ವಿದೇಶಿಗನೆಂದು ಘೋಷಿಸಲ್ಪಟ್ಟ ನಂತರ ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಅಸ್ಸಾಂ ನಿವಾಸಿ ದೀಪಾಲಿ ದಾಸ್ (59) ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿಯಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ವರದಿಯಾಗಿದೆ.
ಅಸ್ಸಾಂನ ಕ್ಯಾಚರ್ ಜಿಲ್ಲೆಯ ನಿವಾಸಿ ದೀಪಾಲಿ ದಾಸ್ ಅವರನ್ನು 2019ರ ಫೆಬ್ರವರಿಯಲ್ಲಿ ವಿದೇಶಿಗಳೆಂದು ನ್ಯಾಯಮಂಡಳಿಯು (ಎಫ್‌ಟಿ) ಅಕ್ರಮ ವಲಸಿಗ ಎಂದು ಘೋಷಿಸಿತ್ತು. ಅವರನ್ನು ಅದೇ ವರ್ಷದ ಮೇ 10ರಂದು ಬಂಧಿಸಿ ಸಿಲ್ಚಾರ್ ಬಂಧನ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಬಳಿಕ, ಸುಪ್ರೀಂ ಕೋರ್ಟ್ ಆದೇಶದ ಮೇಲೆ 2021ರ ಮೇ 17ರಂದು ಅವರನ್ನು ಜಾಮೀನಿನ ಮೇಲೆ ಬಿಡಗಡೆ ಮಾಡಲಾಗಿತ್ತು. ಇದೀಗ, ಅವರಿಗೆ ಭಾರತೀಯ ಪೌರತ್ವ ನೀಡಲಾಗಿದೆ.
ದಾಸ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದ ವಕೀಲ ಧರ್ಮಾನಂದ ದೇಬ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, “ಸುಪ್ರೀಂ ಕೋರ್ಟ್ ಆದೇಶದ ನಂತರ ಜಾಮೀನಿನ ಮೇಲೆ ದಾಸ್ ಬಿಡುಗಡೆಯಾಗಿದ್ದರು. ಬಿಡುಗಡೆಗೂ ಮುನ್ನ ದಾಸ್ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು. ದಾಸ್ ಅವರು ಮೂಲತಃ ಬಾಂಗ್ಲಾದೇಶದ ಸಿಲ್ಹೆಟ್ ಜಿಲ್ಲೆಯ ದಿಪ್ಪೂರ್ ಗ್ರಾಮದ ನಿವಾಸಿ. ಅವರು 1987ರಲ್ಲಿ ಹಬಿಗಂಜ್ ಜಿಲ್ಲೆಯ ಪಾರೈ ಗ್ರಾಮದ ಅಭಿಮನ್ಯು ದಾಸ್ ಅವರನ್ನು ವಿವಾಹವಾಗಿದ್ದರು. ಭಾರತಕ್ಕೆ ಬಂದಿದ್ದರು” ಎಂದು ತಿಳಿಸಿದ್ದಾರೆ.
“2013ರಲ್ಲಿ ಅವರ ವಿರುದ್ಧ ಪೊಲೀಸ್ ತನಿಖೆ ಆರಂಭವಾಗಿತ್ತು. ಅವರ ಪೌರತ್ವದ ಕುರಿತು ಪರಿಶೀಲನೆ ನಡೆಸಲಾಗಿತ್ತು. ಅಜ್ಮಲ್ ಹುಸೇನ್ ಲಸ್ಕರ್ ಈ ಪ್ರಕರಣವನ್ನು ನಿರ್ವಹಿಸುತ್ತಿದ್ದರು. 2013ರ ಜುಲೈ 2ರಂದು ಚಾರ್ಜ್‌ಶೀಟ್ ಸಲ್ಲಿಸಿದ್ದರು. ಅದರಲ್ಲಿ ದೀಪಾಲಿ ಅವರು 1971ರ ಮಾರ್ಚ್ ನಂತರ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾರೆಂದು ವಾದಿಸಲಾಗಿತ್ತು. ಭಾರತೀಯ ಕಾನೂನಿನ ಪ್ರಕಾರ, 1971ರ ಮಾರ್ಚ್ 25ರ ಕಟ್-ಆಫ್ ನಂತರ ಅಕ್ರಮವಾಗಿ ದೇಶವನ್ನು ಪ್ರವೇಶಿಸುವ ಯಾರನ್ನಾದರೂ ಅಸ್ಸಾಂನಲ್ಲಿ ಅಕ್ರಮ ವಲಸಿಗರೆಂದು ಪರಿಗಣಿಸಲಾಗುತ್ತದೆ. ಸಿಎಎ ಅಡಿಯಲ್ಲಿ ಭಾರತೀಯ ಪೌರತ್ವಕ್ಕಾಗಿ ದೀಪಾಲಿ ಪೌರತ್ವಕ್ಕಾಗಿ ಅರ್ಜಿಯನ್ನೂ ಸಲ್ಲಿಸಿದ್ದರು” ಎಂದು ದೇಬ್ ವಿವರಿಸಿದ್ದಾರೆ.




