ಭಾರತದಲ್ಲಿ ಮಾನವರೊಬ್ಬರಿಗೆ ಮಂಗಳವಾರ(ಜೂ.12) ಹಕ್ಕಿ ಜ್ವರ ಪ್ರಕರಣ ಪತ್ತೆಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ದೃಢೀಕರಿಸಿದೆ. ಪಶ್ಚಿಮ ಬಂಗಾಳದ 4 ವರ್ಷದ ಮಗುವಿಗೆ ಹೆಚ್9ಎನ್2 ವೈರಸ್ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವೈರಸ್‌ಗೆ ತುತ್ತಾಗಿರುವ ಮಗುವಿಗೆ ಗಂಭೀರ ಉಸಿರಾಟದ ಸಮಸ್ಯೆ ಉಂಟಾದ ನಂತರ ಮಕ್ಕಳ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ. ಹೆಚ್9ಎನ್2 ವೈರಸ್ ಪ್ರಕರಣ ಮಾನವರಿಗೆ ಉಂಟಾದ ಎರಡನೇ ಪ್ರಕರಣವಾಗಿದ್ದು, ಈ ಮೊದಲು 2019ರಲ್ಲಿ ಮೊದಲು ವರದಿಯಾಗಿತ್ತು.
ಎರಡೂವರೆ ವರ್ಷದ ಹೆಣ್ಣು ಮಗುವಿಗೆ ಜೂನ್ 7 ರಂದು ಹೆಚ್5ಎನ್1 ಹಕ್ಕಿ ಜ್ವರವಿರುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಆಸ್ಟ್ರೇಲಿಯಾದ ಐಸಿಯುವಿನಲ್ಲಿ ದಾಖಲಿಸಲಾಗಿತ್ತು. ಈ ಮಗುವಿನ ಕುಟುಂಬ ಇತ್ತೀಚಿಗಷ್ಟೆ ಭಾರತಕ್ಕೆ ಪ್ರಯಾಣ ಬೆಳೆಸಿತ್ತು.
ಹೆಚ್9ಎನ್2 ಹಕ್ಕಿ ಜ್ವರ ಹರಡುವಿಕೆ, ಲಕ್ಷಣಗಳು
ಹೆಚ್9ಎನ್2 ಹಕ್ಕಿ ಜ್ವರ ‘ಎ’ ಮಾದರಿ ವೈರಸ್ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಾರ ಪ್ರಾಣಿ, ಪಕ್ಷಿಗಳ ನಡುವೆ ಪಸರಿಸುತ್ತಾದರೂ, ಮಾನವರಿಗೂ ಹರಡುತ್ತದೆ. ವೈರಸ್ ಇರುವ ಪ್ರಾಣಿ, ಪಕ್ಷಿಗಳ ಮೂಲಕ ಸಂಪರ್ಕಕ್ಕೆ ಬರುವ ಮನುಷ್ಯರಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಈ ವೈರಸ್ ಹರಡುತ್ತದೆ. ಮೂಲ ‘ಎ’ ಮಾದರಿ ವೈರಸ್‌ನಲ್ಲಿ ಇದನ್ನು ಹಂದಿ ಜ್ವರ, ಹಕ್ಕಿ ಜ್ವರ ಅಥವಾ ಇತರ ಪ್ರಾಣಿಗಳ ವೈರಸ್ ಎಂದು ವರ್ಗೀಕರಿಸಲಾಗುತ್ತದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ಸಂಪುಟದಲ್ಲಿ ಬಲಾಢ್ಯರು ಮುಂದಕ್ಕೆ, ಹಿಂದುಳಿದವರು ಹಿಂದಕ್ಕೆ
ಈ ವೈರಸ್ ಶ್ವಾಸಕೋಶದ ಮೇಲ್ಭಾಗದಿಂದ ಸೌಮ್ಯವಾಗಿ ಹರಡುವುದರ ಜೊತೆ ಗಂಭೀರವಾದ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಕಣ್ಣುಗಳು ಕೆಂಪಾಗಿ ಉರಿಯುವುದು, ಅತಿಸಾರದಂತಹ ಜೀರ್ಣಾಂಗ ಸಮಸ್ಯೆ, ಅತಿಯಾದ ತಲೆ ನೋವು ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುವ ರೋಗಗಳು ಹೆಚ್9ಎನ್2 ಹಕ್ಕಿ ಜ್ವರದ ಪ್ರಮುಖ ಲಕ್ಷಣಗಳಾಗಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಈ ಹಕ್ಕಿಜ್ವರದಿಂದ ಸಾವು ಕೂಡ ಸಂಭವಿಸಬಹುದು.
ಮಾನವರಿಗೆ ತಗಲುವ ಈ ವೈರಸ್‌ನ ಗಂಭೀರತೆಯನ್ನು ಪತ್ತೆ ಹಚ್ಚಲು ಮತ್ತಷ್ಟು ಪ್ರಯೋಗಾಲಯಗಳ ಪರೀಕ್ಷೆಯ ಅಗತ್ಯವಿದೆ. ಆರೋಗ್ಯ ಸಂಸ್ಥೆ ಈ ವೈರಸ್ ಅನ್ನು ಪತ್ತೆ ಹಚ್ಚಲು ನಿಯಮಿತವಾಗಿ ಅಣ್ವಿಕ ವಿಧಾನಗಳನ್ನು ಬಳಸಿಕೊಂಡು ಪರೀಕ್ಷೆ ನಡೆಸುತ್ತಿದೆ.
ಪ್ರಾಣಿಗಳಲ್ಲಿ ಹೆಚ್9ಎನ್2 ವೈರಸ್ ಅಥವಾ ಮತ್ಯಾವುದೇ ವೈರಸ್ ಕಂಡುಬಂದರೆ ಅವುಗಳ ಸಂಪರ್ಕದಿಂದ ದೂರವಿರಬೇಕು. ಗಂಭೀರ ವೈರಸ್ ತಗುಲಿದ ಪ್ರಾಣಿಗಳನ್ನು ಒಂದು ವೇಳೆ ಸಂಪರ್ಕಿಸಿದರೆ ಸೋಪುಗಳ ಮೂಲಕ ಮೈಕೈಯನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಾಕು ಪ್ರಾಣಿಗಳಲ್ಲಿ ಯಾವುದೇ ವೈರಸ್ ಉಂಟಾದರೆ ತಕ್ಷಣ ಪಶು ವೈದ್ಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.





