ಭಾರತೀಯ ಬಳಕೆದಾರರ ಮಾಹಿತಿಯನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ವಾಟ್ಸಾಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ನಮ್ಮ ದೇಶದ ಗೌಪ್ಯತಾ ನೀತಿಯೊಂದಿಗೆ ಆಟವಾಡಲು ನಿಮಗೆ ಅವಕಾಶ ನೀಡುವುದಿಲ್ಲ” ಎಂದು ಎಚ್ಚರಿಕೆ ನೀಡಿದೆ.
ಮಾಹಿತಿ ಹಂಚಿಕೆ ಮತ್ತು ಮಾರುಕಟ್ಟೆ ಪ್ರಭುತ್ವಕ್ಕೆ ಸಂಬಂಧಿಸಿದಂತೆ ಜನವರಿ 2025ರ ಎನ್‌ಸಿಎಲ್‌ಎಟಿ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ನೇತೃತ್ವದ ಪೀಠ, ಅಮೆರಿಕದ ದಿಗ್ಗಜ ತಂತ್ರಜ್ಞಾನ ಕಂಪನಿಗೆ ಕಟು ಶಬ್ದಗಳಲ್ಲಿ ಎಚ್ಚರಿಸಿತು.
ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿಗಳು, “ನಮ್ಮ ದೇಶದ ಜನರ ಗೌಪ್ಯತೆಯ ಜೊತೆ ಚೆಲ್ಲಾಟವಾಡಲು ನಾವು ಬಿಡುವುದಿಲ್ಲ. ನಮ್ಮ ಡೇಟಾದ ಒಂದೇ ಒಂದು ಅಂಕಿಯನ್ನೂ ನೀವು ಹಂಚಿಕೊಳ್ಳುವಂತಿಲ್ಲ. ಒಂದು ವೇಳೆ ದೇಶದ ಕಾನೂನುಗಳನ್ನು ಪಾಲಿಸಲು ಸಾಧ್ಯವಾಗದಿದ್ದರೆ, ನೀವು ಭಾರತವನ್ನು ತೊರೆಯಬಹುದು” ಎಂದು
ಹೇಳಿದರು.
ಬಳಕೆದಾರರ ಒಪ್ಪಿಗೆಯ ಬಗ್ಗೆ ಮೆಟಾ ನೀಡಿದ ಸಮಜಾಯಿಷಿಯನ್ನು ತಳ್ಳಿಹಾಕಿದ ಕೋರ್ಟ್, “ಇದು ಸಿಂಹ ಮತ್ತು ಕುರಿಮರಿಯ ನಡುವಿನ ಆಯ್ಕೆಯಂತಿದೆ. ಬೀದಿಬದಿಯ ವ್ಯಾಪಾರಿಗಳು ಮತ್ತು ಗ್ರಾಮೀಣ ಭಾಗದ ಜನರಿಗೆ ನಿಮ್ಮ ಸಂಕೀರ್ಣವಾದ ತಾಂತ್ರಿಕ ನಿಯಮಗಳು ಅರ್ಥವಾಗುವುದಿಲ್ಲ. ನೀವು ಮಾಹಿತಿ ಹಂಚಿಕೊಳ್ಳುವುದಿಲ್ಲ ಎಂದು ಲಿಖಿತ ಮುಚ್ಚಳಿಕೆ ನೀಡಿ, ಇಲ್ಲವೇ ನಾವು ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತೇವೆ” ಎಂದು ಎಚ್ಚರಿಸಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ| ₹100 ತೆರಿಗೆಯಲ್ಲಿ ₹5 ಕೂಡ ವಾಪಸು ಸಿಗ್ತಿಲ್ಲ; ರಾಜ್ಯಕ್ಕೆ ಮೋದಿ ಮುಂದುವರೆಸಿದ ಅಗಾಧ ಅನ್ಯಾಯ!
ಬಳಕೆದಾರರ ಖಾಸಗಿ ಮಾಹಿತಿಯನ್ನು ವಾಣಿಜ್ಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂಬುದಕ್ಕೆ ಉದಾಹರಣೆ ನೀಡಿದ ಪೀಠ, “ಒಬ್ಬ ವ್ಯಕ್ತಿ ವೈದ್ಯರೊಂದಿಗೆ ಖಾಸಗಿಯಾಗಿ ಚಾಟ್ ಮಾಡಿದ ಕೆಲವೇ ಕ್ಷಣಗಳಲ್ಲಿ, ಅವರಿಗೆ ಔಷಧಿಯ ಜಾಹೀರಾತುಗಳು ಮೊಬೈಲ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದರರ್ಥ ನೀವು ಜನರ ವರ್ತನೆಯನ್ನು ಟ್ರ್ಯಾಕ್ ಮಾಡುತ್ತಿದ್ದೀರಿ ಮತ್ತು ಅದನ್ನು ಹಣಗಳಿಸಲು ಬಳಸುತ್ತಿದ್ದೀರಿ” ಎಂದು ಆತಂಕ ವ್ಯಕ್ತಪಡಿಸಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಸಿಸಿಐ ಪರ ವಕೀಲರು ವಾದ ಮಂಡಿಸಿ, “ಮಾಹಿತಿಯು ಎನ್‌ಕ್ರಿಪ್ಟ್ ಆಗಿದ್ದರೂ, ಮೆಟಾ ಡೇಟಾವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಡಿಪಿಡಿಪಿ ಕಾಯ್ದೆಯಡಿ ಬಳಕೆದಾರರ ಹಕ್ಕುಗಳನ್ನು ರಕ್ಷಿಸಬೇಕಿದೆ” ಎಂದು ಪ್ರತಿಪಾದಿಸಿದರು.
ಈ ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಲಾಗಿದ್ದು, ಜನವರಿ 9 ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದ್ದು, ಡೇಟಾ ಗೌಪ್ಯತೆ ಮತ್ತು ವರ್ತನೆಯ ವಿಶ್ಲೇಷಣೆಯ ಬಗ್ಗೆ ವಿವರವಾದ ಉತ್ತರ ನೀಡಲು ಕೋರ್ಟ್ ಸೂಚಿಸಿದೆ.





