ಅಲೈಸ್ ಒಗ್ಲೆಟ್ರೀ – 36 ವರ್ಷದ ಮಹಿಳೆ. ಅಮೆರಿಕದ ಟೆಕ್ಸಾಸ್ ಮೂಲದವರು. ಅವರ ಹೆಸರಿನಲ್ಲೊಂದು ಗಿನ್ನಿಸ್ ರೆಕಾರ್ಡ್ ದಾಖಲಾಗಿದೆ. ಅದೂ ಅವರ ಮಾನವೀಯ ಕಾರ್ಯದ ಕಾರಣಕ್ಕಾಗಿ. ಅದೇ, ಅವರು ಮಾಡಿದ ಎದೆ ಹಾಲು ದಾನ. ಅಲೈಸ್ ಒಗ್ಲೆಟ್ರೀ ಅವರು 2,645.58 ಲೀಟರ್ ತಮ್ಮ ಎದೆ ಹಾಲು ದಾನ ಮಾಡಿದ್ದಾರೆ. 3.6 ಲಕ್ಷ ನವಜಾತ ಶಿಶುಗಳ ಆರೈಕೆಗೆ ನೆರವಾಗಿದ್ದಾರೆ.
ಇದೇ ಅಲೈಸ್ ಒಗ್ಲೆಟ್ರೀ ಅವರು 2010ರಿಂದ 2014ರ ವೇಳೆಗೆ 1,569.79 ಲೀಟರ್ ಎದೆ ಹಾಲು ದಾನ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದ್ದರು. ಇದೀಗ, 10 ವರ್ಷಗಳ ಬಳಿ ತಮ್ಮದೇ ದಾಖಲೆಯನ್ನು ತಾವೇ ಮುರಿದಿದ್ದಾರೆ. 2024ರ ಅಂತ್ಯದ ವೇಳೆಗೆ 2,645 ಲೀಟರ್ ಎದೆ ಹಾಲನ್ನು ದಾನ ಮಾಡಿದ್ದಾರೆ.
ಉತ್ತರ ಟೆಕ್ಸಾಸ್‌ನಲ್ಲಿರುವ ತಾಯಂದಿರ ಹಾಲಿನ ಬ್ಯಾಂಕ್ ಪ್ರಕಾರ, ಒಂದು ಲೀಟರ್ ಎದೆ ಹಾಲು 11 ನವಜಾತ ಶಿಶುಗಳ ಜೀವವನ್ನು ಉಳಿಸಬಹುದು. ಅಲೈಸ್ ಅವರ ಎದೆಹಾಲನ್ನು 3.5 ಲಕ್ಷಕ್ಕೂ ಹೆಚ್ಚು ಶಿಶುಗಳಿಗೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ.
“ನನಗೆ ಸಮಾಜಕ್ಕಾಗಿ ಏನನ್ನಾದರೂ ಮಾಡಬೇಕೆಂಬ ತುಡಿತವಿದೆ. ಆದರೆ, ನಾನು ಶ್ರೀಮಂತೆಯಲ್ಲ. ನನ್ನ ಬಳಿ ಹಣವಿಲ್ಲ. ನನಗೆ ಬೆಂಬಲವಾಗಿ ಕುಟುಂಬವಿದೆ. ಆದರೆ, ಒಳ್ಳೆಯ ಉದ್ದೇಶಗಳಿಗಾಗಿ ಪದೇ-ಪದೇ ನೀಡುವಷ್ಟು ಸಾಮರ್ಥ್ಯವಿಲ್ಲ. ಆದರೆ, ಹಾಲು ದಾನ ಮಾಡಲು ಆರ್ಥಿಕತೆಯ ಹಂಗಿನ ಅಗತ್ಯವಿಲ್ಲ. ಹೀಗಾಗಿ, ಹಾಲು ದಾನ ಮಾಡುವ ಮಾರ್ಗವನ್ನು ನಾನು ಹುಡುಕಿಕೊಂಡೆ” ಎನ್ನುತ್ತಾರೆ ಅಲೈಸ್ ಒಗ್ಲೆಟ್ರೀ.
2010ರಲ್ಲಿ ಅಲೈಸ್ ಒಗ್ಲೆಟ್ರೀ ಅವರು ತನ್ನ ಮಗ ಕೈಲ್‌ಗೆ ಜನ್ಮ ನೀಡಿದರು. ಈಗ ಆತನಿಗೆ 15 ವರ್ಷ. ಆ ಮಗು ಜನಿಸಿದ ಸಮಯದಲ್ಲಿ ಅಲೈಸ್ ಒಗ್ಲೆಟ್ರೀ ಅವರಿಗೆ ತಮ್ಮಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಎದೆ ಹಾಲು ಉತ್ಪತ್ತಿಯಾಗುತ್ತಿದೆ ಎಂಬುದಾಗಿ ವೈದ್ಯರು ತಿಳಿಸಿದ್ದರು. ಅಲೈಸ್ ಅವರಿಗೆ ಓರ್ವ ನರ್ಸ್ ಎದೆ ಹಾಲನ್ನು ದಾನ ಮಾಡುವಂತೆ ಸಲಹೆ ನೀಡಿದ್ದರು. ಅವರ ಸಲಹೆಯಂತೆ ಅಲೈಸ್ ಅಂದಿನಿಂದ (2010) ಎದೆ ಹಾಲು ದಾನ ಮಾಡಲು ಆರಂಭಿಸಿದರು.
ಈ ಲೇಖನ ಓದಿದ್ದೀರಾ?: ಸಿರಿಯಾದ ಡಮಾಸ್ಕಸ್ ಮೇಲೆ ಇಸ್ರೇಲ್ ದಾಳಿ ಮಾಡಿದ್ದರೂ, ಅದರ ನಿಜವಾದ ಗುರಿ ಟರ್ಕಿ!
ಈ ನಡುವೆ, ಅಲೈಸ್ ಇಬ್ಬರು ಮಕ್ಕಳಿಗೆ (ಕೇಜ್ ಮತ್ತು ಕೋರಿ) ಜನ್ಮ ನೀಡಿದ್ದಾರೆ. ಆದಾಗ್ಯೂ, ಅವರು ಎದೆ ಹಾಲು ದಾನ ಮಾಡುವುದನ್ನು ಮುಂದುವರೆಸಿದರು.
ಬಾಟಲಿಗಳಿಗೆ ಎದೆ ಹಾಲು ತುಂಬಿಸುವುದು ಕಠಿಣ ಕೆಲಸ. ಆದರೂ, ಅವರು ತಮ್ಮ ಎದೆ ಹಾಲು ದಾನವನ್ನು ನಿಲ್ಲಿಸಲಿಲ್ಲ. ರಾತ್ರಿಯೂ ಸೇರಿದಂತೆ ಪ್ರತಿ ಮೂರರಿಂದ ನಾಲ್ಕು ಗಂಟೆಗಳಿಗೊಮ್ಮೆ ಹಾಲನ್ನು ಬಾಟಲಿಗೆ ತುಂಬಿಸುತ್ತಿದ್ದರು. ತಾಯಂದಿರ ಹಾಲಿನ ಬ್ಯಾಂಕ್‌ಗೆ ಕಳಿಸುತ್ತಿದ್ದರು.
ನಿಯಮಿತವಾಗಿ ಹಾಲು ಉತ್ಪತ್ತಿಯಾಗಲು ಉತ್ತಮ ಪೌಷ್ಟಿಕ ಆಹಾರವನ್ನು ಸೇವಿಸುವುದು ಮತ್ತು ಕಟ್ಟುನಿಟ್ಟಾದ ಪಂಪಿಂಗ್ ದಿನಚರಿಯನ್ನು ಕಾಪಾಡಿಕೊಳ್ಳುವುದನ್ನು ಪಾಲಿಸಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು 2,645.58 ಲೀಟರ್ ಎದೆ ಹಾಲು ದಾನ ಮಾಡಿದ್ದಾರೆ.




