ಮಹಿಳೆಯೊಬ್ಬರು ಅಡುಗೆಗೆ ಬೆಳ್ಳಿಗೆ ಬಳಸುವ ಆ್ಯಸಿಡ್ ಬಳಕೆ ಮಾಡಿದ್ದು, ಆ ಆಹಾರವನ್ನು ಸೇವಿಸಿ ಆರು ಮಂದಿಯ ಪರಿಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆಯು ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಘಾಟಲ್‌ನಲ್ಲಿ ನಡೆದಿದೆ.
ಅಡುವೆ ಮಾಡುವ ವೇಳೆ, ಆ್ಯಸಿಡ್‌ಅನ್ನು ನೀರು ಎಂದು ಭಾವಿಸಿದ ಸಂಧು ಎಂಬ ಮಹಿಳೆ, ಅದನ್ನು ಬಳಸಿ ಅಡುಗೆ ಮಾಡಿದ್ದಾರೆ. ಆ್ಯಸಿಡ್ ಮಿಶ್ರಿತ ಊಟವನ್ನು ತಿಂದಿರುವ ಮೂವರು ಮಕ್ಕಳ ಸೇರಿ ಆರು ಮಂದಿ ಅಸ್ವಸ್ಥರಾಗಿದ್ದಾರೆ. ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದಗೂ, ರೋಗಿಗಳ ಆರೋಗ್ಯ ಇನ್ನೂ ಚೇತರಿಕೆ ಕಂಡಿಲ್ಲ ಎಂದು ವರದಿಯಾಗಿದೆ.
ಸಂಧು ಅವರ ಕುಟುಂಬಸ್ಥರು ಬೆಳ್ಳಿ ಆಭರಣ ತಯಾರಿಸುವ ವ್ಯವಹಾರ ನಡೆಸುತ್ತಿದ್ದಾರೆ. ಬೆಳ್ಳಿ ವಸ್ತುಗಳಿಗೆ ಆ್ಯಸಿಡ್ ಬಳಸುವುದರಿಂದ, ಅದನ್ನು ನೀರು ಹಾಕುವ ಪಾತ್ರೆಯಲ್ಲಿ ಹಾಕಿಟ್ಟಿದ್ದರು. ಅದನ್ನು ನೀರು ಎಂದು ಭಾವಿಸಿದ್ದ ಮಹಿಳೆ, ಆ್ಯಸಿಡ್‌ಅನ್ನು ಅಡುಗೆಗೆ ಹಾಕಿದ್ದಾರೆ. ಅಡುಗೆಗೆ ಆ್ಯಸಿಡ್ ಬಳಸಿರುವುದು ಅನಾರೋಗ್ಯಕ್ಕೆ ತುತ್ತಾಗುವವರೆಗೂ ಆಕೆಗೂ ಗೊತ್ತಿರಲಿಲ್ಲ ಎಂದು ತಿಳಿದುಬಂದಿದೆ.
ಆ್ಯಸಿಡ್ ಮಿಶ್ರಿತ ಊಟ ತಿಂದವರಿಗೆ ಹೊಟ್ಟೆ ನೋವು, ವಾಕರಿಕೆ ಹಾಗೂ ತಲೆತಿರುಗುವಿಕೆ ಸೇರಿದಂತೆ ನಾನಾ ಸಮಸ್ಯೆಗಳು ಕಾಣಿಸಿಕೊಂಡಿವೆ. ಬಳಿಕ, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿದಾಗ, ಆಹಾರದಲ್ಲಿ ಆ್ಯಸಿಡ್ ಮಿಶ್ರಣವಾಗಿದ್ದರಿಂದ ಅನಾರೋಗ್ಯ ಕಾಣಿಸಿಕೊಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.




