ಮೌಢ್ಯ ನಂಬಿಕೆಯನ್ನು ಹೊಂದಿದ್ದ ಮಹಿಳೆಯೊಬ್ಬರು ಪೂರ್ವಜರ ಮೋಕ್ಷಕ್ಕಾಗಿ ತನ್ನ ಇಬ್ಬರು ಮಕ್ಕಳನ್ನು ಕೊಂದ ಆಘಾತಕಾರಿ ಘಟನೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಆರೋಪಿ ಸುನೀತಾ ಶರ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಸುನೀತಾ ತನ್ನ ಮಾವನನ್ನೂ ಕೊಲ್ಲಲು ಪ್ರಯತ್ನಿಸಿದ್ದು ಮನೆಯಿಂದ ಹೊರಗೆ ಓಡಿಹೋಗಿ ಅವರು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಸ್ಯಾಂಕಿ ಕೆರೆಯಲ್ಲಿ ಸರ್ಕಾರಿ ಪ್ರಾಯೋಜಿತ ಮೌಢ್ಯಾರತಿ, ಯಾರಿಗಾಗಿ?
ಮೂಲತಃ ಉತ್ತರ ಪ್ರದೇಶದ ಸುನೀತಾ, ತನ್ನ ಪತಿ ಶಿವಕಾಂತ್, ಏಳು ಮತ್ತು ನಾಲ್ಕು ವರ್ಷದ ಇಬ್ಬರು ಗಂಡು ಮಕ್ಕಳು, ಅತ್ತೆ-ಮಾವ ಇಂದ್ರಪಾಲ್ ಮತ್ತು ಸುಸ್ರಿ ಜೊತೆ ಗುಜರಾತ್‌ನ ನವಸಾರಿ ಜಿಲ್ಲೆಯ ಬಿಲಿಮೊರಾ ಪಟ್ಟಣದ ಡೆಸ್ರಾ ಪ್ರದೇಶದ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಶಿವಕಾಂತ್‌ಗೆ ಟೈಫಾಯ್ಡ್ ಇದ್ದ ಕಾರಣ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಇಂದ್ರಪಾಲ್(ಮಾವ) ಮತ್ತು ಸುಶ್ರೀ(ಅತ್ತೆ) ತಮ್ಮ ಮಗ (ಶಿವಕಾಂತ್) ಗೆ ಆಹಾರ ನೀಡಲು ಆಸ್ಪತ್ರೆಗೆ ಹೋಗಿದ್ದು ಇಂದ್ರಪಾಲ್ ಹಿಂದಿರುಗಿ ಬಂದು ತಮ್ಮ ಕೋಣೆಯಲ್ಲಿ ಮಲಗಿದ್ದರು. ಸುನೀತಾ ತನ್ನ ಮಲಗುವ ಕೋಣೆಯಲ್ಲಿದ್ದಳು. ಸುನೀತಾಗೆ ಕೆಲವು ದಿನಗಳಿಂದ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ತನ್ನ ಪೂರ್ವಜರ ಮೋಕ್ಷ ಸಿಗದ ಕಾರಣದಿಂದಾಗಿ ಹೀಗೆ ಆಗುತ್ತಿದೆ ಎಂದುಕೊಂಡಿದ್ದ ಸುನೀತಾ, ಪೂರ್ವಜರ ಮೋಕ್ಷಕ್ಕಾಗಿ ತನ್ನ ಇಬ್ಬರು ಗಂಡು ಮಕ್ಕಳನ್ನು ಕೊಂದಿದ್ದಾಳೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿ ವಿ ಗೋಹಿಲ್ ಮಾಹಿತಿ ನೀಡಿದ್ದಾರೆ.
ಅದಾದ ಬಳಿಕ ಸುನೀತಾ ಇನ್ನೊಂದು ಕೋಣೆಗೆ ಹೋಗಿ ತನ್ನ ಮಾವನ ಕತ್ತು ಹಿಸುಕಲು ಪ್ರಯತ್ನಿಸಿದ್ದು ಆದರೆ ಅವರ ಮನೆಯಿಂದ ಹೊರಗೆ ಓಡಿಹೋಗಿ ನೆರೆಹೊರೆಯವರನ್ನು ಕರೆದಿದ್ದಾರೆ. ಈ ವೇಳೆ ಸುನೀತಾ ಬಾಗಿಲು ಚಿಲಕ ಹಾಕಿಕೊಂಡಿದ್ದು, ಪೊಲೀಸ್ ತಂಡ ಬಂದು ಬಾಗಿಲು ಒಡೆದು ಒಳಗೆ ಹೋಗಿದ್ದು ಸುನೀತಾಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮೈಸೂರು | ಆನೆ ಲದ್ದಿ ತುಳಿದು ಮೌಢ್ಯ ಮೆರೆದ ಮೈಸೂರಿಗರು
ಭಾರತದಲ್ಲಿ ಮೌಢ್ಯಕ್ಕೆ ಮಕ್ಕಳ ಬಲಿ
ದೇಶ ಎಷ್ಟೇ ಮುಂದುವರೆದರೂ ಇಂದಿಗೂ ಮೌಢ್ಯ ಮತ್ತು ಅಂಧವಿಶ್ವಾಸಗಳಿವೆ. ಮಕ್ಕಳನ್ನು ಬಲಿ ನೀಡುವ ಅಮಾನುಷ ಕೃತ್ಯಗಳು ಗ್ರಾಮೀಣ ಭಾಗಗಳಲ್ಲಿ ಕಂಡುಬರುತ್ತಿವೆ. ಗ್ರಾಮ ದೇವತೆಗಳ ಕೋಪ ತಣಿಸಲು, ರೋಗಗಳನ್ನು ಗುಣಪಡಿಸಲು, ಅದೃಷ್ಟಕ್ಕಾಗಿ- ಹೀಗೆ ಹಲವು ನೆಪಗಳನ್ನು ಮುಂದಿಟ್ಟು ಮಕ್ಕಳ ಬಲಿ ನೀಡಲಾಗುತ್ತಿದೆ. ಎನ್‌ಸಿಆರ್‌ಬಿ ಮತ್ತು ಎನ್‌ಜಿಒ ವರದಿಗಳ ಪ್ರಕಾರ ದೇಶದಲ್ಲಿ ಪ್ರತಿ ವರ್ಷ 50-100 ನರಬಲಿ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ ಶೇ.20-30ರಷ್ಟು 1-12 ವರ್ಷದ ಮಕ್ಕಳಾಗಿದ್ದಾರೆ.
ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶದ ಹಳ್ಳಿ ಭಾಗಗಳಲ್ಲಿ ಹೆಚ್ಚಾಗಿ ಈ ಮೌಢ್ಯ ಆಚರಣೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಕೇಂದ್ರ ಸರ್ಕಾರ ಇನ್ನೂ ರಾಷ್ಟ್ರೀಯ ಮಟ್ಟದಲ್ಲಿ ಅಂಧವಿಶ್ವಾಸ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿಲ್ಲ. ಆದರೆ ದೇಶದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಒಡಿಶಾ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ರಾಜಸ್ಥಾನ, ಗುಜರಾತ್ ಸೇರಿದಂತೆ ಎಂಟು ರಾಜ್ಯಗಳಲ್ಲಿ ವಿಶೇಷ ಕಾಯ್ದೆಗಳಿವೆ.





