ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿತಯು (ಸಿಸಿಇಎ) ನವೆಂಬರ್ 25ರಂದು ಪ್ಯಾನ್ 2.0 ಅನ್ನು ಅನುಮೋದಿಸಿದೆ. ತೆರಿಗೆದಾರರಿಗೆ ಆಗುವ ಅನುಕೂಲವನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ಯಾನ್/ ಟ್ಯಾನ್ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದಕ್ಕೆ ಸರ್ಕಾರವು 1,435 ಕೋಟಿ ರೂಪಾಯಿ ನಿಗದಿಪಡಿಸಿದೆ ಎಂದು ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ಪಾನ್ ಕಾರ್ಡ್ ನಮ್ಮ ಜೀವನದ ಭಾಗವಾಗಿದ್ದು, ಮಧ್ಯಮ ವರ್ಗ ಮತ್ತು ಸಣ್ಣ ಉದ್ಯಮಗಳಿಗೆ ಮುಖ್ಯವಾಗಿದೆ. ಈ ಕಾರ್ಡ್ ಅನ್ನು ಈಗ ಅಪ್‌ಗ್ರೇಡ್ ಮಾಡಲಾಗಿದೆ. ಇಂದು ಪ್ಯಾನ್ 2.0 ಅನ್ನು ಅನುಮೋದಿಸಲಾಗಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಪ್ಯಾನ್ ವ್ಯವಸ್ಥೆಯನ್ನು ಅಪ್‌ಡೇಟ್ ಮಾಡಲಾಗುವುದು ಮತ್ತು ಡಿಜಿಟಲ್‌ಗೆ ವರ್ಗಾಯಿಸಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಆಧಾರ್ – ಪ್ಯಾನ್ ಜೋಡಣೆಗೆ ದುಬಾರಿ ಶುಲ್ಕ; ನಿರ್ಮಲಾ ಸೀತಾರಾಮನ್ ಸಮರ್ಥನೆ
ಏನಿದು ಪ್ಯಾನ್ 2.0?
ಪ್ಯಾನ್ 2.0 ಎಂಬುದು ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ವ್ಯವಸ್ಥೆಯ ಅಪ್‌ಗ್ರೇಡ್ ಆಗಿದೆ. ತೆರಿಗೆದಾರರಿಗೆ ತಡೆರಹಿತ, ಡಿಜಿಟಲ್ ಸೇವೆ ನೀಡುವ ಗುರಿಯನ್ನು ಹೊಂದಿದೆ. ಪ್ಯಾನ್ ಕಾರ್ಡ್ ಅನ್ನು ಡಿಜಿಟಲೀಕರಣಗೊಳಿಸುವ, ಕಾಗದರಹಿತ ವ್ಯವಸ್ಥೆಗೆ ಒಗ್ಗಿಸಿಕೊಳ್ಳುವ ಯೋಜನೆ ಇದಾಗಿದೆ. ಇದು ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಭಾಗ ಎಂದು ಸರ್ಕಾರ ಹೇಳಿಕೊಂಡಿದೆ. ಡೇಟಾ ರಕ್ಷಣೆಗೆ ಸೈಬರ್ ಸುರಕ್ಷತೆಯೂ ಇದೆ ಎಂದು ಹೇಳಿಕೊಂಡಿದೆ.
ಜನರು ಪ್ಯಾನ್ ಬದಲಾಯಿಸಬೇಕೆ?
ಪ್ಯಾನ್ 2.0 ಬಂದ ಕಾರಣ ಜನರು ತಮ್ಮ ಪ್ಯಾನ್ ಬದಲಾಯಿಸಿಕೊಳ್ಳಬೇಕಾಗಿಲ್ಲ. ಮುಂಬರುವ ಪ್ಯಾನ್ 2.0 ಅನ್ನು ಪ್ರಸ್ತುತ ಪ್ಯಾನ್ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿ ಪರಿಚಯಿಸಲಾಗುತ್ತಿದೆ ಅಷ್ಟೆ. ಹೊಸ ಕಾರ್ಡ್‌ನಲ್ಲಿ ಸ್ಕ್ಯಾನಿಂಗ್‌ಗಾಗಿ ಕ್ಯೂಆರ್ ಕೋಡ್ ಕೂಡಾ ಹೊಂದಿರುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ನೀವು ನಿಮ್ಮ ಪ್ಯಾನ್ ಕಾರ್ಡ್ ಅಪ್‌ಗ್ರೇಡ್ ಮಾಡಲು ಬಯಸಿದರೆ ಯಾವುದೇ ಶುಲ್ಕವಿಲ್ಲದೆ ಅಪ್‌ಗ್ರೇಡ್ ಮಾಡಬಹುದು ಎಂದು ಸರ್ಕಾರ ಹೇಳಿದೆ. ಹೊಸದಾಗಿ ಪ್ಯಾನ್ ಕಾರ್ಡ್ ಮಾಡಿಸುವವರು ಈ ನೂತನ ಅಪ್‌ಗ್ರೇಡ್ ಮಾದರಿ ಪ್ಯಾನ್ 2.0 ಪಡೆಯುತ್ತಾರೆ.
ಕೇಂದ್ರ ಸರ್ಕಾರವು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹೀಗೆ ಹಲವು ದಾಖಲೆಗಳ ಅಪ್‌ಡೇಟ್ ವಿಷಯವಾಗಿ ಈಗಾಗಲೇ ವಿಪಕ್ಷಗಳ ತರಾಟೆಗೆ ಗುರಿಯಾಗಿದೆ. ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡದವರು ಲಿಂಕ್ ಮಾಡಿಸಿಕೊಳ್ಳಬೇಕಾದರೆ ಕಳೆದ ವರ್ಷದಿಂದ ಒಂದು ಸಾವಿರ ರೂಪಾಯಿ ದಂಡ ತೆರಬೇಕಾಗಿದೆ. ಈಗ ಪ್ಯಾನ್ 2.0 ಹೆಸರಲ್ಲಿ ಪ್ಯಾನ್ ಅಪ್‌ಗ್ರೇಡ್ ಎಂದು ಹೇಳಿ ತೆರಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸದಿರಲಿ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.





