ಅತ್ಯಾಚಾರದ ಆರೋಪ ಎದುರಿಸುತ್ತಿರುವ ಜ್ಯೋತಿಷಿ ಅಶೋಕ್ ಖರಾತ್ ಜೊತೆಗಿನ ನಂಟು ಮತ್ತು ಫೋಟೋಗಳು ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
‘ಕ್ಯಾಪ್ಟನ್’ ಎಂದೇ ಪರಿಚಿತರಾಗಿದ್ದ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾದ ಖರಾತ್, ನಿವೃತ್ತಿಯ ಬಳಿಯ ಜ್ಯೋತಿಷಿಯಾಗಿ ನೆಲೆ ಕಂಡುಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡು, ತನಗೆ ದೈವಿಕ ಶಕ್ತಿ ಇರುವುದಾಗಿ ಹೇಳಿಕೊಂಡಿದ್ದ ಆತ, ಮಹಿಳೆಯೊಬ್ಬರ ಮೇಲೆ ಮೂರು ವರ್ಷಗಳಲ್ಲಿ ಹಲವು ಬಾರಿ ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣ ಸಂಬಂಧ ಆತನನ್ನು ನಾಸಿಕ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ ಪೊಲೀಸರು ಪೆನ್ ಡ್ರೈವ್‌ನಲ್ಲಿದ್ದ ಕೆಲವು ಆಕ್ಷೇಪಾರ್ಹ ದೃಶ್ಯಗಳು ಸೇರಿದಂತೆ ಒಟ್ಟು 58 ವಿಡಿಯೋಗಳನ್ನು ವಶಪಡಿಸಿಕೊಂಡಿದ್ದಾರೆ.
ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆಗಳನ್ನು ಮಾಡುವ ನೆಪದಲ್ಲಿ ಖರಾತ್ ಮಹಿಳೆಯರನ್ನು ಶೋಷಿಸುತ್ತಿದ್ದನು. ಅಲ್ಲದೆ ತನ್ನ ಪ್ರಭಾವ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗಿನ ಸಂಬಂಧವನ್ನು ಬಳಸಿಕೊಂಡು ಸಂತ್ರಸ್ತೆಯರು ಬಾಯಿ ಬಿಡದಂತೆ ದಬ್ಬಾಳಿಕೆ ನಡೆಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಖರಾತ್, ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ಮಿರ್ಗಾಂವ್‌ನಲ್ಲಿರುವ ಈಶಾನೇಶ್ವರ ಮಹಾದೇವ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷನೂ ಆಗಿದ್ದರು.
ಖರಾತ್ ಜೊತೆಗೆ ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ಇರುವ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಖರಾತ್‌ನ ಟ್ರಸ್ಟ್‌ನೊಂದಿಗೆ ನಂಟು ಹೊಂದಿದ್ದಾರೆನ್ನಲಾದ ಚಾಕಣಕರ್ ಅವರು, ಜ್ಯೋತಿಷಿಯು ಇತರ ಜನರೊಂದಿಗೆ ಮಾತನಾಡುತ್ತಿರುವಾಗ ಆತನಿಗೆ ಛತ್ರಿ ಹಿಡಿದು ನಿಂತಿರುವ ಫೋಟೋವೊಂದು ವೈರಲ್ ಆಗಿದೆ. ಈ ಬೆನ್ನಲ್ಲೇ, ವಿರೋಧ ಪಕ್ಷಗಳು ರೂಪಾಲಿ ಅವರನ್ನು ಪ್ರಶ್ನಿಸಲಾರಂಭಿಸಿದ್ದವು. ಇದೀಗ, ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.




