ಪತ್ನಿ ಪಡೆಯಬಹುದಾದ ಜೀವನಾಂಶ ಮೊತ್ತವು ಪತಿಯ ಆದಾಯದ 25%ವರೆಗೆ ಇರಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪತ್ನಿಗೆ ನೀಡುವ ಜೀವನಾಂಶ ಮೊತ್ತವನ್ನು ಹೆಚ್ಚಿಸಿ ಕುಟುಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚ್ಛೇದನ ಪಡೆದ ಪತ್ನಿಗೆ ಜೀವನ ನಿರ್ವಹಣೆಗಾಗಿ ಪತಿಯು ತನ್ನ ಆದಾಯದ 25%ಅನ್ನು ನೀಡಬೇಕೆಂದು ಕುಟುಂಬ ನ್ಯಾಯಾಲಯ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಪತಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಮದನ್ ಪಾಲ್ ಸಿಂಗ್ ಅರ್ಜಿದಾರ ಸುರೇಶ್ ಚಂದ್ರ ಅವರಿದ್ದ ಪೀಠವು ‘ತನ್ನನ್ನು ತಾನು ಪೋಷಿಸಿಕೊಳ್ಳಲು ಸಾಧ್ಯವಾಗದ ಪತ್ನಿಗೆ ಜೀವನಾಂಶ ನೀಡುವುದು ಪವಿತ್ರ ಮತ್ತು ಕಾನೂನುಬದ್ಧ ಕರ್ತವ್ಯ’ ಎಂದು ಹೇಳಿದೆ. ಪತಿಯ ಮೇಲ್ಮನವಿಯನ್ನು ವಜಾಗೊಳಿಸಿದೆ.
“ಅರ್ಜಿದಾರರ ಪತಿ ಯಾವುದೇ ದೈಹಿಕ ಅಂಗವೈಕಲ್ಯವನ್ನು ಹೇಳಿಕೊಂಡಿಲ್ಲ. ಆದ್ದರಿಂದ, ಅವರು ಆರೋಗ್ಯವಂತ ವ್ಯಕ್ತಿ ಮತ್ತು ತನ್ನ ಹೆಂಡತಿಯನ್ನು ಪೋಷಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯವು ಹೇಳಿದೆ.
ಪ್ರಕರಣದ ಹಿನ್ನೆಲೆ
2003ರಲ್ಲಿ ಸುರೇಶ್ ಚಂದ್ರ ಮತ್ತು ಅವರ ಪತ್ನಿ ವಿಚ್ಛೇದನ ಪಡೆದಿದ್ದರು. ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಅರ್ಜಿದಾರ ಪತ್ನಿಗೆ ಮಾಸಿಕ 500 ರೂ. ಪಾವತಿಸುವಂತೆ ಕುಟುಂಬ ನ್ಯಾಯಾಲಯವು ಆದೇಶಿಸಿತ್ತು. ಆ ನಂತರ, 2015ರ ಜೂನ್‌ನಲ್ಲಿ ಕುಟುಂಬ ನ್ಯಾಯಾಲಯದ ಮೊರೆಹೋಗಿದ್ದ ಪತ್ನಿ, ಜಗತ್ತು ಬೆಲೆ ಏರಿಕೆಯ ಹಿಂದೆ ಓಡುತ್ತಿದೆ. ತಾವು ಅಂಗವೈಕಲ್ಯದಿಂದ ಬಳಲುತ್ತಿದ್ದು, 500 ರೂ.ಗಳಲ್ಲಿ ಜೀವನ ನಿರ್ವಹಣೆ ಸಾಧ್ಯವಿಲ್ಲ. ಪತಿ ನೀಡುವ ಜೀವನಾಂಶವನ್ನು ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. 2024ರ ಜುಲೈನಲ್ಲಿ ಆದೇಶ ಹೊರಡಿಸಿದ ಶಹಜಹಾನ್‌ಪುರದ ಕುಟುಂಬ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು, ‘ಸುರೇಶ್ ಚಂದ್ರ ಅವರು ತಮ್ಮ ಪತ್ನಿಗೆ ನೀಡುತ್ತಿದ್ದ ಜೀವನಾಂಶವನ್ನು ಮಾಸಿಕ 500 ರೂ.ಗಳಿಂದ 3,000 ರೂ.ಗಳಿಗೆ ಹೆಚ್ಚಿಸಿ’ ಆದೇಶಿಸಿದ್ದರು.
ಕುಟುಂಬ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ 2024ರ ಡಿಸೆಂಬರ್‌ನಲ್ಲಿ ಸುರೇಶ್ ಚಂದ್ರ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ‘ಸುರೇಶ್ ಚಂದ್ರ ಅವರು ಕಾರ್ಮಿಕರಾಗಿದ್ದು, ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ’ ಎಂದು ಚಂದ್ರ ಅವರ ವಕೀಲರು ಹೈಕೋರ್ಟ್‌ನಲ್ಲಿ ವಾದಿಸಿದ್ದಾರೆ. ಅವರ ವಾದಕ್ಕೆ ಪ್ರತಿವಾದ ಮಂಡಿಸಿದ ಹಿರಿಯ ಹೆಚ್ಚುವರಿ ಸರ್ಕಾರಿ ವಕೀಲರು (AGA) ‘ಪ್ರಸ್ತುತ ಹಣದುಬ್ಬರವನ್ನು ಗಮನಿಸಿದರೆ, ತಿಂಗಳಿಗೆ 3,000 ರೂ. ನಿರ್ವಹಣಾ ಮೊತ್ತ ನೀಡುವುದು ಅತಿಯಾದ ಅಥವಾ ಪತಿಯ ಸಾಮರ್ಥ್ಯಕ್ಕೆ ಮೀರಿದ ಮೊತ್ತವೇನೂ ಅಲ್ಲ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಈ ಲೇಖನ ಓದಿದ್ದೀರಾ?: ವಿಶ್ವದ ಟಾಪ್ 100ರಲ್ಲಿ ಇಲ್ಲ ಭಾರತದ ವಿವಿಗಳು; IITಗೂ ಸ್ಥಾನವಿಲ್ಲ ಯಾಕೆ?
ವಾದ-ಪ್ರತಿವಾದವನ್ನು ಆಲಿಸಿದ ನ್ಯಾಯಾಲಯವು, “ಜೀವನಾಂಶ ಪಡೆಯುತ್ತಿರುವ ಪತ್ನಿಗೆ ಯಾವುದೇ ಇತರ ಆದಾಯದ ಮೂಲವಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಆದ್ದರಿಂದ ತನ್ನನ್ನು ತಾವು ಪೋಷಿಸಿಕೊಳ್ಳಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ, ತನ್ನ ಹೆಂಡತಿಯನ್ನು ಪೋಷಿಸುವುದು ಅರ್ಜಿದಾರರ ಪವಿತ್ರ ಮತ್ತು ಕಾನೂನುಬದ್ಧ ಕರ್ತವ್ಯ” ಎಂದು ಹೇಳಿದೆ.
ಸುಪ್ರೀಂ ಕೋರ್ಟ್‌ನ ಹಲವಾರು ತೀರ್ಪುಗಳನ್ನು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದ ಹೈಕೋರ್ಟ್, “ಪ್ರಕರಣದ ಸಂಗತಿಗಳು ಮತ್ತು ಸಂದರ್ಭಗಳಿಗೆ ಅನುಸಾರವಾಗಿ ಮತ್ತು ಅರ್ಜಿದಾರರನ್ನು ಕಾರ್ಮಿಕ ಎಂದು ಪರಿಗಣಿಸಿದರೆ, ಅವರು ದಿನಕ್ಕೆ 600 ರೂ. ಗಳಿಸಬಹುದು. ಅಂದರೆ ತಿಂಗಳಿಗೆ 18,000 ರೂ. ಆದಾಯವಿದೆ. ಪತಿಯ ಒಟ್ಟು ಆದಾಯದ 25%ರಷ್ಟು ಜೀವನಾಂಶ, ಅಂದರೆ, 4,500 ರೂ. ನೀಡಬಹುದು” ಎಂದು ವಿವರಿಸಿದೆ. ಹೀಗಿರುವಾಗ, 3,000 ರೂ. ನೀಡುವುದು ಅತಿಯೇನೂ ಅಲ್ಲ ಎಂದು ಹೇಳಿದ್ದು, ಅರ್ಜಿಯನ್ನು ವಜಾಗೊಳಿಸಿದೆ.




