2018ರಲ್ಲಿ ನಾಪತ್ತೆಯಾಗಿದ್ದ ತನ್ನ ಪತಿಯನ್ನು ಉತ್ತರ ಪ್ರದೇಶದ ಹರ್ದೋಯ್‌ನ ಮಹಿಳೆ ಸುಮಾರು ಏಳು ವರ್ಷಗಳ ಬಳಿಕ ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪತ್ತೆ ಹಚ್ಚಿದ್ದಾರೆ. ಸದ್ಯ ಪೊಲೀಸರು 32 ವರ್ಷದ ವ್ಯಕ್ತಿ ಜಿತೇಂದ್ರ ಕುಮಾರ್ ಅಲಿಯಾಸ್ ಬಬ್ಲೂನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಏಳು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಈ ವ್ಯಕ್ತಿ ಇನ್ನೊಂದು ಮದುವೆಯಾಗಿ ಲೂಧಿಯಾನದಲ್ಲಿ ವಾಸಿಸುತ್ತಿದ್ದ. ತನ್ನ ಎರಡನೇ ಪತ್ನಿಯೊಂದಿಗೆ ಜಿತೇಂದ್ರ ರೀಲ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ. ಜಿತೇಂದ್ರ ವಿರುದ್ಧ ಮೊದಲ ಪತ್ನಿ ದೂರು ದಾಖಲಿಸಿದ್ದು ಸಂದಿಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 82(1) (ದ್ವಿಪತ್ನಿತ್ವ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ರೀಲ್ಸ್‌ನಲ್ಲಿ ನಿರತವಾಗಿರುವ ರೈಲ್ವೆ ಸಚಿವರ ರಾಜೀನಾಮೆಗೆ ವಿಪಕ್ಷಗಳ ಆಗ್ರಹ
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಹರ್ದೊಯ್‌ನ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಸಿಂಗ್, “ವಿಚಾರಣೆಯ ಸಮಯದಲ್ಲಿ, ಜಿತೇಂದ್ರ ಲೂಧಿಯಾನದಲ್ಲಿ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ. ಆತನನ್ನು ವಶಕ್ಕೆ ಪಡೆಯಲಾಗಿದೆ” ಎಂದು ಹೇಳಿದ್ದಾರೆ.
ಜಿತೇಂದ್ರ 2017ರಲ್ಲಿ ಮೊದಲ ಮದುವೆಯಾಗಿದ್ದು, 2018ರಲ್ಲಿ ಒಂದು ಮಗು ಜನಿಸಿತ್ತು. ಆ ವರ್ಷವೇ ಜಿತೇಂದ್ರ ನಾಪತ್ತೆಯಾಗಿದ್ದ. ಈ ಸಂಬಂಧ ಜಿತೇಂದ್ರ ತಂದೆ ಸ್ಯಾಂಡಿಲಾ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದರು, ಆದರೆ ಜೀತೇಂದ್ರ ಪತ್ತೆಯಾಗಿಲ್ಲ. ಆತನ ಕುಟುಂಬ ಪತ್ನಿಯ ಮೇಲೆಯೇ ಕೊಲೆ ಆರೋಪ ಮಾಡಿತ್ತು. “ಆಕೆ ನಮ್ಮ ಮಗನನ್ನು ಕೊಂದು ಆತನ ದೇಹವನ್ನು ಎಲ್ಲೋ ಬಚ್ಚಿಟ್ಟಿದ್ದಾಳೆ” ಎಂದು ಆತನ ಕುಟುಂಬ ಆರೋಪಿಸಿತ್ತು. ಆದರೆ ಇತ್ತೀಚೆಗೆ ಜಿತೇಂದ್ರ ಎರಡನೇ ಪತ್ನಿ ಜೊತೆ ರೀಲ್ಸ್ ಮಾಡಿ ಸಿಕ್ಕಿಬಿದ್ದಿದ್ದಾನೆ.





