗಳಿಗೆ ತರ್ಜುಮೆ ಮಾಡಿ ಹಂಚಿದವು.

ಅಸಲು ಸಂಗತಿಯೇನೆಂದರೆ ಗಾಡ್ಗೀಳ್ ಸಮಿತಿಯ ವರದಿಯು ರೈತರು ಮತ್ತು ಬುಡಕಟ್ಟು ಜನರ ವಿರುದ್ಧ ಚಕಾರ ಎತ್ತಿಲ್ಲ. ಅವರನ್ನು ಅರಣ್ಯ ಪ್ರದೇಶಗಳಿಂದ ಒಕ್ಕಲೆಬ್ಬಿಸುವ ಪ್ರಸ್ತಾಪ ವರದಿಯಲ್ಲಿ ಇಲ್ಲ. ಬದಲಾಗಿ ಪಾರಂಪರಿಕ ಮತ್ತು ಸಾವಯವ ಬೇಸಾಯ ಪದ್ಧತಿಯನ್ನು ಅವಲಂಬಿಸುವ ರೈತರಿಗೆ ಪ್ರೋತ್ಸಾಹ ಕ್ರಮದ ಶಿಫಾರಸು ಮಾಡಿತ್ತು. ಶಿಫಾರಸುಗಳನ್ನು ಜಾರಿಗೊಳಿಸುವ ಹಕ್ಕನ್ನು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಿತ್ತು.

ಪಶ್ಚಿಮ ಘಟ್ಟಗಳ ಹಾಲಿ ಪರಿಸರ ಪರಿಸ್ಥಿತಿಯನ್ನು ಅಂದಾಜು ಮಾಡಿ, ಸೂಕ್ಷ್ಮ ಪರಿಸರದ ವಲಯಗಳನ್ನು ಗುರುತಿಸಿ ಅವುಗಳ ಜತನಕ್ಕೆ 1986ರ ಪರಿಸರ ಸಂರಕ್ಷಣಾ ಕಾಯಿದೆಯ ಪ್ರಕಾರ ಅಧಿಸೂಚನೆ ಹೊರಡಿಸುವಂತೆ ಶಿಫಾರಸು ಮಾಡುವುದು ಹಾಗೂ ಸಂಬಂಧಿಸಿದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಜನರನ್ನು ಒಳಗೊಳ್ಳುವ ಸಮಾಲೋಚನಾ ಪ್ರಕ್ರಿಯೆಯ ಮೂಲಕ ಘಟ್ಟಗಳ ರಕ್ಷಣೆ ಮತ್ತು ಪುನರುಜ್ಜೀವನ ಕ್ರಮಗಳನ್ನು ಸೂಚಿಸುವುದು ಗಾಡ್ಗೀಳ್ ಸಮಿತಿಗೆ ಕೇಂದ್ರ ಸರ್ಕಾರ ಒಪ್ಪಿಸಿದ್ದ ಕೆಲಸ.

ವರದಿಯನ್ನು ಹನ್ನೊಂದು ತಿಂಗಳ ಕಾಲ ಸಾರ್ವಜನಿಕರಿಂದ ಮರೆಮಾಚಿ ಇಟ್ಟುಕೊಂಡಿತ್ತು ಕೇಂದ್ರ ಸರ್ಕಾರ. ಇನ್ನೂ ಪರಿಗಣನೆಯ ಹಂತದಲ್ಲಿರುವ ವರದಿಯನ್ನು ಬಹಿರಂಗಪಡಿಸಿದರೆ ದೇಶದ ವೈಜ್ಞಾನಿಕ ಮತ್ತು ಆರ್ಥಿಕ ಹಿತಗಳಿಗೆ ಧಕ್ಕೆ ಆಗುತ್ತದೆ ಎಂಬ ಕಾರಣವನ್ನು ಮುಂದೆ ಮಾಡಲಾಗಿತ್ತು!

ಕಡೆಗೆ ನ್ಯಾಯಾಲಯದ ಆದೇಶಕ್ಕೆ ಅನಿವಾರ್ಯವಾಗಿ ತಲೆಬಾಗಿ ಗಾಡ್ಗೀಳ್ ಸಮಿತಿಯ ವರದಿಯನ್ನು ಬಹಿರಂಗಪಡಿಸಲೇಬೇಕಾಯಿತು. ಆದರೆ ಈ ವರದಿಯ ಅಧ್ಯಯನಕ್ಕೆಂದು ಕಸ್ತೂರಿರಂಗನ್ ನೇತೃತ್ವದ ಮತ್ತೊಂದು ಸಮಿತಿಯನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. ಸರ್ಕಾರದ ಈ ನಡೆಯನ್ನು ಕುರಿತು ಎತ್ತಲಾಗಿದ್ದ ಹತ್ತು ಹಲವು ಪ್ರಶ್ನೆಗಳಿಗೆ ಕಸ್ತೂರಿರಂಗನ್ ಸಮಿತಿಯ ವರದಿ ”ಉತ್ತರ” ನೀಡಿತ್ತು!

ಗುಜರಾತಿನಿಂದ ಆರಂಭವಾಗಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ತನಕ ಹಬ್ಬಿರುವ ಸುಮಾರು 60 ಸಾವಿರ ಚದರ ಕಿ.ಮೀ.ಗಳ ವಿಸ್ತೀರ್ಣದ ಪಶ್ಚಿಮ ಘಟ್ಟಗಳಲ್ಲಿ ಸೂಕ್ಷ್ಮ ಪರಿಸರ ಹೊಂದಿರುವ ಪ್ರದೇಶದ ಪ್ರಮಾಣ ಶೇ.37ರಷ್ಟು ಮಾತ್ರ ಎಂದು ಕೆ. ಕಸ್ತೂರಿರಂಗನ್ ನೇತೖತ್ವದ ಉನ್ನತ ಸಮಿತಿ ಸಾರಿದೆ.

ಇದನ್ನೂ ಓದಿ ವಿಜಯಪುರ | ವಿಜಯ ಪತಾಕೆ ಹಾರಿಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ

ಪರಿಸರ ಪೋಷಕ ಅಭಿವೖದ್ಧಿ ಎಂಬ ತತ್ವವು ಘಟ್ಟ ಪ್ರದೇಶದ ಜೀವನೋಪಾಯ ಮತ್ತು ಆರ್ಥಿಕ ಆಯ್ಕೆಗಳನ್ನು ಮುಚ್ಚಿ ಹಾಕಬಾರದು. ಘಟ್ಟಗಳ ನಿರ್ವಹಣೆ ಮತ್ತು ಸಂರಕ್ಷಣೆ ಹೇಗೆ ಎಂಬ ಪ್ರಶ್ನೆಯ ಉತ್ತರ ಹೆಚ್ಚು ಹಸಿರುದಾಯಕ ಮತ್ತು ಪರಿಸರ ಪೋಷಕ ಆಚರಣೆಗಳತ್ತ ಸ್ಥಳೀಯ ಸಮುದಾಯಗಳನ್ನು ನಡೆಸುವುದರಲ್ಲಿ ಅಡಗಿದೆಯೇ ವಿನಾ ಆರ್ಥಿಕ ಆಯ್ಕೆಗಳನ್ನು ಮುಚ್ಚಿ ಹಾಕುವುದರಲ್ಲಿ ಇಲ್ಲ ಎಂಬ ವಾಕ್ಯದಲ್ಲಿ ಕಸ್ತೂರಿರಂಗನ್ ಸಮಿತಿಯ ವರದಿಯ ಧ್ವನಿ- ಧೋರಣೆಗಳನ್ನು ಗುರುತಿಸಬಹುದು.

umapthi
ಡಿ ಉಮಾಪತಿ
+ posts

ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ʼಈ ದಿನ.ಕಾಮ್‌ʼನ ಗೌರವ ಸಂಪಾದಕರು. ʼದೆಹಲಿ ನೋಟʼ, ʼಪದ ಕುಸಿಯೇ ನೆಲವಿಲ್ಲʼ ಇವರ ಮಹತ್ವದ ಕೃತಿಗಳು. ಕರ್ನಾಟಕ ಸರ್ಕಾರ ಸ್ಥಾಪಿಸಿರುವ ʼವಡ್ಡರ್ಸೆ ರಘುರಾಮ ಶೆಟ್ಟಿ ಸಾಮಾಜಿಕ ನ್ಯಾಯ ಪ್ರಶಸ್ತಿʼ ಪುರಸ್ಕೃತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಮೋದಿ ಅಮೆರಿಕಕ್ಕೆ 100% ಶರಣಾಗಿದ್ದಾರೆ: ರಾಹುಲ್ ಗಾಂಧಿ

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಪರಿಸ್ಥಿತಿ ಮತ್ತು ದೇಶದ ಆರ್ಥಿಕ ನೀತಿಗಳ ಕುರಿತು...

‘ಟ್ರಂಪ್ ನಿಯಂತ್ರಣದಲ್ಲಿ ಮೋದಿ’: ಲೋಕಸಭೆಯ ಭಾಷಣದಲ್ಲಿ ಅಮೆರಿಕದ ಬಗ್ಗೆ ಮೌನಕ್ಕೆ ರಾಹುಲ್ ವಾಗ್ದಾಳಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನ ಕುರಿತು ಭಾರತದ ನಿಲುವಿನ ಬಗ್ಗೆ ರಾಜಕೀಯ ವಾಗ್ದಾಳಿ ಸೋಮವಾರ...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ ರಾಷ್ಟ್ರೀಯವಾದ?

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ...

18 ಸಾವಿರ ಕೋಟಿ ರೂ. ದಾಟಿದ ದೇಶದ ಕ್ರೀಡಾ ಅರ್ಥವ್ಯವಸ್ಥೆ; ಕ್ರಿಕೆಟ್ ದರ್ಬಾರಿನಲ್ಲಿ ಸೊರಗಿದ ಇತರ ಆಟಗಳು

ಐಪಿಎಲ್‌ನಲ್ಲಿ ಕೇವಲ ಬೆಂಚ್ ಕಾಯುವ ಸಾಮಾನ್ಯ ಕ್ರಿಕೆಟ್ ಆಟಗಾರನೊಬ್ಬ ಕೋಟ್ಯಾಧಿಪತಿಯಾಗಿ ಐಷಾರಾಮಿ...