ಮುಂಬರುವ ವಿಧಾನಸಭೆ ಚುನಾವಣೆಗೆ ಮೊದಲು ಬಿಹಾರದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಾರಂಭಿಸಿದೆ.
ಚುನಾವಣಾ ಆಯೋಗದ ಕ್ರಮವನ್ನು ಟೀಕಿಸಿರುವ ಸುಪ್ರೀಂ ಕೋರ್ಟ್, ಮತದಾರ ಪಟ್ಟಿಗಳ ವಿಶೇಷ ಪರಿಷ್ಕರಣೆಯ ಸಮಯದಲ್ಲಿ ನೀವು ಪೌರತ್ವದ ವಿಷಯವನ್ನು ಏಕೆ ತೆಗೆದುಕೊಂಡಿದ್ದೀರಿ, ಅದು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆಯೇ ಹೊರತು ಚುನಾವಣಾ ಆಯೋಗದ ಅಡಿಯಲ್ಲಲ್ಲ ಎಂದು ಹೇಳಿದೆ.
ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸ್ವೀಕೃತ ದಾಖಲೆಗಳ ಪಟ್ಟಿಯಿಂದ ಆಧಾರ್ ಕಾರ್ಡ್‌ಗಳನ್ನು ಹೊರಗಿಡುವ ಬಗ್ಗೆ ಕೂಡ ಸುಪ್ರೀಂ ಕೋರ್ಟ್ ಪೀಠ ಕಳವಳ ವ್ಯಕ್ತಪಡಿಸಿದೆ. ದೇಶದ ನಾಗರಿಕರ ಗುರುತಿನ ಪುರಾವೆಯಾಗಿ ಆಧಾರ್ ಅನ್ನು ದೇಶಾದ್ಯಂತ ಬಳಸಲಾಗುತ್ತಿರುವುದರಿಂದ ಅದನ್ನು ಏಕೆ ಪರಿಗಣಿಸಲಾಗಿಲ್ಲ ಎಂಬುದರ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಆದಾಗ್ಯೂ, ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ಮಾಡುವುದನ್ನು ಮುಂದುವರಿಸಲು ಅವಕಾಶ ನೀಡಿರುವ ಸುಪ್ರೀಂ ಕೋರ್ಟ್, “ಪರಿಷ್ಕರಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ನ್ಯಾಯದ ಹಿತದೃಷ್ಟಿಯಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿ ಮುಂತಾದ ದಾಖಲೆಗಳನ್ನು ಪರಿಗಣಿಸಬೇಕು” ಎಂದು ಸೂಚಿಸಿದೆ.
ಇದನ್ನು ಓದಿದ್ದೀರಾ? ಲಾರಾ ಮೇಲಿನ ಗೌರವದಿಂದ 400ರ ಗಡಿ ಸಮೀಪಿಸಲಿಲ್ಲ; 367 ರನ್ ಸಿಡಿಸಿದ ವಿಯಾನ್ ಮುಲ್ಡರ್ ಮಾತು
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಹಲವು ವಿರೋಧ ಪಕ್ಷದ ಸಂಸದರು ಸೇರಿದಂತೆ 10ಕ್ಕೂ ಹೆಚ್ಚು ಅರ್ಜಿಗಳು ಚುನಾವಣಾ ಆಯೋಗದ ಆದೇಶವನ್ನು ರದ್ದುಗೊಳಿಸಲು ಒತ್ತಾಯಿಸಿವೆ. ಈ ಪ್ರಕ್ರಿಯೆಯನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರಾಥಮಿಕ ಆಕ್ಷೇಪಣೆಗಳಿವೆ, ಪರಿಷ್ಕರಣೆಯನ್ನು ಸಂವಿಧಾನಕ್ಕೆ ಅನುಗುಣವಾಗಿ ನಡೆಸಲಾಗುತ್ತಿದೆ ಎಂದು ಚುನಾವಣಾ ಆಯೋಗ ಸುಪ್ರೀಂ ಕೋರ್ಟ್ ಮುಂದೆ ಪ್ರತಿಪಾದಿಸಿದೆ.
ಕೊನೆಯ ಬಾರಿಗೆ ಇಂತಹ ಸಮಗ್ರ ಪರಿಷ್ಕರಣೆ ನಡೆಸಿದ್ದು, 2003 ರಲ್ಲಿ. ಪ್ರಸ್ತುತ ನವೀಕರಣವು ಸಕಾಲಿಕ ಮತ್ತು ಅಗತ್ಯವಾಗಿದೆ ಎಂದು ಚುನಾವಣಾ ಆಯೋಗ ಒತ್ತಿ ಹೇಳಿದೆ





