ಕಾಮ್ರೇಡ್ ಎಚ್ ವಿ ಅನಂತ ಸುಬ್ಬರಾವ್ ಅವರು ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಎಐಟಿಯುಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಾರ್ಮಿಕ ಮುಖಂಡ ಪ್ರೊ. ಬಾಬು ಮ್ಯಾಥ್ಯೂ ಆಯ್ಕೆಯಾಗಿದ್ದಾರೆ. ಡಿ.16ರಂದು ಬೆಂಗಳೂರಿನಲ್ಲಿ ನಡೆದ ಎಐಟಿಯುಸಿ ರಾಜ್ಯ ಸಮಿತಿ ಸಭೆಯಲ್ಲಿ ಕಾಮ್ರೇಡ್ ಬಾಬು ಮ್ಯಾಥ್ಯೂ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.
ನೂತನ ಅಧ್ಯಕ್ಷರಾದ ಬಾಬು ಅವರ ಮಾರ್ಗದರ್ಶನದಲ್ಲಿ ಎಐಟಿಯುಸಿ ರಾಜ್ಯ ಸಮಿತಿ ಮಾತ್ರವಲ್ಲದೆ ಕಾರ್ಮಿಕ ಚಳವಳಿಯೂ ಬಳಗೊಳ್ಳಲಿದೆ ಎಂಬ ಭರವಸೆಯನ್ನು ಈ ಹಿಂದಿನ ಅಧ್ಯಕ್ಷ ಕಾಮ್ರೇಡ್ ಅನಂತ ಸುಬ್ಬರಾವ್ ಅವರು ಹೇಳಿದ್ದಾರೆ. ಸಭೆಗೆ ಮಾರ್ಗದರ್ಶಕರಾಗಿ ದೆಹಲಿಯಿಂದ ಆಗಮಿಸಿದ್ದ ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ಜಿತ್ ಕೌರ್ ಅವರೂ ಅದೇ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನುಡಿ ನಮನ | ಅಚ್ಯುತಾನಂದನ್ – ಕುಟ್ಟನಾಡಿನ ಕೃಷಿ ಕಾರ್ಮಿಕರ ನಡುವೆ ಉದಯಿಸಿದ ನಾಯಕ
1920ರ ಅಕ್ಟೋಬರ್ 31ರಂದು ಮುಂಬೈನ ಎಂಪೈರ್ ಥಿಯೇಟರ್‌ನಲ್ಲಿ ಸ್ಥಾಪನೆಯಾದ ಕಾರ್ಮಿಕ ಸಂಘಟನೆ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ). ಸ್ವಾತಂತ್ರ್ಯ ಹೋರಾಟಗಾರ ಲಾಲಾ ಲಜಪತ್ ರಾಯ್ ಈ ಸಂಘಟನೆಯ ಮೊದಲ ಅಧ್ಯಕ್ಷರಾಗಿದ್ದರು. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಯನ್ನು ಸುಧಾರಿಸುವ ಧ್ಯೇಯವನ್ನು ಹೊಂದಿರುವ ಸಂಘಟನೆ ಇದಾಗಿದ್ದು, ಕಾರ್ಮಿಕ ರಂಗದ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಿರುವ ಬಾಬು ಅವರು ಈ ಧ್ಯೇಯವನ್ನು ಪಾಲಿಸುತ್ತಾರೆ ಎಂಬ ನಿರೀಕ್ಷೆ ಕಾರ್ಮಿಕ ರಂಗದ್ದು.
ಬಾಬು ಮ್ಯಾಥ್ಯೂ ಯಾರು?
ಬಾಬು ಮ್ಯಾಥ್ಯೂ ಅವರ ತಂದೆ ದಿವಂಗತ ವಲ್ಲಿಕಾಡ್ ಜೋಸೆಫ್ ಮ್ಯಾಥ್ಯೂ. ಬಾಬು ಅವರ ಪತ್ನಿ ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಗೈನೆಕಾಲಜಿ ಆಂಕೊಲಾಜಿ ವಿಭಾಗದ ಮುಖ್ಯಸ್ಥರಾಗಿ ಮತ್ತು ಶಸ್ತ್ರಚಿಕಿತ್ಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಕಾನೂನು ಬೋಧನೆಯಲ್ಲಿ ತೊಡಗಿರುವ ಬಾಬು ಅವರು ಬಿ.ಎಸ್ಸಿ ಪದವಿ ಪಡೆದ ನಂತರ, ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾನೂನು ಪದವಿ(ಎಲ್‌ಎಲ್‌ಬಿ) ಮತ್ತು ಸ್ನಾತಕೋತ್ತರ ಪದವಿ (ಎಲ್‌ಎಲ್‌ಎಂ) ಪಡೆದಿದ್ದಾರೆ.
ಎಲ್‌ಎಲ್‌ಎಂನಲ್ಲಿ ಕಾರ್ಮಿಕ ಕಾನೂನು ಮತ್ತು ಆಡಳಿತಾತ್ಮಕ ಕಾನೂನು ವಿಷಯಗಳಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ರ‍್ಯಾಂಕ್ ಪಡೆದಿವರು ಬಾಬು. ತದನಂತರ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್‌ನಿಂದ ಎಂ.ಫಿಲ್ (M.Phil) ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಲಾ ಕಾಲೇಜು, ಐಐಎಂ ಬೆಂಗಳೂರು (IIMB) ಮತ್ತು ನ್ಯಾಷನಲ್ ಲಾ ಸ್ಕೂಲ್ (NLSIU)ಗಳಲ್ಲಿ ಪ್ರಾಧ್ಯಾಪಕರಾಗಿಯೂ ಬಾಬು ಸೇವೆ ಸಲ್ಲಿಸಿದ್ದಾರೆ.
NLSIUನಲ್ಲಿ ರಿಜಿಸ್ಟ್ರಾರ್ ಆಗಿ ಮತ್ತು ಜುವೆನೈಲ್ ಜಸ್ಟಿಸ್ ಸ್ಟಡೀಸ್‌ನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಬಾಬು ಅಲ್ಲೇ ‘ಸೆಂಟರ್ ಫಾರ್ ಚೈಲ್ಡ್ ಅಂಡ್ ದ ಲಾ’ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಭಾರತದ ಆಕ್ಷನ್ ಏಡ್ ಇಂಟರ್‌ನ್ಯಾಷನಲ್ (ActionAid International) ಸಂಸ್ಥೆಯ ಡೈರೆಕ್ಟರ್ ಆಗಿ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಅಗಲಿದ ಕಾರ್ಮಿಕ ನಾಯಕ ಆನಂದ ರಾಜ್‌ಗೆ ನುಡಿ ನಮನ
ಕಳೆದ ಐದು ದಶಕಗಳಿಂದ ಕಾರ್ಮಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಬಾಬು ಮ್ಯಾಥ್ಯೂ ಅವರು 1970 ಮತ್ತು 80ರ ದಶಕದಿಂದಲೂ ಎಐಟಿಯುಸಿ ಜತೆಗೆ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಉದ್ಯಮದ ಕಾರ್ಮಿಕರನ್ನೂ ಸಂಘಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಅಂತಾರಾಷ್ಟೀಯ ಮಟ್ಟದಲ್ಲಿ ‘ಟ್ರೇಡ್ ಯೂನಿಯನ್ ಇಂಟರ್‌ನ್ಯಾಷನಲ್’ನ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ ಚಿತ್ರರಂಗದ ಅಂತ್ಯಕಾಣದ ʼಸ್ತ್ರೀ ಪೀಡಕʼ ಪ್ರವೃತ್ತಿ; ನ್ಯಾಯಕ್ಕಾಗಿ ನಡೆದಿರುವ ಅಂತ್ಯಕಾಣದ ಹೋರಾಟ!
2014ರ ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜೀತ ಕಾರ್ಮಿಕರ ವಿಮೋಚನೆ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಹಕ್ಕುಗಳಿಗಾಗಿ ಅನೇಕ ಸಾಮಾಜಿಕ ಹೋರಾಟಗಳನ್ನು ಮುನ್ನಡೆಸಿದ್ದಾರೆ ಮತ್ತು ಆಂದೋಲನಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಎಐಟಿಯುಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ, ಕಾರ್ಮಿಕ ಸಂಘಟನೆಯನ್ನು ಮುನ್ನಡೆಸಲು ಮುಂದಾಗಿದ್ದಾರೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




