ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಯುಎಇ (UAE) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು, ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಮುಕ್ತ ಸಂಚಾರವನ್ನು ಖಾತ್ರಿಪಡಿಸಿಕೊಳ್ಳುವ ಕುರಿತು ಮಾತುಕತೆಗಳು ನಡೆದಿವೆ.
ತಮ್ಮ ಸಂಭಾಷಣೆಯ ಸಂದರ್ಭದಲ್ಲಿ, ಮೋದಿ ಅವರು ಗಲ್ಫ್ ರಾಷ್ಟ್ರದ ಮೇಲಿನ ಎಲ್ಲ ದಾಳಿಗಳನ್ನು ಬಲವಾಗಿ ಖಂಡಿಸಿದ್ದಾರೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ, ಭದ್ರತೆ ಹಾಗೂ ಸ್ಥಿರತೆಯನ್ನು ಶೀಘ್ರವಾಗಿ ಮರುಸ್ಥಾಪಿಸಲು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲು ಯುಎಇ ನಾಯಕರೊಂದಿಗೆ ಅವರು ಸಹಮತ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.
ಮಾತುಕತೆಯ ಕುರಿತು ಟ್ವೀಟ್ ಮಾಡಿರುವ ಮೋದಿ, “ನನ್ನ ಸಹೋದರ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ಮಾತನಾಡಿದೆ. ಈದ್ ಶುಭಾಶಯ ಕೋರಿದೆ. ನಾವು ಪಶ್ಚಿಮ ಏಷ್ಯಾದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದೇವೆ. ಯುಎಇ ಮೇಲೆ ನಡೆದ ದಾಳಿಗಳು ಅಮಾಯಕ ಪ್ರಾಣಹಾನಿ ಮತ್ತು ನಾಗರಿಕ ಮೂಲಸೌಕರ್ಯಗಳಿಗೆ ಹಾನಿ ಉಂಟುಮಾಡಿವೆ. ಇಂತಹ ದಾಳಿಗಳನ್ನು ಭಾರತವು ಬಲವಾಗಿ ಖಂಡಿಸುತ್ತದೆ ಎಂದು ನಾನು ಪುನರುಚ್ಚರಿಸಿದ್ದೇನೆ” ಎಂದು ಬರೆದಿದ್ದಾರೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಮತ್ತು ಮುಕ್ತ ಸಂಚಾರದ ಪ್ರಾಮುಖ್ಯತೆಯ ಬಗ್ಗೆ ತಾವಿಬ್ಬರೂ ಒಪ್ಪಿಕೊಂಡಿರುವುದಾಗಿ ಮೋದಿ ತಿಳಿಸಿದ್ದಾರೆ. “ಈ ಪ್ರದೇಶದಲ್ಲಿ ಶಾಂತಿ, ಭದ್ರತೆ ಹಾಗೂ ಸ್ಥಿರತೆಯ ಶೀಘ್ರ ಮರುಸ್ಥಾಪನೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಹೇಳಿದ್ದಾರೆ.




