ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ರಾಯಿಟರ್ಸ್‌ನ ಎಕ್ಸ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದ್ದು, ಕೇಂದ್ರ ಸರ್ಕಾರ ಎಕ್ಸ್ ಸಂಸ್ಥೆಯಿಂದ ಆಗಿರುವ ತಪ್ಪು ಇದು ಎಂದು ಹೇಳಿದೆ. ಆದರೆ ಭಾರತದಲ್ಲಿ ಸರ್ಕಾರ ‘ಪತ್ರಿಕಾ ಸೆನ್ಸಾರ್‌ಶಿಪ್’ ಮಾಡುತ್ತಿದೆ ಎಂದು ಎಕ್ಸ್ ಹೇಳಿದೆ. ಸರ್ಕಾರ ಮಾತ್ರ ಇದರಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಹೇಳಿಕೊಂಡಿದೆ.
“ರಾಯಿಟರ್ಸ್ ಅನ್ನು ನಿರ್ಬಂಧಿಸಿರುವ ವಿಚಾರದಲ್ಲಿ ನಮ್ಮ ಸರ್ಕಾರ ಯಾವುದೇ ಪಾತ್ರ ಹೊಂದಿಲ್ಲ. ಸಮಸ್ಯೆಯನ್ನು ಪರಿಹರಿಸಲು ನಾವು ಎಕ್ಸ್‌ನೊಂದಿಗೆ ಸಂಪರ್ಕದಲ್ಲಿದ್ದೇವೆ, ಕಾರ್ಯ ನಿರ್ವಹಿಸುತ್ತಿದ್ದೇವೆ” ಎಂದು ಸರ್ಕಾರಿ ವಕ್ತಾರರು ಭಾನುವಾರ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಇಸ್ರೇಲ್‌ನಿಂದ ರಾಯಿಟರ್ಸ್ ಪತ್ರಕರ್ತನ ಹತ್ಯೆ: ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ದೂರು
ಸರ್ಕಾರವು ಜುಲೈ 3ರಂದು ರಾಯಿಟರ್ಸ್ ಸೇರಿದಂತೆ ದೇಶದಲ್ಲಿ 2,355 ಖಾತೆಗಳನ್ನು ‘ಸಕಾರಣವನ್ನು ಒದಗಿಸದೆ ಒಂದು ಗಂಟೆಯೊಳಗೆ’ ನಿರ್ಬಂಧಿಸಲು ಆದೇಶಿಸಿದೆ ಎಂದು ಎಕ್ಸ್ ಹೇಳಿದೆ. ಆದೇಶವನ್ನು ಪಾಲಿಸದಿದ್ದರೆ ದಂಡ ವಿಧಿಸಬಹುದಾದ ಕಾರಣ ಎಕ್ಸ್‌ನ ಆದೇಶವನ್ನು ಪಾಲಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ಎಕ್ಸ್ ಹೇಳಿದೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
“ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಒಂದು ಗಂಟೆಯೊಳಗೆ ಯಾವುದೇ ಸಮರ್ಥನೆಯನ್ನು ಒದಗಿಸದೆ ತಕ್ಷಣದ ಕ್ರಮ ಕೈಗೊಳ್ಳುವಂತೆ ತಿಳಿಸಿತ್ತು. ಮುಂದಿನ ಸೂಚನೆ ಬರುವವರೆಗೆ ಖಾತೆಗಳನ್ನು ನಿರ್ಬಂಧಿಸುವಂತೆ ಹೇಳಿತ್ತು. ಸಾರ್ವಜನಿಕ ಆಕ್ರೋಶದ ನಂತರ, ಸರ್ಕಾರವು ಎಕ್ಸ್‌ಗೆ ರಾಯಿಟರ್ಸ್ ಮತ್ತು ರಾಯಿಟರ್ಸ್ ವರ್ಲ್ಡ್ ಅನ್ನು ನಿರ್ಬಂಧಿಸುವಂತೆ ವಿನಂತಿಸಿದೆ” ಎಂದು ಎಕ್ಸ್ ಹೇಳಿದೆ.
“ಈ ನಿರ್ಬಂಧಿಸುವ ಆದೇಶಗಳಿಂದಾಗಿ ಭಾರತದಲ್ಲಿ ನಡೆಯುತ್ತಿರುವ ಪತ್ರಿಕಾ ಸೆನ್ಸಾರ್‌ಶಿಪ್ ಬಗ್ಗೆ ನಾವು ತೀವ್ರ ಕಳವಳ ವ್ಯಕ್ತಪಡಿಸುತ್ತೇವೆ. ಎಕ್ಸ್ ಲಭ್ಯವಿರುವ ಎಲ್ಲಾ ಕಾನೂನು ಆಯ್ಕೆಗಳನ್ನು ಪರಿಶೀಲಿಸುತ್ತಿದೆ. ಪೀಡಿತ ಬಳಕೆದಾರರು ನ್ಯಾಯಾಲಯಗಳ ಮೂಲಕ ಕಾನೂನು ಪರಿಹಾರಗಳನ್ನು ಅನುಸರಿಸಬೇಕೆಂದು ನಾವು ಒತ್ತಾಯಿಸುತ್ತೇವೆ” ಎಂದೂ ತಿಳಿಸಿದೆ.
ಖಾತೆಗಳನ್ನು ನಿರ್ಬಂಧಿಸುವ ಆದೇಶಗಳ ಕುರಿತಾಗಿ ಎಕ್ಸ್ ಆಗಾಗ್ಗೆ ಸರ್ಕಾರವನ್ನು ಟೀಕಿಸಿದೆ. ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದೆ. ಕಾನೂನುಬಾಹಿರ ನಿರ್ಬಂಧವನ್ನು ಹೇರಲು ಸರ್ಕಾರ ಮಾಹಿತಿ ತಂತ್ರಜ್ಞಾನ ಕಾನೂನುಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿದೆ.





