ಭಾರತದ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿಯಾದ ಡಿ.ವೈ.ಚಂದ್ರಚೂಡ್ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಜೈಪುರದ ಸಾಹಿತ್ಯ ಉತ್ಸವದಲ್ಲಿ ಸುಮಾರು ಐದು ವರ್ಷಗಳಿಂದ ವಿಚಾರಣೆಯಿಲ್ಲದೆ ಜೈಲಿನಲ್ಲಿ ಬಂಧಿತರಾಗಿರುವ ಜೆಎನ್ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಪ್ರಕರಣವನ್ನು ಉಲ್ಲೇಖಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ನ್ಯಾಯ ಎಂದರೇನು?’ ಎನ್ನುವ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ವೀರ್ ಸಾಂಗ್ವಿ ಅವರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ದೀರ್ಘಕಾಲದ ಜೈಲುವಾಸದ ಕುರಿತು ಕಳವಳ ವ್ಯಕ್ತಪಡಿಸಿದರು.
ದೆಹಲಿ ಗಲಭೆ ಸಂಚು ಪ್ರಕರಣದ ಆರೋಪಿಯಾಗಿರುವ ಉಮರ್ ಖಾಲಿದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನಿರಾಕರಿಸಿರುವುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಬ್ಬ ವ್ಯಕ್ತಿ 5 ವರ್ಷ ಇಲ್ಲವೇ 7 ವರ್ಷ ವಿಚಾರಣಾಧೀನ ಕೈದಿಯಾಗಿ ಜೈಲು ಶಿಕ್ಷೆ ಅನುಭವಿಸಿ, ನಂತರ ನಿರ್ದೋಷಿ ಎಂದು ಬಿಡುಗಡೆಯಾದರೆ ಅವರಿಗಾದ ಕಾಲದ ನಷ್ಟವನ್ನು ಹೇಗೆ ತುಂಬಿಕೊಡುವುದು?’ ಎಂದು ಪ್ರಶ್ನಿಸುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ. ಇದರ ಮೂಲಕ ಡಿ.ವೈ.ಚಂದ್ರಚೂಡ್ ಅವರೇ, ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಆಡಳಿತದ ವೈರುಧ್ಯಗಳು ಮತ್ತು ವೈಫಲ್ಯಗಳಿಗೆ ಅವರೇ ಕನ್ನಡಿ ಹಿಡಿಯುತ್ತಿದ್ದಾರೆ.
‘ಸಂವಿಧಾನದ ನಿಯಮಗಳು ಪರಮೋಚ್ಚವಾಗಿದ್ದು, ಸರ್ಕಾರದ ನಿಯಮಗಳು ಸಂವಿಧಾನದ ಅಡಿಯಲ್ಲಿ ಬರುತ್ತವೆ. ಜನರ ಬದುಕುವ ಹಕ್ಕು ತ್ವರಿತ ವಿಚಾರಣೆಯ ಹಕ್ಕನ್ನೂ ಒಳಗೊಂಡಿದೆ. ತ್ವರಿತ ವಿಚಾರಣೆ ಸಾಧ್ಯವಾಗದಿದ್ದಾಗ ಜಾಮೀನು ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
ಇದೇ ಗೋಷ್ಠಿಯಲ್ಲಿ, ಭಾರತದ ಮುಖ್ಯನ್ಯಾಯಮೂರ್ತಿಯಾಗಿ ತಮ್ಮ 24 ತಿಂಗಳ ಅವಧಿಯಲ್ಲಿ 21 ಸಾವಿರ ಜಾಮೀನು ಅರ್ಜಿಗಳನ್ನು ಇತ್ಯರ್ಥಪಡಿಸಿದ್ದಾಗಿ ತಿಳಿಸಿದ ಅವರು, ಪವನ್ ಖೇಡ ಮತ್ತು ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ಮಂಜೂರು ಮಾಡಿದ್ದನ್ನು ನೆನಪಿಸಿಕೊಂಡರು.
ಮುಂದುವರೆದು ‘ಸರಣಿ ಅತ್ಯಾಚಾರ, ಕೊಲೆ ಎಸಗಿದ, ದೇಶ ತೊರೆಯುವ ಸಾಧ್ಯತೆ ಇರುವ, ವಿಚಾರಣೆಯ ಹಂತದಲ್ಲಿ ಸಾಕ್ಷ್ಯನಾಶ ಮಾಡುವ ಸಾಧ್ಯತೆ ಇರುವ ಆರೋಪಿಗಳಿಗೆ ಜಾಮೀನು ನಿರಾಕರಿಸಬಹುದು. ಇವುಗಳ ಹೊರತಾಗಿ ಉಳಿದ ಆರೋಪಿಗಳು ಜಾಮೀನಿಗೆ ಅರ್ಹರು’ ಎಂದಿದ್ದಾರೆ.
ಪತ್ರಕರ್ತ ವೀರ್ ಸಾಂಗ್ವಿ ನ್ಯಾಯಾಲಯದಲ್ಲಿನ ಭ್ರಷ್ಟಾಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಮಾಜದ ಭಾಗವಾದ ನ್ಯಾಯಾಂಗದಲ್ಲಿಯೂ ಭ್ರಷ್ಟಾಚಾರ ಇರುವುದು ನಿಜ. ಅದನ್ನು ಅತಿರಂಜಿಸಿ ಹೇಳಲಾಗುತ್ತಿದೆ’ ಎಂದರು.
ಚಂದ್ರಚೂಡ್ ಅವರ ಹೇಳಿಕೆ ನ್ಯಾಯಸಮ್ಮತವೇ?
ಡಿ.ವೈ.ಚಂದ್ರಚೂಡ್ ಭಾರತದ ಸುಪ್ರೀಂ ಕೋರ್ಟಿನ 50ನೇ ಸಿಜೆಐ ಆಗಿದ್ದಾಗ ಉಮರ್ ಖಾಲಿದ್ ತರದ ವಿಚಾರಣಾಧೀನ ಆರೋಪಿಗಳ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಳ್ಳದೆ ಕಡೆಗಣಿಸಿದ ಇವರು, ನಿವೃತ್ತಿಯ ನಂತರ “ಜಾಮೀನು ಎನ್ನುವುದು ಕೈದಿಯ ಹಕ್ಕು” ಎಂದು ಹೇಳುತ್ತಿರುವುದು ಸಂವಿಧಾನಕ್ಕೆ ಮಾಡಿದ ಅಪಮಾನದಂತೆ ಕಾಣುತ್ತಿದೆ.
ಯಾವುದೇ ವ್ಯಕ್ತಿ ವಿಚಾರಣೆ ಇಲ್ಲದೆ ಜೈಲಿನಲ್ಲಿರುವುದು, ಸಂವಿಧಾನದ 21ನೇ ವಿಧಿಯ ಪ್ರಕಾರ ಜೀವಿಸುವ ಹಕ್ಕಿನ ನೇರ ಉಲ್ಲಂಘನೆಯಾಗುತ್ತದೆ. ಉಮರ್ ಖಾಲಿದ್ ಕಳೆದ ಐದು ವರ್ಷದಿಂದ ವಿಚಾರಣೆ ಇಲ್ಲದೆ ಜೈಲಿನಲ್ಲಿದ್ದರು. ಇದೇ ಜನವರಿ 5ರಂದು ಸುಪ್ರೀಂ ಕೋರ್ಟ್ ಮೊದಲ ಬಾರಿ ವಿಚಾರಣೆ ನಡೆಸಿ ದೆಹಲಿ ಗಲಭೆ ವಿಚಾರದಲ್ಲಿ ಪ್ರಮುಖ 7 ಆರೋಪಿಗಳಲ್ಲಿ 5 ಆರೋಪಿಗಳನ್ನು ಷರತ್ತು ಬದ್ಧ ಜಾಮೀನು ನೀಡಿ ಬಿಡುಗಡೆ ಆದೇಶ ನೀಡಿತು. ಆದರೆ ಉಮರ್ ಮತ್ತು ಶಾರ್ಜೀಲ್ ಗೆ ಜಾಮೀನನ್ನು ನಿರಾಕರಿಸಲಾಯಿತು.
ಡಿ.ವೈ.ಚಂದ್ರಚೂಡ್ ಸಿಜೆಐ ಆಗಿದ್ದಾಗ, ಸುಪ್ರೀಂ ಕೋರ್ಟಿನ ಯಾವ ಪೀಠವು ಉಮರ್ ಖಾಲಿದ್ ಪ್ರಕರಣದ ಜಾಮೀನು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳದೆ ವಿವಿಧ ಬೆಂಚ್ ಗಳ ನಡುವೆ ವರ್ಗಾಹಿಸಲಾಯಿತು. 10ಕ್ಕೂ ಹೆಚ್ಚು ಬಾರಿ ಜಾಮೀನು ಅರ್ಜಿ ಕಣ್ಣೇದುರು ಇದ್ದಾಗಲೂ ವಿಚಾರಣೆಯನ್ನು ಮುಂದೂಡಲಾಗಿತ್ತು. ಚಂದ್ರಚೂಡ್ ಅವರ ಪೀಠಕ್ಕೆ ಅರ್ಜಿ ಬಂದಾಗಲೂ ವಿಚಾರಣೆಯನ್ನು ನಿರಾಕರಿಸಲಾಗಿತ್ತು. ಈಗ ಅವರೇ, ವಿಚಾರಣಾಧೀನ ಕೈದಿಯ ಸಮಯಕ್ಕೆ ಬೆಲೆ ಕಟ್ಟುವವರಾರು?” ಎಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದರ ಮೂಲಕ ನೀವು ಅಧಿಕಾರದಲ್ಲಿದ್ದಾಗ ಈ ವಿವೇಕ ಯಾಕೆ ಇರಲಿಲ್ಲ? ಎಂಬ ಪ್ರಶ್ನೆಯನ್ನು ಕೇಳಬೇಕಾಗುತ್ತದೆ.
ಅದೇ ಸಾಹಿತ್ಯ ಉತ್ಸವದಲ್ಲಿ ‘ಕೆಳಹಂತದ ನ್ಯಾಯಾಲಯಗಳು ಉಮರ್ ಖಾಲಿದ್ ವಿಚಾರವಾಗಿ ಭಯಪಡುತ್ತಿವೆ’ ಎಂದು ಚಂದ್ರಚೂಡ್ ಹೇಳುತ್ತಾರೆ. ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಮೂರ್ತಿಯಾಗಿ ಆ ಭಯವನ್ನು ಹೊಗಲಾಡಿಸುವ ಅಥವಾ ಮಾರ್ಗಸೂಚಿಗಳನ್ನು ಕೊಡುವ ಅಧಿಕಾರವಿದ್ದಾಗಲೂ ಸುಮ್ಮನಿದ್ದು, ಅಧಿಕಾರ ಇಲ್ಲದಿರುವಾಗ ಈ ರೀತಿಯ ಮಾತು ಎಷ್ಟು ಸಮಂಜಸವಾಗುತ್ತದೆ.
ಚಂದ್ರಚೂಡ್ ಅವರಿಗೆ ಜ್ಞಾನವಿತ್ತು, ಅಧಿಕಾರವೂ ಇತ್ತು. ಆದರೆ, ನಿಜವಾದ ನಿರಾಪರಾಧಿಗಳಿಗೆ ತೀರ್ಪು ಕೊಡುವ ಅಥವಾ ವಿಚಾರಣೆಯನ್ನು ನಡೆಸುವ ಇಚ್ಛಾಶಕ್ತಿ ಇರಲಿಲ್ಲ ಎನ್ನಬಹುದು.
ವಿವಾದದ ಸುಳಿಯಲ್ಲಿ ಚಂದ್ರಚೂಡ್
- ಆಯೋಧ್ಯಾ (ರಾಮಜನ್ಮ ಭೂಮಿ – ಬಾಬ್ರಿ ಮಸೀದಿ) : 2019ರಲ್ಲಿ ಬಹುತೇಕ ಹಿಂದೂಗಳ ಭಾವನೆಯ ಆಧಾರದ ಮೇಲೆ ತೀರ್ಪು ನೀಡಲಾಗಿದೆ ಎಂದು ಹೇಳಿದ ಐವರ ಪೀಠದಲ್ಲಿ ಚಂದ್ರಚೂಡ್ ಸಹ ಒಬ್ಬರಾಗಿದ್ದರು. ಈ ತೀರ್ಪು “ದೇವರಿಗೆ ನೀಡಿದ ಪರಿಹಾರ” ಎಂದು ಹೇಳಿದ್ದರು. ಆ ಪೀಠದಲ್ಲಿ ಅಂದಿನ ಸಿಜೆಐ ಆಗಿದ್ದ ರಂಜನ್ ಗೊಗೊಯ್, ಎಸ್.ಎ. ಬೊಬ್ಡೆ, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಇದ್ದರು.
- ಪ್ರಧಾನಿ ಮೋದಿ ಅವರನ್ನು ಗಣೇಶ ಪೂಜೆಗೆ ಆಹ್ವಾನ : 2024ರ ಗಣೇಶ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದರು. ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರದಲ್ಲಿರುವಾಗಲೇ ಆಡಳಿತ ಪಕ್ಷದ ನಾಯಕನನ್ನು ಮನೆಗೆ ಕರೆಸುವುದು ಪಾರದರ್ಶಕತೆಯ ಬಗ್ಗೆ ಅನುಮಾನಕ್ಕೆಡೆ ಮಾಡಿದೆ. ಇದರ ಮೂಲಕ ನ್ಯಾಯಾಂಗ ನಿಷ್ಪಕ್ಷಪಾತತೆಗೆ ಧಕ್ಕೆ ಉಂಟಾಗುತ್ತದೆ ಎಂದು ವಿರೋಧ ಪಕ್ಷಗಳು, ವಕೀಲರು ಮತ್ತು ಕಾನೂನು ತಜ್ಞರು ಟೀಕಿಸಿದ್ದರು.
- ಆರ್ಟಿಕಲ್ 370 ರದ್ದತಿ : CJI ಆಗಿ ನೇತೃತ್ವ ವಹಿಸಿಕೊಂಡ ಚಂದ್ರಚೂಡ್ ಅವರ ಪೀಠವು ಜಮ್ಮು & ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಏಕಮತದಿಂದ ಎತ್ತಿಹಿಡಿಯಿತು. ಈ ತೀರ್ಪು ಸಂವಿಧಾನದ ಮೂಲತತ್ವಗಳಿಗೆ ವಿರುದ್ಧವಾಗಿತ್ತು.
- ಚುನಾವಣಾ ಬಾಂಡ್ ಸ್ಕೀಮ್ : ಚಂದ್ರಚೂಡ್ ಸಿಜೆಐ ಆಗಿದ್ದಾಗ, ಚುನಾವಣೆ ಬಾಂಡ್ ವ್ಯವಸ್ಥೆ ಅಸಂವಿಧಾನಿಕ ಎಂದು ರದ್ದುಗೊಳಿಸಿದ್ದರು. ಇದರ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದರು. ಆದರೆ ಹಣದ ಮೂಲಗಳ ತನಿಖೆ ಅಥವಾ ಶಿಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಆದ್ದರಿಂದ ಈ ತೀರ್ಪು ಅಪೂರ್ಣ ಎಂದು ಅನೇಕರು ಟೀಕಿಸಿದ್ದಾರೆ.
ಹೀಗೆ ಹಲವು ಪ್ರಕರಣಗಳಲ್ಲಿ ಚಂದ್ರಚೂಡ್ ವಿವಾದದ ಕೇಂದ್ರ ಬಿಂದುವಾಗಿದ್ದರು. ಸಿಜೆಐ ನಿವೃತ್ತಿಯ ಕೊನೆಯ ಭಾಷಣದಲ್ಲಿ “ನನ್ನಿಂದ ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ” ಎಂದು ಹೇಳಿದ್ದರು. ಎರಡು ವರ್ಷಗಳು ಭಾರತದ ನ್ಯಾಯಾಂಗ ವ್ಯವಸ್ಥೆಯ ಚುಕ್ಕಾಣಿಯನ್ನು ಹಿಡಿದಿದ್ದ ಅವರು, ಅನೇಕ ಪ್ರಕರಣಗಳಲ್ಲಿ ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂಬ ಟೀಕೆಗಳಿಗೂ ಗುರಿಯಾಗಿದ್ದರು. ಭಾಷಣಗಳ ಮೂಲಕ ಪ್ರಚಾರದಲ್ಲಿರುವ ಚಂದ್ರಚೂಡ್ ಪ್ರಸ್ತುತ ನ್ಯಾಯಾಂಗ ವ್ಯವಸ್ಥೆಯ ದುರಂತ ನಾಯಕರಂತೆ ಕಾಣುತ್ತಾರೆ.





