ಸಂಘರ್ಷವನ್ನು ಸಕಾಲಿಕವಾಗಿ ಹೇಗೆ ಕೊನೆಗೊಳಿಸಬೇಕು ಎಂಬುದನ್ನು ಜಗತ್ತು ಆಪರೇಷನ್ ಸಿಂಧೂರದಿಂದ ಕಲಿಯಬೇಕು. ಇತರ ದೇಶಗಳಲ್ಲಿ ಹಲವು ವರ್ಷಗಳಿಂದ ಯುದ್ಧಗಳು ನಡೆಯುತ್ತಿದೆ. ಅವುಗಳು ವಸ್ತುನಿಷ್ಠತೆಯನ್ನು ಹೊಂದಿಲ್ಲ. ಅಹಂನಿಂದಾಗಿ ಯುದ್ಧಗಳು ನಡೆಯುತ್ತಿದೆ ಎಂದು ಭಾರತೀಯ ವಾಯುಪಡೆಯ ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ಹೇಳಿದ್ದಾರೆ.
ಭಾರತ ಶಕ್ತಿಯ ರಕ್ಷಣಾ ಚಿಂತಕರ ಚಾವಡಿ ಆಯೋಜಿಸಿದ್ದ ಭಾರತ ರಕ್ಷಣಾ ಸಮಾವೇಶ 2025ರಲ್ಲಿ ಮಾತನಾಡಿದ ಅವರು, “ಆಪರೇಷನ್ ಸಿಂಧೂರದಿಂದ ಸಂಘರ್ಷವನ್ನು ಯಾವ ರೀತಿ ಕೊನೆಗೊಳಿಸಬೇಕು ಎಂಬುದನ್ನು ಕಲಿಯಬಹುದು. ಗುರಿಯ ಆಯ್ಕೆ ಮತ್ತು ನಿರ್ವಹಣೆ ವಿಚಾರದಲ್ಲೇ ಜಗತ್ತು ಹಾಳಾಗುತ್ತಿದೆ. ಇತರೆಡೆ ತಮ್ಮದೇ ಆದ ಉದ್ದೇಶಗಳನ್ನು ಮರೆತುಬಿಡಲಾಗುತ್ತಿದೆ. ಯಾವ ಉದ್ದೇಶದಿಂದ, ಹೇಗೆ ಯುದ್ಧ ಪ್ರಾರಂಭವಾಯಿತು, ಈಗ ಎಲ್ಲಿ ತಲುಪಿದ್ದಾರೆ ಎಂಬುದನ್ನು ಮರೆತುಬಿಡುತ್ತಾರೆ. ಯುದ್ಧ ಎಂಬುದು ಅಹಂ ಅಥವಾ ಸ್ವಾಭಿಮಾನದ ಸಂಗತಿಯಾಗಿದೆ” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಆಪರೇಷನ್ ಸಿಂಧೂರ್ – ಇನ್ನೂ ಉತ್ತರಿಸದ ಪ್ರಶ್ನೆಗಳು
“ಆದರೆ ಆಪರೇಷನ್ ಸಿಂಧೂರ ಸಮಯದಲ್ಲಿ ಹಾಗಾಗಲಿಲ್ಲ. ಈ ಸಮಯದಲ್ಲಿ ಭಾರತೀಯ ಸೇನೆ ಮತ್ತು ವಾಯುಪಡೆ ಮೇ 7ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿತು. ಮುಂದಿನ ನಾಲ್ಕು ದಿನಗಳಲ್ಲಿ ಸಂಘರ್ಷ ನಡೆಯಿತು. ಪಾಕಿಸ್ತಾನದ ಕಮಾಂಡರ್‌ಗಳು ಅಂತಿಮವಾಗಿ ಮೇ 10ರಂದು ಕದನ ವಿರಾಮಕ್ಕಾಗಿ ಮನವಿ ಮಾಡಿದರು. ಭಾರತ ಒಪ್ಪಿಕೊಂಡಿತು. ಸಂಘರ್ಷ ಕೊನೆಗೊಂಡಿತು” ಎಂದು ನೆನಪಿಸಿಕೊಂಡರು.
“ನಮ್ಮ ಉದ್ದೇಶ ಬಹಳ ಸ್ಪಷ್ಟವಾಗಿತ್ತು ಮತ್ತು ಅದನ್ನು ಮೊದಲ ದಿನವೇ ಸಾಧಿಸಲಾಯಿತು. ನಾವು ಮೊದಲ ದಿನವೇ ಕದನ ವಿರಾಮಕ್ಕಾಗಿ ಮಾತನಾಡಿದ್ದೆವು, ಆದರೆ ಅದನ್ನು ಒಪ್ಪಲಿಲ್ಲ. ಅದಾದ ಬಳಿಕ ಎದುರಾಳಿ(ಪಾಕಿಸ್ತಾನ) ಬಂದು ನಿಲ್ಲಿಸಲು ಬಯಸುವುದಾಗಿ ಹೇಳಿತು. ಅದು ಉತ್ತಮ ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದರು.
“ಸಂಘರ್ಷವನ್ನು ಸಕಾಲಿಕವಾಗಿ ನಿಲ್ಲಿಸದಿದ್ದರೆ, ಅದು ಅಜ್ಞಾತ ದಿಕ್ಕನ್ನು ತೆಗೆದುಕೊಳ್ಳಬಹುದಿತ್ತು. ಮೂರುವರೆ ದಿನಗಳಲ್ಲಿ, ಸುಮಾರು 85 ಗಂಟೆಗಳಲ್ಲಿ, ನಾವು ಸಂಘರ್ಷವನ್ನು ಕೊನೆಗೊಳಿಸಲು ಸಾಧ್ಯವಾಯಿತು. ಅದರ ನಂತರ ಅದು ಎಲ್ಲಿಗೆ ಹೋಗುತ್ತಿತ್ತು ಎಂದು ನಮಗೆ ತಿಳಿದಿಲ್ಲ. ಅದು ಜನರು ಅರಿತುಕೊಂಡಿಲ್ಲ” ಎಂದು ಹೇಳಿದರು.
22 ಭಾರತೀಯರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಹತರಾಗಿದ್ದಾರೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಒಪ್ಪಂದ ಮಾಡಿಕೊಂಡಿರುವುದಾಗಿ ಘೋಷಿಸಿದ್ದಾರೆ. ಅಮೆರಿಕದ ಮಧ್ಯಸ್ಥಿಕೆ, ವ್ಯಾಪಾರ ನಿಲ್ಲಿಸುವ ಬೆದರಿಕೆಯಿಂದಾಗಿ ಭಾರತ ಯುದ್ಧ ನಿಲ್ಲಿಸಿದೆ ಎಂದು ಹೇಳಿಕೊಳ್ಳುತ್ತಾ ಬರುತ್ತಿದ್ದಾರೆ. ಈ ವಿಚಾರವನ್ನು ವಿಪಕ್ಷಗಳು ಟೀಕಿಸುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಈ ಬಗ್ಗೆ ಸ್ಪಷ್ಟನೆ ನೀಡದಿರುವುದು ಟೀಕೆಗೆ ಕಾರಣವಾಗಿದೆ.





